1ನೇ ತರಗತಿಗೆ ದಾಖಲಾಗಲು ಜೂ.1ಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮ : ಪೋಷಕರ ವಿರೋಧ

| N/A | Published : Mar 02 2025, 01:21 AM IST / Updated: Mar 02 2025, 11:02 AM IST

ಸಾರಾಂಶ

ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ದಾಖಲಾಗಲು ಜೂ.1ಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮದಿಂದ 2019ರ ಜೂನ್‌ನಿಂದ ಡಿಸೆಂಬರ್‌ವರೆಗೆ ಹುಟ್ಟಿದ ಮತ್ತು 2022ರಲ್ಲಿ ಪ್ರಿಕೆಜಿ, ಮಾಂಟೆಸ್ಸರಿಗೆ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು,  ನಿಯಮ ಸಡಿಲಿಸಬೇಕು ಎಂದು  ಒತ್ತಾಯಿಸಿದ್ದಾರೆ.

 ಬೆಂಗಳೂರು : ಪ್ರಸಕ್ತ ಶೈಕ್ಷಣಿಕ ವರ್ಷದಿಂದ 1ನೇ ತರಗತಿಗೆ ದಾಖಲಾಗಲು ಜೂ.1ಕ್ಕೆ 6 ವರ್ಷ ತುಂಬಿರಬೇಕು ಎಂಬ ನಿಯಮದಿಂದ 2019ರ ಜೂನ್‌ನಿಂದ ಡಿಸೆಂಬರ್‌ವರೆಗೆ ಹುಟ್ಟಿದ ಮತ್ತು 2022ರಲ್ಲಿ ಪ್ರಿಕೆಜಿ, ಮಾಂಟೆಸ್ಸರಿಗೆ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸರ್ಕಾರ ನಿಯಮ ಸಡಿಲಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೋಷಕರಾದ ಡಾ.ಸಾಗರ್‌ ಶ್ರೀನಿವಾಸ್‌ ಕೆ.ಸೇರಿ ಇತರರು, ರಾಜ್ಯ ಸರ್ಕಾರ 2018ರಲ್ಲಿ ಒಂದನೇ ತರಗತಿ ಪ್ರವೇಶ ವಯಸ್ಸನ್ನು 5 ವರ್ಷ 5 ತಿಂಗಳಿಗೆ ನಿಗದಿಪಡಿಸಿತ್ತು. ಪೂರ್ವ ಪ್ರಾಥಮಿಕ ಶಿಕ್ಷಣ 2.5 ವರ್ಷದಿಂದ ಪ್ರಾರಂಭಿಸಲು ಅವಕಾಶ ಕೊಟ್ಟಿತ್ತು. ಆದರೆ 2022ರ ಡಿಸೆಂಬರ್‌ನಲ್ಲಿ 1ನೇ ತರಗತಿ ಪ್ರವೇಶವನ್ನು 6 ವರ್ಷಕ್ಕೆ ನಿಗದಿ ಮಾಡಲಾಯಿತು. ಈ ವೇಳೆ 2020, 2021ರಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ಎರಡು ವರ್ಷ ಸಡಿಲಿಕೆ ನೀಡಿ 1ನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಕೊಡಲಾಯಿತು. ಆದರೆ, 2022ರಲ್ಲಿ ಪ್ರವೇಶ ಪಡೆದ 6 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಈ ಸಡಿಲಿಕೆ ನೀಡಲಾಗಿಲ್ಲ. ಇದರಿಂದ 2022ರಲ್ಲಿ ಪ್ರಿಕೆಜಿ, ಮಾಂಟೆಸ್ಸರಿಗೆ ಸೇರಿದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಪ್ರಾಥಮಿಕ ಪೂರ್ವ ಶಿಕ್ಷಣ ಮುಗಿಸಿದರೂ 1ನೇ ತರಗತಿಗೆ ಸೇರಲು ಸಾಧ್ಯವಾಗುತ್ತಿಲ್ಲ ಎಂದರು.

ಇದೇ ತರಗತಿಯಲ್ಲಿದ್ದ ಹಿರಿಯ ಮಕ್ಕಳು ಮುಂದೆ 1ನೇ ತರಗತಿಗೆ ಪ್ರವೇಶ ಪಡೆಯುತ್ತಾರೆ. ಆದರೆ, ನಿಗದಿತ ವಯಸ್ಸಾಗದ ಕಾರಣ ಈ ಮಕ್ಕಳು ಒಂದೋ ಮನೆಯಲ್ಲಿರಬೇಕು ಅಥವಾ ಪುನಃ ಯುಕೆಜಿಗೆ ಹೋಗಬೇಕಾಗಿದೆ. ಮಕ್ಕಳು ಪುನಃ ಕಲಿತಿದ್ದನ್ನೇ ಕಲಿಯಲು ಇಷ್ಟಪಡುವುದಿಲ್ಲ. ಹೀಗಾಗಿ 2019ರ ಜೂನ್‌ನಿಂದ ಡಿಸೆಂಬರ್‌ವರೆಗೆ ಹುಟ್ಟಿದ ಮತ್ತು 2022ರಲ್ಲಿ ಪ್ರಿಕೆಜಿ, ಮಾಂಟೆಸ್ಸರಿಗೆ ಸೇರಿದ ಮಕ್ಕಳಿಗೆ ಮುಂದಿನ ತರಗತಿಗೆ ದಾಖಲಾಗಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಇದೇ ಮಾರ್ಚ್‌ ತಿಂಗಳಲ್ಲಿ ಬಹುತೇಕ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶ ಅವಕಾಶದ ಅವಧಿ ಮುಗಿಯಲಿದೆ. ಹೀಗಾಗಿ ತ್ವರಿತವಾಗಿ ಸರ್ಕಾರ ಕ್ರಮ ಕೈಗೊಂಡು ಮಕ್ಕಳಿಗೆ ಸಡಿಲಿಕೆ ನೀಡಬೇಕು ಎಂದರು.