ಜಿಲ್ಲಾದ್ಯಂತ 60 ದಿನ ತಂಬಾಕು ಮುಕ್ತ ಯುವ ಅಭಿಯಾನ

| Published : Oct 09 2024, 01:36 AM IST

ಸಾರಾಂಶ

ತಂಬಾಕು ಮುಕ್ತ ಯುವ ಅಭಿಯಾನವನ್ನು ಧಾರವಾಡ ಜಿಲ್ಲಾದ್ಯಂತ 60 ದಿನ ಹಮ್ಮಿಕೊಂಡು 160 ಶಾಲೆ ಹಾಗೂ 20 ಗ್ರಾಮಗಳನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವ ಗುರಿ ಹೊಂದಲಾಗಿದೆ.

ಧಾರವಾಡ:

ಮಕ್ಕಳು, ವಿದ್ಯಾರ್ಥಿಗಳು, ಯುವಕರು ತಂಬಾಕು ಉತ್ಪನ್ನ ಹಾಗೂ ಬೀಡಿ-ಸಿಗರೇಟ ಸೇವನೆಗೆ ಅಂಟಿಕೊಳ್ಳದಂತೆ ನಗರ, ಗ್ರಾಮಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜರುಗಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಂಬಾಕು ಮುಕ್ತ ಯುವ ಅಭಿಯಾನವನ್ನು ಜಿಲ್ಲಾದ್ಯಂತ 60 ದಿನ ಆಚರಿಸಲಾಗುವುದು. 160 ಶಾಲೆ ಹಾಗೂ 20 ಗ್ರಾಮಗಳನ್ನು ಸಂಪೂರ್ಣ ತಂಬಾಕು ಮುಕ್ತಗೊಳಿಸುವ ಗುರಿ ಹೊಂದಲಾಗಿದ್ದು, ವಿವಿಧ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಯುವ ಸಮೂಹ ಹೆಚ್ಚು ತಂಬಾಕು ಸೇವನೆ, ಬೀಡಿ, ಸಿಗರೇಟು, ಗುಟ್ಕಾ ಚಟಗಳಿಗೆ ಅಂಟಿಕೊಳ್ಳುತ್ತಿದ್ದು ಗ್ರಾಮಸಭೆ, ಪಾಲಕರ ಸಭೆ, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಸಹಯೋಗ ಹಾಗೂ ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶೇಷ ಅಭಿಯಾನ ಹಮ್ಮಿಕೊಳ್ಳುವಂತೆ ತಿಳಿಸಿದರು.

ದಾಳಿ ಹೆಚ್ಚಿಸಿ:

ಜಿಲ್ಲಾದ್ಯಂತ ತನಿಖಾ ದಾಳಿ ಹೆಚ್ಚಿಸಬೇಕು. ತಂಬಾಕು ಮುಕ್ತ ಬಾರ್‌-ರೆಸ್ಟೋರೆಂಟ್‌, ನೋ ಸ್ಮೋಕಿಂಗ್‌ ಕುರಿತಂತೆ ಅಬಕಾರಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ರಸ್ತೆ, ಮಾರುಕಟ್ಟೆ ಸ್ಥಳಗಳಲ್ಲಿ ಸಿಗರೇಟು, ಬೀಡಿ ಸೇವಿಸದಂತೆ ಎಲ್ಲೆಡೆ ಫಲಕ, ಕರಪತ್ರ ಲಗತ್ತಿಸಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.

ರಾಜ್ಯ ಸರ್ಕಾರ ಹುಕ್ಕಾ ಬಾರ್ ನಿರ್ಬಂಧಗೊಳಿಸಿದೆ. ಕೆಲವೆಡೆ ಅನಧಿಕೃತವಾಗಿ ಕಂಡು ಬಂದ ಮಾಹಿತಿಯನ್ನು ಆರೋಗ್ಯ ಅಧಿಕಾರಿ ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಅಬಕಾರಿ ಇಲಾಖೆ, ಪೊಲೀಸ್ ಅಧಿಕಾರಿ ಸಹಕಾರದೊಂದಿಗೆ ಆರೋಗ್ಯ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ಪ್ರಕರಣ ದಾಖಲಿಸುವಂತೆ ಸೂಚಿಸಲಾಯಿತು.

ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ ಮಾಲೀಕರು ಕಡ್ಡಾಯವಾಗಿ ಮಹಾನಗರ ಪಾಲಿಕೆಯಿಂದ ₹ 500 ಭರಿಸಿ ಅನುಮತಿ ಪಡೆಯ ತಕ್ಕದ್ದು, ಇದರ ಬಗ್ಗೆ ಪಾಲಿಕೆ ಅಧಿಕಾರಿಗಳು, ವ್ಯಾಪಾರಸ್ಥರು ಜತೆಗೆ ಆರೋಗ್ಯ ಅಧಿಕಾರಿಗಳು ಸಭೆ ನಡೆಸಿ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ, ಡಾ. ಸುಜಾತಾ ಹಸವಿಮಠ, ಡಾ. ಪರಶುರಾಮ ಎಸ್.ಕೆ., ಪಶುಸಂಗೋಪನೆ ಉಪ ನಿರ್ದೇಶಕ ಡಾ. ರವಿ ಸಾಲಿಗೌಡರ, ಅಬಕಾರಿ ಆಯುಕ್ತ ರಮೇಶ ಕುಮಾರ ಎಚ್ ಇದ್ದರು.