ನದಿಯಲ್ಲಿ 15 ಕಿಮೀ ಈಜಿ ಪ್ರಾಣ ಉಳಿಸಿಕೊಂಡ 60 ವರ್ಷದ ಅಜ್ಜ

| Published : Jul 24 2025, 01:45 AM IST

ಸಾರಾಂಶ

ಮೈಸೂರಿನ ಜಯಣ್ಣ (60) ಬದುಕಿ ಬಂದವರು. ಸದ್ಯ ಜಯಣ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಣಿಬೆನ್ನೂರು: ಬಟ್ಟೆ ತೊಳೆಯಲು ತುಂಗಭದ್ರಾ ನದಿಗೆ ತೆರಳಿದಾಗ ಕಾಲು ಜಾರಿ ಬಿದ್ದ ವೃದ್ಧರೊಬ್ಬರು ಸುಮಾರು 15 ಕಿಮೀ ದೂರ ಈಜಿಕೊಂಡು ಹೋಗಿ ಸ್ಥಳಿಯರ ಸಹಾಯದಿಂದ ಬದುಕಿ ಬಂದಿರುವ ಘಟನೆ ಮಂಗಳವಾರ ತಾಲೂಕಿನ ಐರಣಿ ಗ್ರಾಮದ ಬಳಿ ನಡೆದಿದೆ.

ಮೈಸೂರಿನ ಜಯಣ್ಣ (60) ಬದುಕಿ ಬಂದವರು.ಕೂಲಿಗಾಗಿ ಮೈಸೂರಿನಿಂದ ಬಂದಿದ್ದ ಅವರು, ತಾಲೂಕಿನ ಕುಮಾರಪಟ್ಟಣ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ತುಂಗಭದ್ರಾ ನದಿಯಲ್ಲಿ ಜಯಣ್ಣ ಬಟ್ಟೆ ತೊಳೆಯಲು ಹೋಗಿದ್ದರು. ಈ ಸಮಯದಲ್ಲಿ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ನೀರಿನ ಸೆಳೆತಕ್ಕೆ ಸಿಲುಕಿದ ಜಯಣ್ಣ ಈಜುತ್ತ ಐರಣಿ ಗ್ರಾಮದ ಹೊಳೆಮಠದವರೆಗೂ ಸಾಗಿ ಬಂದಿದ್ದಾರೆ. ನಂತರ ಈಜಾಡಲು ಆಗದ ಕಾರಣ ಕಾಪಾಡಿ, ಕಾಪಾಡಿ ಎಂದು ಕೂಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸಮಗ್ರ ಪರಿವರ್ತನಾ ಸಮುದಾಯದ ಸದಸ್ಯರು ಮೀನುಗಾರರ ದೋಣಿ ತೆಗೆದುಕೊಂಡು ನದಿಗೆ ಇಳಿದು ಜಯಣ್ಣ ಅವರನ್ನು ರಕ್ಷಿಸಿ ದಡಕ್ಕೆ ಕರೆದುಕೊಂಡು ಬಂದಿದ್ದಾರೆ. ನಂತರ ಅವರನ್ನು ಹರಿಹರ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಜಯಣ್ಣ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಸಮಗ್ರ ಪರಿವರ್ತನಾ ಸಮುದಾಯದ ಅಧ್ಯಕ್ಷ ಆಂಜನೇಯ ನಾಗೇನಹಳ್ಳಿ, ಮೀನುಗಾರ ಗಿರೀಶ ಪಾಟೀಲ, ಮೌನೇಶ ತಳವಾರ, ಇರ್ಪಾನ ಖಂಡಾರಿ, ಹನುಮಂತಪ್ಪ ಮೀನಕಟ್ಟಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಕ್ಷುಲ್ಲಕ ಕಾರಣಕ್ಕೆ ಬಹಿಷ್ಕಾರ, ಮಹಿಳೆ ದೂರು

ಹಾವೇರಿ: ಕ್ಷುಲ್ಲಕ ಕಾರಣಕ್ಕೆ ಊರಿನಿಂದ ಬಹಿಷ್ಕಾರ ಹಾಕಲಾಗಿದೆ ಎಂದು ಆರೋಪಿಸಿರುವ ಹಾನಗಲ್ಲ ತಾಲೂಕು ಜಾನಗುಂಡಿ ಗ್ರಾಮದ ಮಹಿಳೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

ಜಾನಗುಂಡಿ ಗ್ರಾಮದ ಅನುಷಾ ಮಂಜುನಾಥ ಲಮಾಣಿ ಊರಿನಿಂದ ಬಹಿಷ್ಕಾರಕ್ಕೆ ಒಳಗಾದ ಮಹಿಳೆ. ಇವರನ್ನು ಅದೇ ಗ್ರಾಮದ ಸ್ವಜಾತಿ ಮುಖಂಡರೇ ಬಹಿಷ್ಕಾರ ಹಾಕಿದ್ದಾರೆ. ಊರಿನಲ್ಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ನೊಂದ ಮಹಿಳೆ ಎಸ್ಪಿ ಕಚೇರಿ ಮೆಟ್ಟಿಲೇರಿದ್ದಾರೆ.ಅನುಷಾ ಲಮಾಣಿ ತಮ್ಮದೇ ಗ್ರಾಮದ ಮಂಗಳಮ್ಮ ಎಂಬ ವೃದ್ದೆ ಜತೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಕೆಲಸದ ವಿಚಾರವಾಗಿ ಮಂಗಳಮ್ಮನಿಗೆ ಫೋನ್ ಮಾಡಿದಾಗ ಮಂಗಳಮ್ಮ ಫೋನ್ ರಿಸೀವ್ ಮಾಡಿರಲಿಲ್ಲ. ಹೀಗಾಗಿ ಮಂಗಳಮ್ಮನ ಮನೆಯವರಿಗೆ ಫೋನ್ ಮಾಡಿದ ಅನುಷಾ ಮಂಗಳಮ್ಮ ನನ್ನ ಕಾಲ್ ರಿಸೀವ್ ಮಾಡುತ್ತಿಲ್ಲ, ಸತ್ತ ಹೋದ್ಲಾ ಎಂದು ಪ್ರಶ್ನಿಸಿದ್ದಾಳೆ.ಇದೇ ಕಾರಣಕ್ಕೆ ಊರಿನ ಲಂಬಾಣಿ ಸಮಾಜದ ಮುಖಂಡರು ಬಹಿಷ್ಕಾರ ಹಾಕಿದ್ದಾರೆ ಎಂದು ಅನುಷಾ ಆರೋಪಿಸಿದ್ದಾರೆ. ಜಾನಗುಂಡಿ ಗ್ರಾಮದ ಸೋಮನಾಥ, ವಸಂತ, ಉಮ್ಮಣ್ಣ, ಪೋಮಣ್ಣ ಎಂಬುವವರು ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿ ಯಾರೂ, ಯಾವ ರೈತರೂ ನನಗೆ ಕೆಲಸ ಕೊಡಬಾರದು ಎಂದು ತಾಕೀತು ಮಾಡಿದ್ದಾರೆ. ಇದರಿಂದ ಮನನೊಂದಿದ್ದೇನೆ. ಈ ಕುರಿತು ಹಾನಗಲ್ಲ ಪೊಲೀಸರಿಗೆ ದೂರು ನೀಡಿದರೂ ಸ್ಪಂದಿಸಲಿಲ್ಲ. ಹೀಗಾಗಿ ಎಸ್ಪಿ ಕಚೇರಿಗೆ ಬಂದು ಲಿಖಿತ ದೂರು ನೀಡಿದ್ದಾರೆ.