60 ಲಕ್ಷ ಕೋಟಿ ರು.ಎಲ್ಲಿಂದ ಕೊಡ್ತೀರಿ: ಬಿ.ವೈ.ರಾಘವೇಂದ್ರ ಪ್ರಶ್ನೆ

| Published : Apr 23 2024, 12:49 AM IST

ಸಾರಾಂಶ

ಉಡುಪಿ ಜಿಲ್ಲೆ ಬೈಂದೂರು ಕಿರಿಮಂಜೇಶ್ವರದಲ್ಲಿ ಬಿಜೆಪಿ ಬೈಂದೂರು ಮಂಡಲದಿಂದ ನಡೆದ ಶಕ್ತಿಸಿಂಧು – ಬೃಹತ್ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಂಸದ ವಿ.ವೈ.ರಾಘವೇಂದ್ರ, ಕಾಂಗ್ರೆಸ್ ದೇಶದ 60 ಕೋಟಿ ಮಹಿಳೆಯರಿಗೆ 60 ಲಕ್ಷ ಕೋಟಿ ರು. ನೀಡುವುದಾಗಿ ಭರವಸೆ ನೀಡಿದೆ. ದೇಶದ ಬಜೆಟ್ ಇರುವುದೇ 45 ಲಕ್ಷ ಕೋಟಿ ರು. ಹಾಗಿರುವಾಗ ಈ ಒಂದು ಯೋಜನೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಬೈಂದೂರು

ಮಹಿಳೆಯರಿಗೆ ರಾಜಕೀಯ ಮೀಸಲಾತಿಯನ್ನು ಕೊಟ್ಟಿದ್ದೇ ಬಿಜೆಪಿ, ಹೊರತು ಕಾಂಗ್ರೆಸ್ ಅಲ್ಲ. ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ.ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ನವರು ಈಗ ಮಹಿಳೆಯರ ಮತಕ್ಕಾಗಿ ಸುಳ್ಳೇ ಹೇಳುತ್ತಿದ್ದಾರೆ ಎಂದು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಆರೋಪಿಸಿದ್ದಾರೆ.

ಇಲ್ಲಿನ ಕಿರಿಮಂಜೇಶ್ವರದಲ್ಲಿ ಬಿಜೆಪಿ ಬೈಂದೂರು ಮಂಡಲದಿಂದ ನಡೆದ ಶಕ್ತಿಸಿಂಧು – ಬೃಹತ್ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.33ರಷ್ಟು ಹಾಗೂ ರಾಜ್ಯದಲ್ಲಿ ಜಿ.ಪಂ, ತಾಪಂ ಹಾಗೂ ಗ್ರಾಪಂಗಳಲ್ಲಿ ಶೇ. 50ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಿದ್ದು ಬಿಜೆಪಿ. ಆದರೆ ಕಾಂಗ್ರೆಸ್ ದೇಶದ 60 ಕೋಟಿ ಮಹಿಳೆಯರಿಗೆ 60 ಲಕ್ಷ ಕೋಟಿ ರು. ನೀಡುವುದಾಗಿ ಭರವಸೆ ನೀಡಿದೆ. ದೇಶದ ಬಜೆಟ್ ಇರುವುದೇ 45 ಲಕ್ಷ ಕೋಟಿ ರು. ಹಾಗಿರುವಾಗ ಈ ಒಂದು ಯೋಜನೆ ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಹಸಿಹಸಿ ಸುಳ್ಳು ಹೇಳಿ ಮಹಿಳೆಯರ ಮತ ಗಳಿಸಲು ಹೊರಟಿದೆ ಎಂದು ಆರೋಪಿಸಿದರು.

ಕೊಲ್ಲೂರು ಕ್ಷೇತ್ರದಲ್ಲಿ ನಿಂತು ಹೇಳುತ್ತಿದ್ದೇನೆ, ಸಿದ್ದರಾಮಯ್ಯ ಅವರೇ ನೀವು ಗ್ಯಾರಂಟಿಯಲ್ಲಿ ಹೇಳಿದ 10 ಕೆಜಿ ಅಕ್ಕಿ ಎಲ್ಲಿದೆ, ಕೇವಲ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ, ಅದೂ ಕೇಂದ್ರ ಬಿಜೆಪಿ ಸರ್ಕಾರ ನೀಡುವ ಅಕ್ಕಿಯಾಗಿದೆ ಎಂದು ಹೇಳಿದರು.

ಮೋದಿ ಸರ್ಕಾರ ಎಪಿಎಲ್ ಹಾಗೂ ಬಿಪಿಎಲ್ ಎಲ್ಲರಿಗೂ ಆಯುಷ್ಮಾನ್ ಕಾರ್ಡ್ ಯೋಜನೆ ನೀಡಿದ್ದರೆ, ಕಾಂಗ್ರೆಸ್ ಸರ್ಕಾರ ನಿರುದ್ಯೋಗ ಭತ್ಯೆ ನೀಡುವಾಗ ಎಪಿಎಲ್ ಬಿಪಿಎಲ್ ಹುಡುಕುತ್ತಿದ್ದಾರೆ ಎಂದು ಎಂದರು.

ಸೋನಿಯಾ ಬಗ್ಗೆ ಮಾತಾಡ್ತೀರಾ?:

ಚಿತ್ರನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಮಾತನಾಡಿ, ಓಟಿಗಾಗಿ ಬಿಟ್ಟಿ ಭಾಗ್ಯ ನೀಡುತ್ತಿರುವ ರಾಜ್ಯ ಸರ್ಕಾರ ಜನ ಸಾಮಾನ್ಯರನ್ನು ವಂಚಿಸುತ್ತಿದೆ. ಬುಡಕಟ್ಟು ಸಮುದಾಯದಿಂದ ಬಂದಂತಹ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡಿದ ಹೆಮ್ಮೆ ಬಿಜೆಪಿಯದ್ದು, ಇಂತಹ ಮಹಿಳೆಯ ಬಗ್ಗೆ ಹಾಗೂ ನಮ್ಮ ಪ್ರಧಾನ ಮಂತ್ರಿ ಮೋದಿಯ ಬಗ್ಗೆ ಸಿದ್ದರಾಮಯ್ಯನವರು ಹಗುರವಾಗಿ ಮಾತನಾಡುತ್ತಾರೆ. ಅದೇ ರೀತಿ ಅವರ ಪಕ್ಷದ ಸೋನಿಯಾ ಗಾಂಧಿ ಬಗ್ಗೆ ಹಾಗೂ ರಾಹುಲ್ ಗಾಂಧಿ ಬಗ್ಗೆ ಮಾತನಾಡುತ್ತಾರೆಯೇ ? ದೇಶದ ಹಿತಕ್ಕಾಗಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾಗಿದೆ ಎಂದರು.

ವಾರಾಹಿ ನೀರಿಗೆ ರಾಘಣ್ಣ ಬೇಕು:

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಬೈಂದೂರಿನ ಸಮಗ್ರ ಅಭಿವೃದ್ಧಿಯಾಗಬೇಕಾದರೆ ಹಾಗೂ ಬೈಂದೂರು ಕ್ಷೇತ್ರ ಒಂದು ಮಾದರಿ ಕ್ಷೇತ್ರವಾಗಬೇಕಾದರೆ ರಾಘಣ್ಣ ಮತ್ತೊಮ್ಮೆ ಸಂಸದರಾಗಲೇಬೇಕು. ಈ ಕ್ಷೇತ್ರ ಜನತೆಗೆ ವಾರಾಹಿಯಿಂದ ಸಿಹಿ ನೀರನ್ನು ಕುಡಿಸುವ ಯೋಜನೆ ಜಾರಿಗಾಗಿ ರಾಘಣ್ಣ ಇನ್ನೊಮ್ಮೆ ಸಂಸತ್ತಿಗೆ ಆಯ್ಕೆಯಾಗಲೇಬೇಕಿದೆ. ಕ್ಷೇತ್ರದ ಮತದಾರರು 1 ಲಕ್ಷಕ್ಕೂ ಅಂತರದ ಮತವನ್ನು ರಾಘಣ್ಣರಿಗೆ ನೀಡಲಿದ್ದಾರೆ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಡಾ. ರಾಜನಂದಿನಿ, ಗಾಯತ್ರಿ ಮಲ್ಲಪ್ಪ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಉಪ್ಪಿನಕುದ್ರು, ಪ್ರಧಾನ ಕಾರ್ಯದರ್ಶಿಗಳಾದ ಮಹೇಂದ್ರ ಪೂಜಾರಿ ಉಮೇಶ್ ಶೆಟ್ಟಿ ಮತ್ತಿತರರಿದ್ದರು.

ಬೈಂದೂರು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲಾ ಕುಂದರ್ ಸ್ವಾಗತಿಸಿದರು. ಅನಿತಾ ಮರವಂತೆ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಪ್ರಿಯದರ್ಶಿನಿ ಬೆಸ್ಕೂರು ನಿರೂಪಿಸಿದರು.