ಗದಗ: ಜಿಲ್ಲೆಯಲ್ಲಿ ಉಂಟಾಗಿರುವ ಮಳೆ ಅಭಾವ ಹಾಗೂ ಕೃಷಿ ಬೆಳೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ನಿಖರ ಬೆಳೆಹಾನಿ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜು. 15ರ ನಂತರವೂ ಮಳೆ ಕೊರತೆಯಾಗುವ ಮುನ್ಸೂಚನೆ ಇರುವುದರಿಂದ, ಮರು ಬಿತ್ತನೆಗೆ ಅವಕಾಶ ಕಡಿಮೆ ಇವೆ. ಬಿತ್ತನೆಯಾಗದೇ ಉಳಿದ ಪ್ರದೇಶದಲ್ಲಿ ಕಡಿಮೆ ಅವಧಿಯ ಪರ್ಯಾಯ ತಳಿಗಳಾದ ಈರುಳ್ಳಿ ಅಥವಾ ಅಲ್ಪಾವಧಿ ತರಕಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಕೃಷಿ ಇಲಾಖೆ ಸೂಕ್ತ ತಾಂತ್ರಿಕ ಮಾರ್ಗದರ್ಶನ ಹಾಗೂ ಜಾಗೃತಿ ಮೂಡಿಸಬೇಕು.
ಜಿಲ್ಲೆಯ ಶೇ. 20ರಿಂದ 30ರಷ್ಟು ಬೆಳೆಗಳು ಮೊಳಕೆಯೊಡೆದಿಲ್ಲ. ಇನ್ನುಳಿದ ಭಾಗಗಳಲ್ಲಿ ಮಳೆಯ ಕೊರತೆಯಿಂದಾಗಿ ಬಾಡುತ್ತಿವೆ. ಉತ್ತಮ ಮಳೆಯಾದರೆ ಮಾತ್ರ ಶೇಕಡಾ 40ರಿಂದ 50ರಷ್ಟು ಇಳುವರಿ ನಿರೀಕ್ಷಿಸಬಹುದು. ರೈತರಿಗೆ ಬೆಳೆ ವಿಮೆಯ ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಕೃಷಿ ಇಲಾಖೆಯ ನೋಡಿಕೊಳ್ಳಬೇಕು.ಪ್ರಮುಖವಾಗಿ ಬೆಳೆಸಾಲ ಪಡೆಯುವ ರೈತರಿಗೆ ವಿಮೆಯಿಂದ ಹೊರಗುಳಿಯಲು ಇರುವ ಆಯ್ಕೆಯ ಕುರಿತು ಚರ್ಚಿಸಿ, ರೈತರು ತಮಗೆ ಇಷ್ಟವಿರುವ ಅಥವಾ ತಾವು ಬೆಳೆದ ಬೆಳೆಗೆ ಮಾತ್ರ ವಿಮೆ ಮಾಡಿಸಲು ಇರುವ ತಾಂತ್ರಿಕ ತೊಂದರೆ ನಿವಾರಿಸಿ, ಸರ್ಕಾರದ ನಿಯಮಾವಳಿಗಳಂತೆ ರೈತರಿಗೆ ಗರಿಷ್ಠ ಅನುಕೂಲ ಮಾಡಿಕೊಡಿ. ಈ ವಿಷಯದಲ್ಲಿ ಜಿಲ್ಲೆಯ ಎಲ್ಲಾ ತಹಸೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ, ಬೆಳೆ ಸಮೀಕ್ಷೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು.
ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು ಬಿತ್ತನೆ ಗುರಿ 313719 ಹೆಕ್ಟೇರ್ ಪ್ರದೇಶ ಇದ್ದು, ಆ ಪೈಕಿ 239280 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ. ಮೆಕ್ಕೆಜೋಳ, ಹೆಸರು, ತೊಗರಿ, ಸೂರ್ಯಕಾಂತಿ ಹತ್ತಿ ಮುಖ್ಯಬೆಳೆಗಳಾಗಿವೆ. ತೇವಾಂಶದ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿವೆ. ಇದುವರೆಗೆ ನಡೆದಿರುವ ಬಿತ್ತನೆ ಕಾರ್ಯ ಹಾಗೂ ವಿಮಾ ನೋಂದಣಿಯ ಅಂಕಿ, ಅಂಶಗಳನ್ನು ಬ್ಯಾಂಕ್ ವಾರು ಪರಿಶೀಲಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಯಾವುದೇ ರೈತರು ವಿಮೆಯಿಂದ ವಂಚಿತರಾಗದಂತೆ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಎಡಿಸಿ ಡಾ. ದುರಗೇಶ್ ಕೆ. ಆರ್, ನಗರಾಭಿವೃದ್ಧಿ ಕೋಶದ ಬಸವನಗೌಡ ಕೋಟೂರ, ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ತಹಸೀಲ್ದಾರರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.