ಕನ್ನಡಪ್ರಭ ವಾರ್ತೆ ಬೆಂಗಳೂರು

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌)ಗೆ ನಗರದಲ್ಲಿ ಮಂಗಳವಾರ ಚಾಲನೆ ನೀಡಿಲಾಗಿದ್ದು ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ವ್ಯಾಪ್ತಿಯಲ್ಲಿ 60,368 ಗಣತಿ ನಮೂನೆಗಳನ್ನು ವಿತರಿಸಲಾಗಿದೆ.

ಬೂತ್ ಮಟ್ಟದ ಅಧಿಕಾರಿಗಳು(ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿಯನ್ನು ಪರಿಶೀಲಿಸುವ ಹಾಗೂ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯವನ್ನು ಮಂಗಳವಾರದಿಂದ ಆರಂಭಿಸಿದ್ದಾರೆ. ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 12,122 ನಮೂನೆ ವಿತರಿಸಲಾಗಿದೆ. ಉತ್ತರದಲ್ಲಿ 23,221, ದಕ್ಷಿಣ-10,620 ಹಾಗೂ ಬೆಂಗಳೂರು ನಗರ ಪಾಲಿಕೆಯಲ್ಲಿ 14,405 ಸೇರಿದಂತೆ ಒಟ್ಟು 60,368 ಗಣತಿ ನಮೂನೆಗಳನ್ನು ವಿತರಿಸಲಾಗಿದೆ.

ಜು.29ರವರೆಗೆ ನಡೆಯಲಿರುವ ಈ ವಿಶೇಷ ಅಭಿಯಾನದಲ್ಲಿ ಮತದಾರರು ಬಿಎಲ್‌ಒಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸಹಕರಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತರು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್‌ ಮನವಿ ಮಾಡಿದ್ದಾರೆ.

ಮತದಾರರು ಭರ್ತಿ ಮಾಡಿದ ಗಣತಿ ನಮೂನೆಗಳೊಂದಿಗೆ ಅಗತ್ಯ ದಾಖಲೆಗಳನ್ನು ಬಿಎಲ್‌ಒಗಳಿಗೆ ಅಥವಾ ಸಂಬಂಧಿತ ಮತಗಟ್ಟೆ ಮಟ್ಟದಲ್ಲಿ ಸಲ್ಲಿಸಬಹುದಾಗಿದೆ. ಈ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ ಹಾಗೂ ದೋಷರಹಿತವಾಗಿಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.


ಎಸ್‌ಐಆರ್‌ ಹಿನ್ನೆಲೆಯಲ್ಲಿ ಉತ್ತರ ನಗರ ಪಾಲಿಕೆಯ ಸಿಬ್ಬಂದಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ರವರ ಅಧಿಕೃತ ನಿವಾಸ ಬಾಲಬ್ರೂಯಿ ಪಕ್ಕದಲ್ಲಿರುವ ವಸತಿ ಗೃಹಕ್ಕೆ ಭೇಟಿ ನೀಡಿ ಗಣತಿ ನಮೂನೆ ಅರ್ಜಿಯನ್ನು ನೀಡಿ, ಭರ್ತಿ ಮಾಡಿದ ಬಳಿಕ ವಾಪಸ್‌ ಪಡೆದರು.

ಉತ್ತರ ನಗರ ಪಾಲಿಕೆಯ ಸಿಬ್ಬಂದಿಗಳು, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಬಿಎ ಮುಖ್ಯ ಆಯುಕ್ತಮಹೇಶ್ವರ್ ರಾವ್ ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದರು. ಅಗತ್ಯ ಮಾಹಿತಿ ಒದಗಿಸಿ: ಶಾಲಿನಿ

ರಾಜ್ಯದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಕಡ್ಡಾಯವಾಗಿ ರಾಜ್ಯದ ನಾಗರೀಕರೆಲ್ಲರೂ ಅಗತ್ಯ ಮಾಹಿತಿ ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮನವಿ ಮಾಡಿದ್ದಾರೆ. ನಾಗರಿಕರು ಈ ಅರ್ಜಿಯನ್ನು ತುಂಬುವಾಗ ಯಾವುದೇ ವಿಷಯವಾಗಿ ಗೊಂದಲಗಳಿದ್ದರೆ, ಪ್ರತಿಯೊಂದು ವಾರ್ಡ್‍ನಲ್ಲೂ ಸ್ಥಾಪಿಸಲಾಗಿರುವ ಸಿಟಿಜನ್ ಸರ್ವೀಸ್ ಸೆಂಟರ್ ಹಾಗೂ ವೋಟರ್ ಫೆಸಿಲಿಟೇಷನ್ ಸೆಂಟರ್‌ನಲ್ಲಿ ಮಾಹಿತಿಯನ್ನು ಪಡೆದು ನಿಖರವಾಗಿ ಅರ್ಜಿಯನ್ನು ತುಂಬಬಹುದು ಎಂದು ತಿಳಿಸಿದ್ದಾರೆ. ಎಸ್.ಐ.ಆರ್. ಅರ್ಜಿಯನ್ನು ತುಂಬಿದರೆ ನಾವು ದೇಶದ ನಾಗರೀಕರಾಗಿದ್ದೇವೆ ಹಾಗೂ ದೇಶದ ಮತದಾರರಾದಂತೆ. ಹಾಗಾಗಿ ರಾಜ್ಯದ ಪ್ರತಿಯೊಬ್ಬ ನಾಗರೀಕರು ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅರ್ಜಿಯನ್ನು ಸಲ್ಲಿಸಬೇಕು. ನನಗೂ ಸಹ ಬಿ.ಎಲ್.ಒ ಅಧಿಕಾರಿಗಳು ಮೂರು ಅರ್ಜಿ ನೀಡಿದ್ದು, ನಾನೂ ಸಹ ಅರ್ಜಿಯನ್ನು ತುಂಬಿ ಸಲ್ಲಿಸಿದ್ದೇನೆ ಎಂದು ಅವರು ವಿವರಿಸಿದ್ದಾರೆ.