ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಏರಿಕೆ : ಹಂಪಿಯ ಸ್ಮಾರಕಗಳು ಜಲಾವೃತ

| N/A | Published : Jul 04 2025, 11:47 PM IST / Updated: Jul 05 2025, 12:37 PM IST

ಸಾರಾಂಶ

ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದಿಂದ ಶುಕ್ರವಾರ ನದಿಗೆ 62, 610ಕ್ಯುಸೆಕ್‌ ನೀರು ಹರಿಬಿಡಲಾಗಿದೆ.

  ಹೊಸಪೇಟೆ :  ತುಂಗಭದ್ರಾ ಜಲಾಶಯದ ಒಳಹರಿವು ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದಿಂದ ಶುಕ್ರವಾರ ನದಿಗೆ 62, 610ಕ್ಯುಸೆಕ್‌ ನೀರು ಹರಿಬಿಡಲಾಗಿದೆ. ಜಲಾಶಯದ 21 ಕ್ರಸ್ಟ್‌ ಗೇಟ್‌ಗಳನ್ನು ತಲಾ 2.5 ಅಡಿ ಎತ್ತರಿಸಿ ನದಿಗೆ ನೀರು ಬಿಡಲಾಗಿದೆ. ಜಲಾಶಯದಿಂದ ನದಿಗೆ ನೀರು ಬಿಟ್ಟಿರುವ ಹಿನ್ನೆಲೆ ಹಂಪಿಯ ಪುರಂದರದಾಸರ ಮಂಟಪ ಸೇರಿದಂತೆ ಕೆಲ ಸ್ಮಾರಕಗಳು ಜಲಾವೃತವಾಗಿವೆ.

ಜಲಾಶಯದ ಒಳಹರಿವು ಉತ್ತಮವಾಗಿರುವ ಹಿನ್ನೆಲೆ 75.612 ಟಿಎಂಸಿ ನೀರು ಈಗಾಗಲೇ ಸಂಗ್ರಹವಾಗಿದೆ.

ಜಲಾಶಯದ ಮೇಲ್ಭಾಗದಲ್ಲಿ ಮಳೆಯಾಗುತ್ತಿದೆ. ಇನ್ನು ತುಂಗಾ ಜಲಾಶಯದಿಂದ 50 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗಿದೆ. ವರದಾ ನದಿ ನೀರು ಕೂಡ ತುಂಗಭದ್ರಾ ಜಲಾಶಯದ ಒಡಲು ಸೇರುತ್ತಿದೆ. ಜಲಾಶಯದ ಒಳ ಹರಿವು ಏರುತ್ತಲೇ ಸಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿಸಲಾಗುವುದು ಎಂದು ತುಂಗಭದ್ರಾ ಮಂಡಳಿ ಈ ಹಿಂದೆಯೇ ನದಿಪಾತ್ರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಿತ್ತು. ಆಯಾ ಜಿಲ್ಲಾಡಳಿತಗಳು ಡಂಗುರ ಸಾರಿಸಿ ಜನರಲ್ಲಿ ಜಾಗೃತಿ ಮೂಡಿಸಿದೆ. ಈ ಮಧ್ಯೆ ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಕಾಲು ಸೇತುವೆ ಸೇರಿದಂತೆ ಚಕ್ರತೀರ್ಥದ ಬಳಿಯ ಕೆಲ ಮಂಟಪಗಳು ಕೂಡ ಜಲಾವೃತವಾಗಿವೆ.

Read more Articles on