ಜಿಲ್ಲೆಯ ಎಲ್ಲಾ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಇರಲೇಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಜಿಲ್ಲೆಯ ಎಲ್ಲಾ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಇರಲೇಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಅಗತ್ಯ ಕ್ರಮಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಸೂಚಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕನ್ನಡ ಜಾಗೃತಿ ಸಮಿತಿ ಸಭೆಯಲ್ಲಿ ಕನ್ನಡ ಭಾಷೆಯ ಅಭಿವೃದ್ಧಿ, ಅನುಷ್ಠಾನ ಮತ್ತು ಜಾಗೃತಿ ಕುರಿತು ಸುಧೀರ್ಘವಾಗಿ ಚರ್ಚಿಸಲಾಯಿತು. ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ಸಂಬಂಧ ಈಗಾಗಲೇ ಅಧಿನಿಯಮ ಜಾರಿಯಾಗಿದ್ದು, ಇದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಜಿಲ್ಲೆಯ ಗಡಿಭಾಗ ಸೇರಿದಂತೆ ನಗರ, ಪಟ್ಟಣ ಹಾಗೂ ಎಲ್ಲೆಡೆ ಅಳವಡಿಸಿರುವ/ ಅಳವಡಿಸುವ ನಾಮಫಲಕದಲ್ಲಿ ಕಡ್ಡಾಯವಾಗಿ ಶೇ.60 ರಷ್ಟು ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸ್ಥಳೀಯ ಸಂಸ್ಥೆ ಮೂಲಕ ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಅವರು ಮಾತನಾಡಿ, ಈಗಾಗಲೇ ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಹಲವು ಸಭೆಗಳನ್ನು ಮಾಡಲಾಗಿದ್ದು, ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಬಿ.ಎಸ್.ಲೋಕೇಶ್ ಸಾಗರ್ ಅವರು ಮಾತನಾಡಿ, ಸರ್ಕಾರಿ ಬಸ್ಸು ಸೇರಿದಂತೆ ಇತರ ಭಾಷೆಗಳಲ್ಲಿ ಜಾಹೀರಾತು ಅಳವಡಿಸಲಾಗುತ್ತಿದ್ದು, ಅದು ಕನ್ನಡದಲ್ಲೇ ಅಳವಡಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಮತ್ತೋರ್ವ ಸದಸ್ಯ ಅಮಿನ್ ಮೋಸಿನ್ ಅವರು ಮಾತನಾಡಿ, ಕೊಡಗಿನಲ್ಲಿ ಸಾಕಷ್ಟು ಮಂದಿ ಕನ್ನಡಕ್ಕಾಗಿ ತಮ್ಮದೇ ಆದ ಕೊಡುಗೆ ನೀಡಿದವರಿದ್ದಾರೆ. ಅಂತಹ ಸಾಧಕರನ್ನು ಹಾಗೂ ಕೊಡಗಿನ ಮೂಲ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸಂಗ್ರಹಾಲಯ ತೆರೆಯಬೇಕು. ಈ ನಿಟ್ಟಿನಲ್ಲಿ ಸಂಗ್ರಹಾಲಯಕ್ಕೆ ಮಡಿಕೇರಿಯಲ್ಲಿ ಜಾಗ ಗುರುತಿಸುವಂತೆ ಮನವಿ ಮಾಡಿದರು. ಕೆ.ವಿ.ಸುನಿಲ್ ಕುಮಾರ್ ಅವರು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಕನ್ನಡ ಸಂಬಂಧಿಸಿದ ಕಾರ್ಯಕ್ರಮ ಆಯೋಜಿಸುವಂತೆ ತಿಳಿಸಿದರು. ಈ ಸಂದರ್ಭ ಕುಮಾರ್ ಅವರು ಮಾತನಾಡಿ ಪ್ರೌಢಶಾಲೆ ಹಾಗೂ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಪ್ರಬಂಧ, ರಸಪ್ರಶ್ನೆ, ಚಿತ್ರಕಲೆ ಹಾಗೂ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನವನ್ನು ನೀಡುವುದರ ಮೂಲಕ ಪ್ರೋತ್ಸಾಹಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸದಸ್ಯ ಡಾ.ರಾಧಿಕ ಕುಟ್ಟಪ್ಪ ಅವರು ಮಾತನಾಡಿ ಕನ್ನಡ ಭಾಷೆ ಸಂಸ್ಕೃತಿ ಕುರಿತು ಕಾರ್ಯಗಾರ ಏರ್ಪಡಿಸಬೇಕು, ಶಾಲಾ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಮೂಲಕ ಹಲವು ಕಾರ್ಯಕ್ರಮ ಆಯೋಜಿಸಬೇಕು ಎಂದರು.