ಶಕ್ತಿ ಯೋಜನೆಯಡಿ ನಿತ್ಯ 60 ಲಕ್ಷ ಮಹಿಳೆಯರ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ

| Published : Feb 10 2024, 01:48 AM IST

ಶಕ್ತಿ ಯೋಜನೆಯಡಿ ನಿತ್ಯ 60 ಲಕ್ಷ ಮಹಿಳೆಯರ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಇದುವರೆಗೆ 150 ಕೋಟಿ ಸ್ತ್ರೀಯರು ಪ್ರಯಾಣಿಸಿದ್ದಾರೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಕಲಬುರಗಿಯಲ್ಲಿ ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವತಿಯಿಂದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕದಲ್ಲಿ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಫ್ರೀ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಪರಿಣಾಮ ಪ್ರತಿನಿತ್ಯ 60 ಲಕ್ಷದಂತೆ ಇದುವರೆಗೆ 150 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಹೇಳಿದರು.

ಅಖಿಲ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳಿ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕಲಬುರಗಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ನಾಲ್ಕು ನಿಗಮಗಳಲ್ಲಿ ಕೆಕೆಆರ್‌ಟಿಸಿ ಆರ್ಥಿಕವಾಗಿ ಸ್ವಲ್ಪ ಸದೃಢವಾಗಿದೆ. ನಷ್ಟ ಅನುಭವಿಸಿದರೂ ಕೂಡಾ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಸೌಲಭ್ಯ ಒದಗಿಸಬೇಕಾಗುತ್ತದೆ. ನಿಗಮ ಲಾಭದಲ್ಲಿ ನಡೆಯಬೇಕಿದ್ದರೆ, ನೌಕರರು ಹಾಗೂ ಸಿಬ್ಬಂದಿ ವರ್ಗದವರು ಸಹಕಾರದಿಂದ ಕೆಲಸ ಮಾಡಬೇಕು ಎಂದರು.

ಕಳೆದ 8 ವರ್ಷದಲ್ಲಿ 14,000 ಸಿಬ್ಬಂದಿ ನಿವೃತ್ತರಾದರೂ ನೇಮಕಾತಿ ಆಗಿರಲಿಲ್ಲ. ಆದರೆ ಇದೀಗ 371 (ಜೆ) ಅಡಿಯಲ್ಲಿ ಆಯ್ಕೆಯಾದ 1614 ಸಿಬ್ಬಂದಿಗೆ ನೇಮಕಾತಿ ಆದೇಶವನ್ನು ಫೆ.18ರಂದು‌ ಹಸ್ತಾಂತರಿಸಲಾಗುವುದು. 2024-25 ಸಾಲಿನ ಬಜೆಟ್‌ನಲ್ಲಿ ರು. 6600 ಕೋಟಿ ಅನುದಾನವನ್ನು ಶಕ್ತಿ ಯೋಜನೆಗೆ ನೀಡಲು ಉದ್ದೇಶಿಸಲಾಗಿದೆ ಎಂದರು.

ಕಲ್ಯಾಣ ಕರ್ನಾಟಕಕ್ಕೆ ಈಗಾಗಲೇ 630 ನೂತನ‌ ಬಸ್ ನೀಡಲಾಗಿದೆ. ಮತ್ತೇ ಈಗ ರಾಜ್ಯಕ್ಕೆ 5800 ಹಾಗೂ ಕಲ್ಯಾಣ ಕರ್ನಾಟಕಕ್ಕೆ 475 ನೂತನ ಬಸ್ ನೀಡಲಾಗುವುದು. ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲರ ಬೇಡಿಕೆಯಂತೆ ಸ್ಥಳ ಕೊಟ್ಟರೆ ಕಲಬುರಗಿ ನಗರಕ್ಕೆ ಎರಡು ನೂತನ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.

ವೇದಿಕೆಯ ಮೇಲೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪಗೌಡ ದರ್ಶನಾಪುರ, ಶಾಸಕರಾದ ಎಂ ವೈ ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತೀಮಾ, ತಿಪ್ಪಣ್ಣಪ್ಪ ಕಮಕನೂರು, ಜಗದೇವ ಗುತ್ತೇದಾರ, ಕೆಕೆಆರ್ ಟಿಸಿ ಎಂಡಿ ರಾಚಪ್ಪ, ಚಂದ್ರಕಾಂತ ಗದ್ದಿಗಿ, ಸಂಗಮನಾಥ ರಬಶೆಟ್ಟಿ ಸೇರಿದಂತೆ ಹಲವರಿದ್ದರು.ಜನರ ಆರ್ಥಿಕ ಸದೃಢತೆಗೆ ಗ್ಯಾರಂಟಿ ಕಾರಣ: ಪ್ರಿಯಾಂಕ್ ಖರ್ಗೆ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಜನರ ಆರ್ಥಿಕ ಸದೃಢತೆಗೆ ಕಾರಣವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ 5,22,171 ಜನ ಫಲಾನುಭವಿ ಮಹಿಳೆಯರು ಲಾಭ ಪಡೆಯುತ್ತಿದ್ದಾರೆ. ಅನ್ನ ಭಾಗ್ಯದಡಿ ಜಿಲ್ಲೆಯಲ್ಲಿ 19,16,144 ಫಲಾನುಭವಿಗಳು ಲಾಭ ಪಡೆಯುತ್ತಿದ್ದಾರೆ. ಶಕ್ತಿ ಯೋಜನೆಯಡಿ ಪ್ರತಿನಿತ್ಯ ರಾಜ್ಯಾದ್ಯಂತ 60 ಲಕ್ಷ ಮಹಿಳೆಯರು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 21.05 ಕೋಟಿ ಮಹಿಳೆಯರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ 4.27 ಕೋಟಿ ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ 650 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿತ್ತು. ಅದರಲ್ಲಿ ಇನ್ನೂ 240 ಕೋಟಿ ಅನುದಾನ ಬಿಡುಗಡೆ ಮಾಡಬೇಕಿದೆ ಎಂದರು.

ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದು ಇದರ ವಿರುದ್ಧ ‘ನನ್ನ ತೆರಿಗೆ ನನ್ನ ಹಕ್ಕು’ ಘೋಷಣೆಯೊಂದಿಗೆ ಕೇಂದ್ರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ಮಾಡಲಾಯಿತು. ಕರ್ನಾಟಕ ಪ್ರತಿವರ್ಷ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ 4.30 ಲಕ್ಷ ಕೋಟಿಯಲ್ಲಿ ಕೊಟ್ಟರೆ ಕೇಂದ್ರ ನಮ್ಮ ರಾಜ್ಯಕ್ಕೆ ಅನುದಾನದ ರೂಪದಲ್ಲಿ ಕೇವಲ 44,000 ಕೋಟಿ ಮಾತ್ರ ಕೊಡುತ್ತಿದೆ. ಈ ತಾರತಮ್ಯದ ವಿರುದ್ಧ ಹೋರಾಟ ಮಾಡಿದರೆ ನಮ್ಮನ್ನೇ ದೇಶ ಒಡೆಯುವವರು ಹಾಗೂ ದೇಶದ್ರೋಹಿಗಳು ಎಂದು ನಮ್ಮನ್ನು ಕರೆಯುತ್ತಿದ್ದಾರೆ ಎಂದು ಟೀಕಿಸಿದರು.