ಗದಗ: ಬಿಜೆಪಿಗೆ ಕಾರ್ಯಕರ್ತರೇ ಜೀವಾಳ ಎನ್ನುತ್ತಾರೆ. ಆದರೆ, ಶಾಸಕ ಡಾ. ಚಂದ್ರು ಲಮಾಣಿ ಕಾರ್ಯಕರ್ತರನ್ನು ನಿಂದಿಸುವುದು ಮತ್ತು ಸ್ವಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸುತ್ತಿದ್ದಾರೆ. ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಜೆಪಿ ಮುಖಂಡ ಮಂಜುನಾಥ ಮಾಗಡಿ ಒತ್ತಾಯಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ವಿರುದ್ಧವಾಗಿ ಮಾತನಾಡಿದರೆ ಅಟ್ರಾಸಿಟಿ ಕೇಸ್ ದಾಖಲು ಮಾಡಿಸುತ್ತಾರೆ. ಬಿಜೆಪಿಯ ಮಾಂಡ್ರೆ ಎನ್ನುವ ನಿಷ್ಠಾವಂತ ಕಾರ್ಯಕರ್ತನನ್ನು ಶಾಸಕ ಡಾ. ಚಂದ್ರು ಲಮಾಣಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕೆಲ ದಿನಗಳ ಹಿಂದೆ ಬೆಳ್ಳಟ್ಟಿ ಗ್ರಾಮ ಪಂಚಾಯಿತಿಯಲ್ಲಿ ಪಿಡಿಒಗೆ ಧಮ್ಕಿ ಹಾಕಿದ್ದಾರೆ. ಮೂರ್ನಾಲ್ಕು ಜನ ಸಹಚರರನ್ನು ಇಟ್ಟುಕೊಂಡು ಬೆದರಿಕೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಶ್ನೆ ಮಾಡಿದವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ರಾಮಣ್ಣ ಲಮಾಣಿ ಜತೆ ಸೇರಿಕೊಂಡು ಪರೋಕ್ಷವಾಗಿ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಮುಖಂಡ ರವಿಕಾಂತ ಅಂಗಡಿ ಮಾತನಾಡಿ, ಕಳೆದ ವರ್ಷ ಶಾಸಕ ಡಾ. ಚಂದ್ರು ಲಮಾಣಿ ಕಾರು ಚಾಲಕ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಚಾಲಕನ ಶವಸಂಸ್ಕಾರಕ್ಕೆ ಶಾಸಕರು ಹೋಗಲಿಲ್ಲ. ಅಲ್ಲದೇ ಸುನೀಲನ ತಂದೆ- ತಾಯಿಗಳನ್ನು ಕೂಡಿ ಹಾಕಿ ಹಿಂಸೆ ನೀಡುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಲಕ್ಷ್ಮೇಶ್ವರದಲ್ಲಿ 18 ದಿನಗಳ ಕಾಲ ರೈತರು ಹೋರಾಟ ಮಾಡಿದ್ದರು. ಹೋರಾಟಕ್ಕೆ ವಿವಿಧ ಮಠಗಳ ಮಠಾಧೀಶರು, ಹಲವು ಶಾಸಕರು, ಸಂಸದರು ಬೆಂಬಲ ನೀಡಿದ್ದರು. ಆದರೆ, ಸ್ಥಳೀಯವಾಗಿ ಇದ್ದ ಶಾಸಕ ಡಾ. ಚಂದ್ರು ಲಮಾಣಿ ಒಂದು ದಿನ ಕೂಡ ರೈತರಿಗೆ ಬೆಂಬಲ ನೀಡಲಿಲ್ಲ. ಇಂತಹ ಶಾಸಕರನ್ನು ಪಕ್ಷದಿಂದ ವಜಾ ಮಾಡಬೇಕು ಎಂದು ರಾಜ್ಯಾಧ್ಯಕ್ಷರಿಗೆ, ಜಿಲ್ಲಾಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ, ಚಂದ್ರು ಮಾಗಡಿ, ಶಿವಾನಂದ ಬನ್ನಿಮಟ್ಟಿ, ಮುತ್ತು ನೀರಲಗಿ, ಬಸವರಾಜ ಜಾಲಗಾರ, ಮಂಜುನಾಥ ದೊಡ್ಡಗೌಡ್ರ, ಮಂಜನಗೌಡ ನರಸಮ್ಮನವರ, ಪರಶುರಾಮ ಚಹ್ವಾಣ, ಹೊನ್ನಪ್ಪ ವಡ್ಡರ ಇದ್ದರು.