ಮುಂಡರಗಿ: ತಾಲೂಕಿನಲ್ಲಿ ಸುಮಾರು 36 ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು ಸಂಘಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಅಂದರೆ 18 ಮಹಿಳಾ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ನನ್ನ ಕ್ಷೇತ್ರ ವ್ಯಾಪ್ತಿಯ ಮುಂಡರಗಿ, ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನಲ್ಲಿ ನಿತ್ಯ ಸುಮಾರು 21301 ಕೆಜಿ ಹಾಲನ್ನು ಉತ್ಪಾದನೆಯಾಗುತ್ತಿದೆ ಎಂದು ಧಾರವಾಡ ಕೆಎಂಎಫ್ ನಿರ್ದೇಶಕ ಲಿಂಗರಾಜಗೌಡ ಪಾಟಿಲ ತಿಳಿಸಿದರು.

ಸ್ಥಳೀಯ ಕೆಸಿಸಿ ಬ್ಯಾಂಕಿನ ಸಭಾಭವನದಲ್ಲಿ ಜರುಗಿದ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಪ್ರಗತಿ ಪರಿಶೀಲನೆ ಹಾಗೂ ರಾಸು ವಿಮೆ ಚೆಕ್ ಮತ್ತು ಕಲ್ಯಾಣ ಸಂಘದ ಚೆಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಮೊದಲು ಹಾಲು ಉತ್ಪಾದಕರ ಸಂಘಗಳನ್ನು ಪ್ರಾರಂಭ ಮಾಡಿದರೆ ಆ ಸಂಘಗಳಿಗೆ ಯಾವುದೇ ರೀತಿಯ ಉಳಿತಾಯ ಇರುತ್ತಿರಲಿಲ್ಲ. ನೀವು ಹಾಲು ಉತ್ಪಾದಕರನ್ನು ಸದಸ್ಯರನ್ನಾಗಿ ಮಾಡಿ ಅವರಿಂದ ₹55ರಿಂದ 60 ಸಾವಿರ ಹಣ ಠೇವಣಿ ಸಂಗ್ರಹಿಸಿ ಒಂದು ಹಾಲಿನ ಸೊಸೈಟಿ ಮಾಡುವುದಾಗಿ ಮುಂದೆ ಬರುತ್ತಿದ್ದಿರಿ. ಈಗಲೂ ಅದೇ ಪದ್ಧತಿ ಇದ್ದರೂ ಇದೀಗ ಒಕ್ಕೂಟದಿಂದ ಮಹಿಳಾ ಪ್ರತಿನಿಧಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಲಾಗುತ್ತದೆ. ಕಳೆದ ವರ್ಷ ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಸುಮಾರು 11 ಹೊಸ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ಥಾಪನೆಯಾಗಿದ್ದು, ಎಲ್ಲ ಸಂಘಗಳಿಗೂ ₹1.80 ಲಕ್ಷ ಹಣ ಕೊಡುವ ಮೂಲಕ ಸಂಘಗಳ ಸಬಲಿಕರಣಕ್ಕೆ ನಮ್ಮ ಒಕ್ಕೂಟ ಮುಂದಾಗಿದೆ ಎಂದರು.

ಇಷ್ಟೆಲ್ಲ ಸೌಲಭ್ಯಗಳನ್ನು ನೀಡಿದರೂ‌ ನಮಗೆ ಮಹಿಳಾ ಸಂಘಗಳಿಂದ ಹೇಳಿಕೊಳ್ಳುವಷ್ಟು‌ ಪ್ರಗತಿ ಕಾಣದಿರುವುದು ಬೇಸರ ಮೂಡಿಸಿದೆ. ಒಂದು ಸಂಘ ಹಾಗೂ ಅಲ್ಲಿ ಕಾರ್ಯನಿರ್ವಹಿಸುವ ಕಾರ್ಯದರ್ಶಿಗಳು ಉಳಿಯಬೇಕಾದರೆ ನಿತ್ಯ ಕನಿಷ್ಠ 150ರಿಂದ 200 ಲೀಟರ್ ಹಾಲು ಸಂಗ್ರಹಿಸಿ ಕೊಡಬೇಕು. ಈ ಕುರಿತು ಅನೇಕ ಬಾರಿ ತಿಳಿಸುತ್ತಾ ಬಂದರೂ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಒತ್ತನ್ನು ನೀಡಿ ಕಾರ್ಯನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಸುಮಾರು 8 ಜನರಿಗೆ ರಾಸು ವಿಮೆ ಚೆಕ್ ಮತ್ತು 3 ಜನರಿಗೆ ತಲಾ ₹10 ಸಾವಿರದಂತೆ ಕಲ್ಯಾಣ ಸಂಘದ ಚೆಕ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ‌ ಜಿಲ್ಲಾ ಮುಖ್ಯಸ್ಥ ಡಾ. ಪ್ರಸನ್ ಪಟ್ಟೇದ, ವಿಸ್ತರಾಧಿಕಾರಿ ಬಸವರಾಜ ಜುಮ್ಮಣ್ಣವರ, ಕಿರಣ್ ಪಾಟೀಲ, ರಾಹುಲ್, ತಾಂತ್ರಿಕ ವಿಭಾಗದ ಈರಣ್ಣ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಹಳ್ಳಿಕೇರಿ ಮಹಿಳಾ ಸಂಘದ ಅಧ್ಯಕ್ಷರು, ನಾಗರಹಳ್ಳಿಯ ಕಾರ್ಯದರ್ಶಿ ಹನುಮಂತಪ್ಪ ಸೇರಿದಂತೆ ವಿವಿಧ ಸಂಘಗಳ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಕ್ಕಾಗಿ ನಿರ್ದೇಶಕ ಲಿಂಗರಾಜಗೌಡ ಪಾಟೀಲ ಅವರಿಗೆ ಎಲ್ಲ ಸಂಘಗಳ ಪರವಾಗಿ ಸನ್ಮಾನಿಸಲಾಯಿತು. ಡಾ. ಪ್ರಸನ್ ಪಟ್ಟೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಜುಮ್ಮಣ್ಣವರ ಸ್ವಾಗತಿಸಿ, ನಿರೂಪಿಸಿದರು.