ಕೊಪ್ಪಳ: ಭಾಷಾ ಅಧಿನಿಯಮದಂತೆ ಜಿಲ್ಲೆಯಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಅದರಂತೆ ಜಿಲ್ಲೆಯಲ್ಲಿನ ಎಲ್ಲ ಅಂಗಡಿ ಮುಂಗಟ್ಟು, ಸಂಸ್ಥೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷಾ ಬಳಕೆ ಕಡ್ಡಾಯ. ತಪ್ಪಿದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜರುಗಿದ ಕನ್ನಡ ಅನುಷ್ಠಾನದ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ಭಾಷಾ ನೀತಿ ಅನುಷ್ಠಾನದಲ್ಲಿ ಜನರು ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿದೆ. ಈ ಪ್ರಾಧಿಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಹಾಗೂ ತಿದ್ದುಪಡಿ ಅಧಿನಿಯಮ 2024 ದಡಿ ಕಾರ್ಯ ನಿರ್ವಹಿಸುತ್ತದೆ. ಅದರಂತೆ ಕನ್ನಡ ಅನುಷ್ಠಾನ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವುದು ಕೂಡ ಪ್ರಮುಖವಾಗಿದೆ. ಇದರ ಅಂಗವಾಗಿ ಜಿಲ್ಲಾ ಮಟ್ಟದ ಕನ್ನಡ ಜಾಗೃತಿ ಸಮಿತಿ ರಚಿಸಲಾಗಿದ್ದು, ಸಮಿತಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಕನ್ನಡ ಭಾಷೆ ಅಭಿವೃದ್ಧಿಗೆ ಪೂರಕವಾಗಿರುತ್ತವೆ ಎಂದು ಹೇಳಿದರು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರಂತೆ ಜಿಲ್ಲೆಯ ಎಲ್ಲ ನಗರ ಪ್ರದೇಶ, ಗ್ರಾಮಗಳಲ್ಲಿ ಎಲ್ಲ ಸರ್ಕಾರಿ ಇಲಾಖೆ, ಸರ್ಕಾರಿ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ ಮತ್ತು ಮಂಜೂರಾತಿಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವಾಣಿಜ್ಯ, ಕೈಗಾರಿಕೆ ಮತ್ತು ವ್ಯವಹಾರ ಉದ್ಯಮ, ಟ್ರಸ್ಟ್‌ಗಳು, ಸಮಾಲೋಚನಾ ಕೇಂದ್ರ, ಆಸ್ಪತ್ರೆ, ಪ್ರಯೋಗಾಲಯ, ಮನೋರಂಜನಾ ಕೇಂದ್ರ, ಹೋಟೆಲ್‌ ಹಾಗೂ ಬ್ಯಾಂಕ್‌ ಮಂತಾದವು ಅಳವಡಿಸಿದ ನಾಮಫಲಕಗಳಲ್ಲಿ ಕಡ್ಡಾಯವಾಗಿ ಒಂದು ತಿಂಗಳೊಳಗಾಗಿ ಕನ್ನಡ ಭಾಷೆಯನ್ನು ಶೇ.60 ರಷ್ಟು ಪ್ರದರ್ಶಿಸಬೇಕು. ತಪ್ಪಿದಲ್ಲಿ ಅಧಿನಿಯಮದ ಅನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರ, ಸ್ಥಳೀಯ ಪ್ರಾಧಿಕಾರ, ಅನುದಾನಿತ ಅಥವಾ ಅನುದಾನ ರಹಿತ ಸಂಸ್ಥೆಗಳು ನಡೆಸುವ ಶಾಲಾ ಕಾರ್ಯಕ್ರಮಗಳಲ್ಲಿ ಬಳಸುವ ಕರಪತ್ರ, ಬ್ಯಾನರ್, ಫ್ಲೆಕ್ಸ್, ಎಲೆಕ್ಟ್ರಾನಿಕ್ ಪ್ರದರ್ಶನ ಫಲಕ, ಮಾಹಿತಿ, ಸೂಚನಾ ಪತ್ರಗಳು, ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರುವಂತೆ ಕ್ರಮವಹಿಸಬೇಕು. ಸರ್ಕಾರವು ಕೈಗೊಂಡ ಅಥವಾ ಸರ್ಕಾರದ ಸಂಬಂಧಿತ ಸಂಸ್ಥೆ ಅಥವಾ ಸ್ಥಳೀಯ ಪ್ರಾಧಿಕಾರಗಳಿಂದ ಯಾವುದೇ ರೀತಿಯ ಪ್ರತಿಫಲ, ಅನುದಾನ, ರಿಯಾಯಿತಿ ಪಡೆದು ಅನುಷ್ಠಾನಗೊಳಿಸುತ್ತಿರುವ ಯಾವುದೇ ಯೋಜನೆಗೆ ಸಂಬಂಧಿಸಿದ ಫಲಕ, ಜಾಹೀರಾತು, ರಸೀದಿ, ಸೂಚನಾ ಪತ್ರಗಳು ಕಡ್ಡಾಯವಾಗಿ ಕನ್ನಡದಲ್ಲಿರಬೇಕು ಎಂದು ಸೂಚಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022 ಹಾಗೂ ತಿದ್ದುಪಡಿ ಅಧಿನಿಯಮ 2024ನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಪ್ರತಿ ತಾಲೂಕಿನಲ್ಲಿ ಅಧಿನಿಯಮದನ್ವಯ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಸಮಿತಿ ರಚಿಸಿ ಆಯಾ ತಾಲೂಕಿನಾದ್ಯಂತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಕ್ರಮವಹಿಸಬೇಕು. ಕ್ರಮ ವಹಿಸಿದ ವರದಿ ಜಿಲ್ಲಾ ಸಮಿತಿಗೆ ಕಾಲಕಾಲಕ್ಕೆ ಸಲ್ಲಿಸಬೇಕು. ಉದ್ಯೋಗದಲ್ಲಿ ಜಿಲ್ಲೆಯ ವಾಣಿಜ್ಯ ಕೈಗಾರಿಕೆ, ಹೊಟೇಲ್‌, ಉದ್ಯಮ ಸಂಸ್ಥೆ, ಕಡ್ಡಾಯವಾಗಿ ಸ್ಥಳೀಯರಿಗೆ ಆದ್ಯತೆ ನೀಡಬೇಕು. ವಿಫಲವಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.


ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಕಾಯ್ದೆಯಂತೆ ಸರ್ವರು ಕನ್ನಡ ಭಾಷಾ ಅನುಷ್ಠಾನಕ್ಕಾಗಿ ಶ್ರಮಿಸಬೇಕು. ಕನ್ನಡ ಭಾಷೆ ನಮ್ಮ ಸ್ವಾಭಿಮಾನವಾದ್ದರಿಂದ ಅದರ ಬಳಕೆ ಮತ್ತು ಉಳಿಯುವಿಕೆಗೆ ನಾವೆಲ್ಲರೂ ಕನ್ನಡ ಭಾಷೆ ಬಳಸಬೇಕು ಎಂದು ಹೇಳಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ವಿರುಪಣ್ಣ ನವಲಿ, ಜಿಲ್ಲಾ ಜಾಗೃತಿ ಸಮಿತಿಯ ಸದಸದ್ಯ ಜಿ.ಎಸ್.ಗೋನಾಳ, ಡಾ.ನಾಗರಾಜ ದಂಡೋತಿ, ಮಹೇಶ ಬಳ್ಳಾರಿ, ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್, ಡಾ.ನಿಂಗಪ್ಪ ಕಂಬಳಿ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.