ಸಾರಾಂಶ
ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುತ್ತಿದ್ದು, ಅಪಾಯದ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಜಲಾಶಯದ ೪ ಕ್ರೆಸ್ಟ್ ಗೇಟ್‌ಗಳ ಮೂಲಕ ಸುಮಾರು ೬ ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುಗಡೆಗೊಳಿಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ, ಭದ್ರಾವತಿ/ತರೀಕೆರೆ
ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುತ್ತಿದ್ದು, ಅಪಾಯದ ಮಟ್ಟ ತಲುಪಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಜಲಾಶಯದ ೪ ಕ್ರೆಸ್ಟ್ ಗೇಟ್‌ಗಳ ಮೂಲಕ ಸುಮಾರು ೬ ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುಗಡೆಗೊಳಿಸಲಾಗುತ್ತಿದೆ. ಇದರಿಂದಾಗಿ ಭದ್ರಾನದಿ ಮೈತುಂಬಿ ಹರಿಯುತ್ತಿದ್ದು, ಜಲಾಶಯದಿಂದ ಧುಮ್ಮಿಕ್ಕುವ ನೀರಿನ ಸೌಂದರ್ಯ ಕಣ್ತುಂಬಿಕೊಳ್ಳಲು ಜನರು ಡ್ಯಾಂ ಬಳಿ ಧಾವಿಸುತ್ತಿದ್ದಾರೆ.ಜಲಾಶಯದ ವ್ಯಾಪ್ತಿಯಲ್ಲಿ ಮಳೆ ಆಗುತ್ತಿರುವ ಹಿನ್ನೆಲೆ ಗರಿಷ್ಠ ೧೮೬ ಅಡಿ ಎತ್ತರದ ಜಲಾಶಯದಲ್ಲಿ ಮಂಗಳವಾರ ಬೆಳಗ್ಗೆ ೬ರ ಸಮಯಕ್ಕೆ ೧೮೩.೨ ಅಡಿ ನೀರು ಸಂಗ್ರಹವಾಗಿದೆ. ಪೂರ್ಣ ಭರ್ತಿಯಾಗಲು ಕೇವಲ ೨.೮ ಅಡಿ ಬಾಕಿ ಉಳಿದಿದ್ದು, ಜಲಾಶಯ ಅಪಾಯದಮಟ್ಟ ತಲುಪಿರುವ ಹಿನ್ನೆಲೆ ಮುನ್ನಚ್ಚರಿಕೆಯಾಗಿ ೬ ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುಗಡೆಗೊಳಿಸಲಾಗುತ್ತಿದೆ.
ಪ್ರಸ್ತುತ ಜಲಾಶಯ ೨೦,೭೭೪ ಕ್ಯುಸೆಕ್ ಒಳಹರಿವು ಹೊಂದಿದ್ದು, ಈಗಾಗಲೇ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸಲಾಗುತ್ತಿದೆ. ಇದು ರೈತರಲ್ಲಿ ಖುಷಿ ತಂದಿದೆ. ಭದ್ರಾ ಬಲಡಂದೆ ನಾಲೆಗೆ ೪೫೮ ಕ್ಯುಸೆಕ್ ಹಾಗೂ ಎಡದಂಡೆ ನಾಲೆಗೆ ೮೩ ಕ್ಯುಸೆಕ್ ಹರಿಸಲಾಗುತ್ತಿದ್ದು, ಇದು ಹೆಚ್ಚಳವಾಗುವ ಸಾಧ್ಯತೆ ಇದೆ.ಕಳೆದ ವರ್ಷ ಜಲಾಶಯದ ನೀರಿನಮಟ್ಟ ೧೬೧.೬ ಅಡಿ ಇದ್ದು, ಈ ಬಾರಿ ೨೨ ಅಡಿ ನೀರು ಸಂಗ್ರಹವಾಗಿದೆ. ಜುಲೈ ಅಂತ್ಯದಲ್ಲಿ ಜಲಾಶಯ ಭರ್ತಿ ಆಗಿರುವುದು ಈ ಭಾಗದ ಜನರಲ್ಲಿ ಸಂತಸ ಮೂಡಿಸಿದೆ.
- - -