ಗದಗ: ಕಾಂಗ್ರೆಸ್ ಪಕ್ಷದಿಂದ ನಮ್ಮ ಬಂಜಾರ ಸಮುದಾಯಕ್ಕೆ ಮೀಸಲಾತಿ ವಿಷಯದಲ್ಲಿ ವ್ಯಾಪಕ ಅನ್ಯಾಯವಾಗಿದ್ದು, ಇದನ್ನು ಖಂಡಿಸಿ, ತಾಂಡಾ ಜನರಲ್ಲಿ ಜಾಗೃತಿ ಮೂಡಿಸಿ ಕಾಂಗ್ರೆಸ್ ಹಠಾವೋ, ತಾಂಡಾ ಬಚಾವೋ ಆಂದೋಲನ ನಡೆಸಲಾಗುವುದು ಎಂದು ಮಾಜಿ ಸಂಸದ ಡಾ. ಉಮೇಶ ಜಾಧವ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಕುರಿತು ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಸದಾಶಿವ ಆಯೋಗ ರಚನೆ ಆಗಿತ್ತು. ಅದು ಸರಿ ಇಲ್ಲ ಎಂದು ನಾವು ಹೋರಾಟ ಮಾಡಿದ್ದೆವು. ಬಳಿಕ ಒಳಮೀಸಲಾತಿ ಪ್ರಕ್ರಿಯೆ ಆರಂಭವಾಯಿತು. ನಂತರ ನಾಗಮೋಹನ್ ದಾಸ ಅವರ ವರದಿ ದತ್ತಾಂಶಗಳು ತಪ್ಪಾಗಿದ್ದರಿಂದ ಒಳಮೀಸಲಿನಲ್ಲಿ ನಮಗೆ ಅನ್ಯಾಯ ಆಗಿದೆ ಎಂದರು.ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಮಾಧುಸ್ವಾಮಿ ಅವರ ಸಚಿವ ಸಂಪುಟದ ಉಪಸಮಿತಿಯ ಅಧ್ಯಕ್ಷತೆಯಲ್ಲಿ ಉತ್ತಮವಾಗಿ ಮೀಸಲಾತಿ ನೀಡಲಾಗಿತ್ತು. ಕೊರಚ, ಕೊರಮ, ಭೋವಿ ಮತ್ತು ಬಂಜಾರ ಸಮುದಾಯವನ್ನು ಎಸ್ಸಿ ಒಳಮೀಸಲಿನಿಂದ ತೆಗೆಯಬೇಕು ಎಂದು ಕೆಲವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎಸ್ಸಿ ಕಮಿಷನ್‌ನಿಂದ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ವರದಿ ನೀಡುವಂತೆ ಪತ್ರ ಬಂದಿತ್ತು. ಬೊಮ್ಮಾಯಿ ಅವರು ಸ್ಪಷ್ಟ ಉತ್ತರ ನೀಡಿ, ಎಸ್ಸಿಯಿಂದ ಈ ನಾಲ್ಕು ಸಮುದಾಯಗಳನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಉತ್ತರ ನೀಡಿ ಗಟ್ಟಿತನ ಮೆರೆಯಿತು ಎಂದರು.
ಮಾಜಿ ಸಚಿವ, ಶಾಸಕ ಪ್ರಭು ಚವ್ಹಾಣ, ಒಳಮೀಸಲಾತಿ ಅನ್ಯಾಯದಿಂದ ಶಿಕ್ಷಣದಲ್ಲಿ, ಹಾಸ್ಟೆಲ್ ನೇಮಕಾತಿಯಲ್ಲಿ ನಮ್ಮ ಸಮುದಾಯದ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ಒಳಮೀಸಲಾತಿ ಪುನಾರಚನೆ ಆಗಬೇಕು. ಇಲ್ಲವಾದರೆ, ಬಸ್ ರೋಕೋ, ರೈಲು ರೋಕೋ, ಸಿಎಂ ಸಚಿವರ ರೋಕೋ ಚಳವಳಿ ಮಾಡಲಾಗುವುದು ಎಂದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ, ಕಾಂಗ್ರೆಸ್ ಪಕ್ಷದಿಂದ ಬಂಜಾರ ಸಮುದಾಯಕ್ಕೆ ಒಳಮೀಸಲಾತಿ ವಿಷಯದಲ್ಲಿ ಅನ್ಯಾಯವಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡಿತ್ತು. ಬಂಜಾರ ಸಮುದಾಯವನ್ನು ಎಸ್ಸಿ ಮೀಸಲಿನಿಂದ ಬಿಜೆಪಿ ಹೊರಗಡೆ ಇಡುತ್ತದೆ ಎಂದು ಕಾಂಗ್ರೆಸ್ ಪಕ್ಷ ಸುಳ್ಳನ್ನು ಹೇಳಿ ಅಪಪ್ರಚಾರ ಮಾಡಿತ್ತು. ಆದರೆ ಈಗ ಅದೇ ಕಾಂಗ್ರೆಸ್ ಪಕ್ಷ ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಎಂದರು.
ಹೂವಿನಹಡಗಲಿ ಶಾಸಕ ಕೃಷ್ಣ ನಾಯ್ಕ ಸೇರಿದಂತೆ ಅನೇಕರು ಮಾತನಾಡಿದರು. ಭೀಮಸಿಂಗ್ ರಾಥೋಡ, ಬಸವರಾಜ ನಾಯಕ, ಮಣಿಕಂಠ ರಾಥೋಡ್, ಎಸ್.ಪಿ. ಲಿಂಬ್ಯನಾಯಕ್, ಮಂಜಾನಾಯಕ, ಲಿಂಗಾರಾಜ ಪಾಟೀಲ ಸೇರಿದಂತೆ ಅನೇಕರು ಇದ್ದರು.