ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರದ ನಡುವೆ ಎದುರಾಗಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸಂತ್ರಸ್ತರಿಗೆ ವೇಗದಲ್ಲಿ ನೆರವು ತಲುಪಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ.
ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಸಚಿವ
ಕನ್ನಡಪ್ರಭ ವಾರ್ತೆ ಕಾರವಾರಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರದ ನಡುವೆ ಎದುರಾಗಬಹುದಾದ ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಸಂತ್ರಸ್ತರಿಗೆ ವೇಗದಲ್ಲಿ ನೆರವು ತಲುಪಿಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ಜಿಲ್ಲೆಯ ವಿಪತ್ತು ನಿರ್ವಹಣೆಗಾಗಿ ₹61 ಕೋಟಿ ಬೃಹತ್ ಅನುದಾನ ಬಿಡುಗಡೆ ಮಾಡಿರುವುದಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಘೋಷಿಸಿದರು.
ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಮಳೆಗಾಲದ ತುರ್ತು ಕಾರ್ಯಗಳಿಗಾಗಿ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಈಗಾಗಲೇ ₹30 ಲಕ್ಷ ಮುಂಗಡವಾಗಿ ಠೇವಣಿ ಇರಿಸಲಾಗಿದೆ. ಮಳೆಗಾಳಿಗೆ ಮನೆಗಳಿಗೆ ಹಾನಿಯುಂಟಾದಲ್ಲಿ ಕಂದಾಯ ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣವೇ ಸ್ಥಳಕ್ಕೆ ಧಾವಿಸಬೇಕು. ಸಂತ್ರಸ್ತರಿಗೆ ತುರ್ತು ವೆಚ್ಚಕ್ಕಾಗಿ ಸ್ಥಳದಲ್ಲೇ ₹5,000 ಪರಿಹಾರ ನೀಡಬೇಕು. ಸಂಪೂರ್ಣ ಮನೆ ಹಾನಿಯಾಗಿದ್ದರೆ ಅಂತಹ ಕುಟುಂಬಗಳಿಗೆ ಕೇವಲ ಮೂರು ದಿನಗಳ ಒಳಗಾಗಿ ₹1 ಲಕ್ಷ ಪರಿಹಾರ ಧನ ವಿತರಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.ವಿಪತ್ತು ನಿರ್ವಹಣೆಯನ್ನು ಚುರುಕುಗೊಳಿಸಲು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ನೇತೃತ್ವದಲ್ಲಿ ತ್ರಿಮಟ್ಟದ ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಅರಣ್ಯ, ಹೆಸ್ಕಾಂ ಹಾಗೂ ನಗರಾಭಿವೃದ್ಧಿ ಇಲಾಖೆಗಳು ಜಂಟಿಯಾಗಿ ಕೆಲಸ ಮಾಡಲಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಬಹುದಾದ ಗುಡ್ಡ ಕುಸಿತ ತಡೆಗೆ ಸ್ಯಾಂಡ್ ಬ್ಯಾಗ್ ಬಳಸಿ ಮುನ್ನೆಚ್ಚರಿಕೆ ವಹಿಸುವಂತೆ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಒಂದು ವೇಳೆ ಗುತ್ತಿಗೆ ಸಂಸ್ಥೆಗಳು ನಿರ್ಲಕ್ಷ್ಯ ತೋರಿದರೆ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾ ದಂಡಾಧಿಕಾರಿಗಳಿಗೆ ಪೂರ್ಣ ಅಧಿಕಾರ ನೀಡಲಾಗಿದೆ ಎಂದು ಸಚಿವರು ಎಚ್ಚರಿಸಿದರು.
ಒಂದೆಡೆ ಅತಿವೃಷ್ಟಿ ಕಾಡುತ್ತಿದ್ದರೆ, ಮತ್ತೊಂದೆಡೆ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ 21 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಜಾನುವಾರುಗಳ ಹಿತದೃಷ್ಟಿಯಿಂದ 41 ವಾರಗಳಿಗೆ ಆಗುವಷ್ಟು ಮೇವನ್ನು ಸಂಗ್ರಹಿಸಿಡಲಾಗಿದೆ. ಮಂಗನ ಕಾಯಿಲೆಯ ಭೀತಿ ನಿವಾರಿಸಲು ಶಾಶ್ವತ ಪರಿಹಾರ ಹಾಗೂ ಲಸಿಕೆ ಸಂಶೋಧನೆಗಾಗಿ ಕೇಂದ್ರ ಸರ್ಕಾರದ ಮೊರೆ ಹೋಗಲಾಗಿದ್ದು, ಐಸಿಎಂಆರ್ ಮೂಲಕ ಸಂಶೋಧನೆ ನಡೆಸಲು ವಿನಂತಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಪಂ ಸಿಇಓ ಡಾ. ದಿಲೀಶ್ ಸಸಿ, ಎಸ್ಪಿ ದೀಪನ್ ಎಂ.ಎನ್, ಶಾಸಕರಾದ ಸತೀಶ್ ಕೆ. ಸೈಲ್, ಶಿವರಾಮ ಹೆಬ್ಬಾರ, ದಿನಕರ ಶೆಟ್ಟಿ ಇದ್ದರು.ವೈದ್ಯರ ಕೊರತೆ ನೀಗಿಸಲು ಗೌರವಧನ
ಜಿಲ್ಲೆಯಲ್ಲಿ ಮಳೆಗಾಲದ ಸಾಂಕ್ರಾಮಿಕ ರೋಗಗಳ ಹಾವಳಿ ತಡೆಗೆ ಆರೋಗ್ಯ ಇಲಾಖೆ ಸಜ್ಜಾಗಿದೆ. ವಿಶೇಷವಾಗಿ ವೈದ್ಯರ ಕೊರತೆಯನ್ನು ನೀಗಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತಾತ್ಕಾಲಿಕವಾಗಿ ನೇಮಕಗೊಳ್ಳುವ ಎಂಬಿಬಿಎಸ್ ವೈದ್ಯರಿಗೆ ಮಾಸಿಕ ₹60,000 ಹಾಗೂ ಸ್ನಾತಕೋತ್ತರ ತಜ್ಞ ವೈದ್ಯರಿಗೆ ₹1,00,000 ಗೌರವಧನ ನೀಡಿ ತಕ್ಷಣವೇ ಕರ್ತವ್ಯಕ್ಕೆ ನಿಯೋಜಿಸಲು ಆದೇಶಿಸಲಾಗಿದೆ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.