ಮಳೆಯ ನೀರಿನ ಪ್ರವಾಹಕ್ಕೆ ಸಿಲುಕಿ ನಲುಗಿರುವ ಕೇಂದ್ರೀಯ ವಿಹಾರ, ಟಾಟಾನಗರದ 600 ಕುಟುಂಬಸ್ಥರನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಳೆಯಿಂದ ತೀವ್ರ ತೊಂದರೆಗೆ ಸಿಲುಕಿರುವ ಕೇಂದ್ರಿಯ ವಿಹಾರ ಹಾಗೂ ಟಾಟಾನಗರದಿಂದ ಸುಮಾರು 600 ಕುಟುಂಬಗಳನ್ನು ಸ್ಥಳಾಂತರಿಸಲಾಗುವುದು. ಪ್ರವಾಹ ಉಂಟಾಗಿರುವ ಪ್ರದೇಶದ ಕೆಲ ಅಪಾರ್ಟ್‌ಮೆಂಟ್‌ಗಳನ್ನು 8 ದಿನ ಮುಚ್ಚಲು ಸೂಚಿಸಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೌಡೇಶ್ವರಿನಗರದಲ್ಲಿ 15 ಸೆಂ.ಮೀ. ಮಳೆಯಾಗಿದೆ. ಕೆಲವು ಕಡೆಗಳಲ್ಲಿ ವಾಡಿಕೆಗಿಂತ ಶೇ.300ರಷ್ಟು ಹೆಚ್ಚಿನ ಮಳೆ ಸುರಿದಿದೆ. ಪ್ರವಾಹ ಸೃಷ್ಟಿಯಾಗಿರುವ ಕೆಲ ಪ್ರದೇಶದ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.

ಕೆಲವು ಪ್ರದೇಶದ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. 20ಕ್ಕೂ ಹೆಚ್ಚಿನ ಕಡೆಗಳಲ್ಲಿ ಶೇಖರಣೆಯಾಗಿರುವ ನೀರನ್ನು ತೆಗೆಯಲಾಗುತ್ತಿದೆ. ನಮ್ಮ ತಂಡ ಹಗಲಿರುಳು ಶ್ರಮಿಸುತ್ತಿದ್ದು, ಪರಿಹಾರ ಕಾರ್ಯ ಕೈಗೊಳ್ಳುತ್ತಿದ್ದಾರೆ. ಬೆಂಗಳೂರಿನ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಹೆಚ್ಚು ಸಮಸ್ಯೆಯಾಗಿದೆ. ಮಹದೇವಪುರ ವಲಯದಲ್ಲಿ 5 ಬಡಾವಣೆಗಳು ಸಮಸ್ಯೆ ಸಿಲುಕಿದ್ದು, ಎಲ್ಲೆಡೆ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಪ್ರಚಾರಕ್ಕಿಂತ ಪರಿಹಾರ ಮುಖ್ಯ

ಬೆಂಗಳೂರಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಆದರೆ, ಈ ಸಂದರ್ಭದಲ್ಲಿ ನಾನು ಭೇಟಿ ನೀಡಿ ಪ್ರಚಾರ ಪಡೆಯುವುದಕ್ಕಿಂತ, ಜನರ ಸಮಸ್ಯೆಗೆ ಸ್ಪಂದಿಸುವುದು ಮುಖ್ಯ. ಅದಕ್ಕಾಗಿ ಎಲ್ಲ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ 48 ಗಂಟೆಗಳಿಂದ ನಮ್ಮ ಅಧಿಕಾರಿಗಳ ತಂಡ ಮಳೆ ಪೀಡಿತ ಪ್ರದೇಶಗಳಲ್ಲಿ ನಿರಂತರವಾಗಿ ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.