ಸಾರಾಂಶ
ಮನೆಗೆ ಭೇಟಿ ಸಂದರ್ಭದಲ್ಲಿ ಮತದಾರರು ಲಭ್ಯರಿರದಿದ್ದರೇ ಇನ್ನೊಮ್ಮೆ ಭೇಟಿ ನೀಡಲಾಗುತ್ತದೆ. ಭೇಟಿ ಸಮಯವನ್ನು ಬಿ.ಎಲ್.ಒ ಗಳು ಮುಂಚಿತವಾಗಿ ತಿಳಿಸಲಿದ್ದಾರೆ. ಮತದಾನ ಮಾಡಲು ಏ.13ರಿಂದ 17ರ ವರೆಗೆ ಅವಕಾಶವಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾನ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಿಲ್ಲದ 6100 ಮಂದಿ ವಿಶೇಷ ಚೇತನರು ಹಾಗೂ 85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ತಿಳಿಸಿದ್ದಾರೆ.ಅವರು ಶನಿವಾರ ಕಾಪು ತಾಲೂಕಿನ ಕಲ್ಯಾ ಗ್ರಾಮದ ಹಿರಿಯ ಮಹಿಳಾ ಮತದಾರರೊಬ್ಬರು ಮನೆಯಿಂದಲೇ ಮತದಾನ ನಡೆಸಿದ ಪ್ರಕ್ರಿಯೆಯನ್ನು ವೀಕ್ಷಿಸಿ ಮಾತನಾಡಿದರು.
ಉಡುಪಿ ಜಿಲ್ಲೆಯಲ್ಲಿ ವಿಶೇಷ ಚೇತನ ಹಾಗೂ 85 ವರ್ಷ ಮೇಲ್ಪಟ 4474 ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 1626 ಸೇರಿದಂತೆ ಒಟ್ಟು 6100 ಮತದಾರರಿಗೆ ಮತದಾನ ಮಾಡಲು ಏ.13ರಿಂದ 17ರ ವರೆಗೆ ಅವಕಾಶವಿದೆ ಎಂದರು.ಮನೆ ಮತದಾನಕ್ಕೆ ಅಧಿಕಾರಿಗಳ ತಂಡದಲ್ಲಿ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ,ಬಿ.ಎಲ್.ಓ., ಮೈಕ್ರೋ ವೀಕ್ಷಕರು, ಸಿಬ್ಬಂದಿ ಮತದಾನಕ್ಕೆ ಬೇಕಾದ ಎಲ್ಲ ಪರಿಕರಗಳೊಂದಿಗೆ ಆಗಮಿಸುತ್ತಾರೆ. ಮತದಾನ ಪೂರ್ತಿ ಪ್ರಕ್ರಿಯನ್ನು ವೀಡಿಯೋ ಚಿತ್ರಿಕರಣ ಮಾಡಲಾಗುತ್ತದೆ. ಜೊತೆಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ ಎಂದರು.
ಮನೆಗೆ ಭೇಟಿ ಸಂದರ್ಭದಲ್ಲಿ ಮತದಾರರು ಲಭ್ಯರಿರದಿದ್ದರೇ ಇನ್ನೊಮ್ಮೆ ಭೇಟಿ ನೀಡಲಾಗುತ್ತದೆ. ಭೇಟಿ ಸಮಯವನ್ನು ಬಿ.ಎಲ್.ಒ ಗಳು ಮುಂಚಿತವಾಗಿ ತಿಳಿಸಲಿದ್ದಾರೆ ಎಂದರು.ಈ ಸಂದರ್ಭ ಕಾಪು ತಾಲೂಕಿನ ತಹಸೀಲ್ದಾರ್ ಪ್ರತಿಭಾ ಆರ್. ಹಾಗೂ ಮತಗಟ್ಟೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.