ಸಾರಾಂಶ
ಕೊಪ್ಪಳ : ಈತನಿಗೆ ಕನ್ನಡ ಮತ್ತು ಇಂಗ್ಲಿಷ್ ಓದಲು ಬರುವುದಿಲ್ಲ, ದಿನಪತ್ರಿಕೆಯನ್ನೂ ಓದಲಾಗುತ್ತಿಲ್ಲ. ಬರೆಯುವುದು ಸಹ ಅಷ್ಟಕ್ಕಷ್ಟೇ. ಹೀಗಿದ್ದರೂ ಅಚ್ಚರಿಯ ರೀತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.99.52 ಫಲಿತಾಂಶ (625ಕ್ಕೆ 623 ಅಂಕ) ಬಂದಿದೆ. ಅದೇ ಅಂಕಗಳ ಆಧಾರದಲ್ಲಿ ನ್ಯಾಯಾಲಯದಲ್ಲಿ ಜವಾನ ಹುದ್ದೆ ಗಿಟ್ಟಿಸಿಕೊಂಡಿದ್ದಾನೆ. ಇದರ ಬಗ್ಗೆ ಸಂದೇಹಗೊಂಡ ನ್ಯಾಯಾಧೀಶರ ವರದಿ ಆಧರಿಸಿ ಇದೀಗ ಪೊಲೀಸರಿಗೆ ದೂರು ನೀಡಲಾಗಿದೆ.
ನಗರದ ಸಜ್ಜೆ ಓಣಿ ನಿವಾಸಿ ಪ್ರಭು ಲಕ್ಷ್ಮೀಕಾಂತ ಲೋಕರೆ ಇಂತಹ ಆರೋಪ ಎದುರಿಸುತ್ತಿರುವ ವ್ಯಕ್ತಿ. ಎಸ್ಸೆಸ್ಸೆಲ್ಸಿ ಅಂಕಗಳ ಆಧಾರದಲ್ಲಿ ಯಾದಗಿರಿಯ ಕೋರ್ಟ್‌ನಲ್ಲಿ ಜವಾನ ಹುದ್ದೆ ಆಯ್ಕೆಪಟ್ಟಿಯಲ್ಲಿ ಈತನ ಹೆಸರಿದೆ. ಇದೀಗ ಕೊಪ್ಪಳ ನ್ಯಾಯಾಧೀಶರ ವರದಿಯನ್ನಾಧರಿಸಿ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಏನಿದು ಅವಾಂತರ?
ಪ್ರಭು ಲಕ್ಷ್ಮಿಕಾಂತ ಲೋಕರೆ ಕೊಪ್ಪಳ ಜಿಲ್ಲಾ ನ್ಯಾಯಾಲಯದಲ್ಲಿ ಸ್ಟ್ಯಾವೆಂಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. 7ನೇ ತರಗತಿ ಪಾಸಾದ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ವರ್ಷವಷ್ಟೇ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿರುವ ಖಾಸಗಿ ಪರೀಕ್ಷಾ ಕೇಂದ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು, ಶೇ. 99.52ರಷ್ಟು ಅಂಕ ಪಡೆದಿದ್ದಾನೆ. ರೆಗ್ಯೂಲರ್ ವಿದ್ಯಾರ್ಥಿಯಾಗದೆ, ನೇರವಾಗಿ ಪರೀಕ್ಷೆ ಬರೆದು 623 ಅಂಕ ಗಳಿಸಿದ್ದಾನೆ.
ಹೀಗೆ ಪಡೆದ ಅಂಕಗಳ ಆಧಾರದಲ್ಲಿ ಕಳೆದೆರಡು ತಿಂಗಳ ಹಿಂದೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅರ್ಜಿ ಸಲ್ಲಿಸಿ, ಯಾದಗಿರಿ ನ್ಯಾಯಾಯಲದಲ್ಲಿ ಜವಾನನಾಗಿ ಆಯ್ಕೆಯಾಗಿದ್ದು, ನೇಮಕವಾದವರ ಪಟ್ಟಿಯಲ್ಲಿ ಈತನ ಹೆಸರಿದೆ. ಈತನಿಗೆ ಕನ್ನಡ, ಇಂಗ್ಲಿಷ್ ದಿನಪತ್ರಿಕೆ ಓದಲು ಬರುವುದಿಲ್ಲ. ಬರೆಯುವುದು ಅಷ್ಟಕ್ಕಷ್ಟೇ. ಆದರೂ ಈತನಿಗೆ ಹೆಚ್ಚು ಅಂಕ ಬಂದಿದ್ದು ಹೇಗೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.
ಇದನ್ನು ಮನಗಂಡ ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ನೀಡಿದ ವರದಿಯನ್ನಾಧರಿಸಿ ಕೊಪ್ಪಳ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ನ್ಯಾಯಾಧೀಶರ ಸೂಚನೆ:
ಈತ ಪರೀಕ್ಷೆ ಬರೆದು ಪಾಸಾದನೆ, ಅಥವಾ ಬೇರೆ ಯಾರಾರದೂ ಪರೀಕ್ಷೆ ಬರೆದರೆ, ಈತ ಬರೆದ ಪತ್ರಿಕೆ ಮತ್ತು ಈತನ ಕೈಬರಹಕ್ಕೆ ಹೋಲಿಕೆ ಮಾಡಿದರೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಹಾಗೆಯೇ ಇದರ ಹಿಂದೆ ದೊಡ್ಡ ಅಪರಾಧದ ಜಾಲವೇ ಇರುವ ಸಾಧ್ಯತೆ ಇದೆ. ಇದೆಲ್ಲವನ್ನು ತನಿಖೆ ಮಾಡಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗುವ ಅನ್ಯಾಯ ಸರಿಪಡಿಸಬೇಕು. ವ್ಯವಸ್ಥೆಯನ್ನೇ ಹಾಳು ಮಾಡುವ ಆ ವ್ಯವಸ್ಥೆಯನ್ನು ಪತ್ತೆ ಮಾಡಬೇಕು. ದೇಶದ ಭವಿಷ್ಯವನ್ನು ರಕ್ಷಣೆ ಮಾಡಲು ವಿವರವಾದ ತನಿಖೆ ಮಾಡಬೇಕು ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ತನಿಖೆಯಿಂದ ಸತ್ಯ ತಿಳಿಯಲಿದೆ:
ಈತ ಪಡೆದಿರುವ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ನಕಲಿಯೋ ಅಥವಾ ಪರೀಕ್ಷಾ ಕೇಂದ್ರದಲ್ಲಿ ಅಕ್ರಮವೆಸಗಿ ಈ ರೀತಿಯ ಅಂಕ ಪಡೆದಿದ್ದಾನೋ ಅಥವಾ ಈತನ ಹೆಸರಿನಲ್ಲಿಯೇ ಮತ್ಯಾರೋ ಪರೀಕ್ಷೆ ಬರೆದಿದ್ದಾರೋ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇರುವ ಸಾಧ್ಯತೆ ಇದೆ. ಓದಲು, ಬರೆಯಲು ಬಾರದವನಿಗೆ ಇಷ್ಟೊಂದು ಅಂಕ ನೀಡುವುದು ಎಂದರೇ ದೊಡ್ಡ ದಂಧೆಯೇ ಇರಬೇಕು. ಇದೆಲ್ಲವೂ ಸಮಗ್ರ ತನಿಖೆಯಾದಗಲೇ ಗೊತ್ತಾಗಬೇಕು. ಅಚ್ಚರಿ ಎಂದರೇ ಬನಹಟ್ಟಿಯಲ್ಲಿ ಕೇವಲ ಪ್ರಾಥಮಿಕ ಶಾಲೆ ಮಾತ್ರ ಇದೆಯಂತೆ. ಆದರೂ ಇಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಇರುವುದಾದರೂ ಹೇಗೆ ಎನ್ನುವುದು ತನಿಖೆಯಿಂದಲೇ ತಿಳಿಯಬೇಕಿದೆ.