ಕನ್ನಡಪ್ರಭ ವಾರ್ತೆ ಬೆಳಗಾವಿ ಆದಾಯ ತೆರಿಗೆ ಇಲಾಖೆ ಜೊತೆ 14 ವರ್ಷ ಸುದೀರ್ಘ ಕಾನೂನು ಹೋರಾಟ ನಡೆಸಿದ ಬಳಿಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 700 ಕೋಟಿ ಮೊತ್ತದಲ್ಲಿ 610 ಕೋಟಿ ಕಾರ್ಪಸ್‌ ನಿಧಿಯನ್ನು ಮರಳಿ ಪಡೆಯಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಆದಾಯ ತೆರಿಗೆ ಇಲಾಖೆ ಜೊತೆ 14 ವರ್ಷ ಸುದೀರ್ಘ ಕಾನೂನು ಹೋರಾಟ ನಡೆಸಿದ ಬಳಿಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ₹700 ಕೋಟಿ ಮೊತ್ತದಲ್ಲಿ ₹610 ಕೋಟಿ ಕಾರ್ಪಸ್‌ ನಿಧಿಯನ್ನು ಮರಳಿ ಪಡೆಯಲಾಗಿದೆ ಎಂದು ವಿಟಿಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ತಿಳಿಸಿದರು.

ವಿಟಿಯುನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2012-13ರಲ್ಲಿ ಆದಾಯ ತೆರಿಗೆ ಇಲಾಖೆ ವಿಟಿಯು ಖಾತೆಗಳನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ ಸುಮಾರು ₹450 ಕೋಟಿ ಕಾರ್ಪಸ್‌ ನಿಧಿ ಇತ್ತು. ಇದಲ್ಲದೆ ಮತ್ತೊಂದು ₹250 ಕೋಟಿ ನಿಧಿಯೂ ಸೇರಿ ಒಟ್ಟು ₹700 ಕೋಟಿಯ ಪೈಕಿ ₹ 610 ಕೋಟಿಯಷ್ಟು ಹಣವನ್ನು ಮರಳಿ ಪಡೆಯುವಲ್ಲಿ ವಿಶ್ವವಿದ್ಯಾಲಯ ಯಶಸ್ವಿಯಾಗಿದೆ ಎಂದು ವಿವರಿಸಿದರು.

ಕೊಟ್ಟ ಮಾತು ಈಡೇರಿಸಿದ್ದೇನೆ

2022ರ ಸೆಪ್ಟೆಂಬರ್‌ನಲ್ಲಿ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿಗೆ ನೀಡಿದ್ದ ಮಾತನ್ನು ನೆನಪಿಸಿಕೊಂಡ ಅವರು, ಮೂರುವರೆ ವರ್ಷದೊಳಗೆ ಈ ಹಣವನ್ನು ವಾಪಸ್‌ ತಂದು ಇಲ್ಲಿಂದ ನಿರ್ಗಮಿಸುತ್ತೇನೆ ಎಂದು ಹೇಳಿದ್ದೆ. ಆ ಮಾತಿಗೆ ಬದ್ಧನಾಗಿ ಕೆಲಸ ಮಾಡಿದ್ದು, ಆ ಕೆಲಸವನ್ನು ಎರಡೂವರೆ ವರ್ಷದಲ್ಲೇ ಪೂರ್ಣಗೊಳಿಸಿದ್ದೇನೆ ಎಂದು ಹೇಳಿದರು.

ವಿವಿಯ ಹಣವನ್ನು ವಾಪಸ್‌ ಪಡೆಯುವುದು ತಮ್ಮ ಗುರಿಗಳಲ್ಲಿ ಒಂದಾಗಿತ್ತು. ಹಣ ವಾಪಸ್‌ ಬಂದಿರುವುದು ವೈಯಕ್ತಿಕ ಸಾಧನೆಗಿಂತ ವಿಶ್ವವಿದ್ಯಾಲಯದ ಆರ್ಥಿಕ ಸ್ಥಿರತೆಗೆ ಮಹತ್ವದ ಬೆಳವಣಿಗೆ ಎಂದರು.

ಎಐ ಬಂದ ಬಳಿಕ ಸಿಎಸ್‌ ಕ್ಷೇತ್ರದ ಸ್ವರೂಪ ಬದಲು

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವೇಗದ ಬೆಳವಣಿಗೆಯಿಂದ ಕಂಪ್ಯೂಟರ್ ಸೈನ್ಸ್‌ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ಹಿಂದೆ ಹೆಚ್ಚಿನ ಸಂಖ್ಯೆಯ ಎಂಜಿನಿಯರ್‌ಗಳ ಅಗತ್ಯವಿದ್ದ ಕೋಡಿಂಗ್‌ ಮತ್ತು ಸಾಫ್ಟ್‌ವೇರ್‌ ಅಭಿವೃದ್ಧಿ ಕೆಲಸಗಳನ್ನು ಈಗ ಎಐ ಆಧಾರಿತ ಸಾಧನಗಳು ಕಡಿಮೆ ಸಮಯದಲ್ಲಿ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಸಾಂಪ್ರದಾಯಿಕ ಕಂಪ್ಯೂಟರ್ ಸೈನ್ಸ್‌ ಉದ್ಯೋಗಗಳ ಬೇಡಿಕೆ ಹಾಗೂ ಸ್ವರೂಪದಲ್ಲಿ ಬದಲಾವಣೆ ಕಾಣುತ್ತಿದೆ ಎಂದು ತಿಳಿಸಿದರು.

ಎಐಸಿಟಿಇಯಿಂದ ಸೀಟು ಹೆಚ್ಚಳ

ಕಂಪ್ಯೂಟರ್ ಸೈನ್ಸ್‌ ಸೇರಿದಂತೆ ಕೆಲವು ಎಂಜಿನಿಯರಿಂಗ್‌ ವಿಭಾಗಗಳಲ್ಲಿ ಸೀಟುಗಳ ಹೆಚ್ಚಳದ ಕುರಿತು ಪ್ರತಿಕ್ರಿಯಿಸಿದ ಅವರು, ಬೇಡಿಕೆ-ಪೂರೈಕೆ ಅನುಪಾತ ಹಾಗೂ ತಂತ್ರಜ್ಞಾನದಲ್ಲಿನ ಬದಲಾವಣೆಗಳ ಆಧಾರದ ಮೇಲೆ ಎಐಸಿಟಿಇ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಸೀಟುಗಳ ಹೆಚ್ಚಳಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳು ವಿಶ್ವವಿದ್ಯಾಲಯದ ನೇರ ನಿಯಂತ್ರಣದಲ್ಲಿಲ್ಲ. ಹಿಂದಿನಂತೆ ವಿಶ್ವವಿದ್ಯಾಲಯದ ಎನ್‌ಒಸಿ ಪಡೆಯುವ ವ್ಯವಸ್ಥೆಯಲ್ಲಿಯೂ ಬದಲಾವಣೆಗಳಾಗಿವೆ. ವಿಟಿಯುನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಲವು ಹೊಸ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷಾ ಆನ್‌ ಡಿಮ್ಯಾಂಡ್‌ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳು ಮುಂದಿನ ಅವಕಾಶಕ್ಕಾಗಿ ದೀರ್ಘಕಾಲ ಕಾಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ವ್ಯವಸ್ಥೆ ರೂಪಿಸಲಾಗಿದೆ ಎಂದು ಹೇಳಿದರು.

ಫಲಿತಾಂಶ ಪ್ರಕಟಣೆಯಲ್ಲಿಯೂ ಬದಲಾವಣೆ ತರಲಾಗಿದ್ದು, ವಾಟ್ಸ್‌ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ಫಲಿತಾಂಶ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇ-ಲರ್ನಿಂಗ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಗೂಗಲ್‌ ಮೂಲಕ ಸುಮಾರು 20 ಸಾವಿರ ಗಂಟೆಗಳ ಶೈಕ್ಷಣಿಕ ವಿಷಯವನ್ನು ಕೇವಲ ₹350ಗೆ ವಿದ್ಯಾರ್ಥಿಗಳಿಗೆ ಒದಗಿಸಲಾಗಿದೆ ಎಂದರು.

ವಿಶ್ವವಿದ್ಯಾಲಯವನ್ನು ವಿದ್ಯಾರ್ಥಿ ಕೇಂದ್ರಿತ ಸಂಸ್ಥೆಯನ್ನಾಗಿ ರೂಪಿಸುವುದು ತಮ್ಮ ಪ್ರಮುಖ ಉದ್ದೇಶ. ವಿದ್ಯಾರ್ಥಿಗಳ ಸಮಯ, ಹಣ ಹಾಗೂ ಶೈಕ್ಷಣಿಕ ಅವಕಾಶಗಳನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಸೇವೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ವಿದ್ಯಾಶಂಕರ ತಿಳಿಸಿದರು.

-----

ಬಾಕ್ಸ್

ಆರ್‌ಟಿಐ ಅಸ್ತ್ರದಿಂದ ಕಾನೂನು ಹೋರಾಟ

ನಿಧಿ ವಾಪಸ್‌ಗಾಗಿ ವಿಶ್ವವಿದ್ಯಾಲಯ ಸರಣಿ ಕಾನೂನು ಹೋರಾಟ ನಡೆಸಿತು. ಈ ವೇಳೆ ಮಾಹಿತಿ ಹಕ್ಕು ಕಾಯ್ದೆಯಡಿ ಮಹತ್ವದ ಮಾಹಿತಿಗಳನ್ನು ಪಡೆದು, ಅವುಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಯಿತು. ಯಾವುದೇ ಪ್ರಭಾವ ಬಳಸದೆ, ಯಾರನ್ನೂ ದೆಹಲಿಗೆ ಕರೆದೊಯ್ದು ಒತ್ತಡ ಹೇರುವ ಪ್ರಯತ್ನ ಮಾಡದೆ ಕಾನೂನು ಬದ್ಧವಾಗಿ ಹಣವನ್ನು ಮರಳಿ ಪಡೆಯಲಾಗಿದೆ. ಹಣ ವಾಪಸ್‌ ಪಡೆಯುವ ಪ್ರಕ್ರಿಯೆಯಲ್ಲಿ ಸ್ವಲ್ಪ ವಿಳಂಬಗಳಾಗಿದ್ದು, ಅಂತಿಮವಾಗಿ ಹಣ ವಿಶ್ವವಿದ್ಯಾಲಯದ ವಶಕ್ಕೆ ಬಂದಿದೆ. ಈ ಮೂಲಕ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಮಹತ್ವದ ಆರ್ಥಿಕ ಸಂಪನ್ಮೂಲವನ್ನು ಮತ್ತೆ ವಿವಿಯ ಬಳಕೆಗೆ ತರಲಾಗಿದೆ ಎಂದರು.

ವಾಪಸ್‌ ಪಡೆದ ₹610 ಕೋಟಿ ಮೊತ್ತವನ್ನು ವಿಶ್ವವಿದ್ಯಾಲಯ ಈವರೆಗೆ ಮುಟ್ಟಿಲ್ಲ. ಹಣವನ್ನು ಠೇವಣಿ ಇರಿಸಲಾಗಿದೆ. ₹500 ಕೋಟಿಯನ್ನು 10 ವರ್ಷಗಳ ಅವಧಿಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಯಾಗಿ ಇಡಲಾಗುವುದು. ಈ ಸಂಬಂಧ ಶೀಘ್ರವೇ ಟೆಂಡರ್‌ ಕರೆಯಲಾಗುವುದು. ಈ ಹಣದಿಂದ ವಿಶ್ವವಿದ್ಯಾಲಯದ ಸಿಬ್ಬಂದಿ ವೇತನ ಸೇರಿ ಅಗತ್ಯ ವೆಚ್ಚಗಳಿಗೆ ಹಣಕಾಸಿನ ಭದ್ರತೆ ಕಲ್ಪಿಸುವ ಉದ್ದೇಶವೂ ಇದರಲ್ಲಿದೆ. ದೊಡ್ಡ ಮೊತ್ತದ ನಿಧಿಯನ್ನು ತಕ್ಷಣ ಖರ್ಚು ಮಾಡುವ ಬದಲು, ಅದರ ಮೂಲಧನವನ್ನು ಸಂರಕ್ಷಿಸಿ ಬಡ್ಡಿ ಆದಾಯದ ಮೂಲಕ ವಿಶ್ವವಿದ್ಯಾಲಯದ ಆರ್ಥಿಕ ಚಟುವಟಿಕೆಗಳಿಗೆ ನೆರವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.