ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿ ಬೆಂಗಳೂರಿನ 64.62 ಕಿ.ಮೀ. ಉದ್ದದ 43 ರಸ್ತೆಗಳನ್ನು ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.2023-24ನೇ ಸಾಲಿನ ಆಯವ್ಯಯದಲ್ಲಿ 800 ಕೋಟಿ ರು. ವೆಚ್ಚದಲ್ಲಿ ವೈಟ್ ಟಾಪಿಂಗ್ ರಸ್ತೆ ಅಭಿವೃದ್ಧಿ ಪಡಿಸುವ ಘೋಷಣೆ ಮಾಡಲಾಗಿತ್ತು. ಅದರಂತೆ ಬಿಬಿಎಂಪಿ ನಗರದ 43 ರಸ್ತೆಗಳನ್ನು ವೈಟ್ ಟಾಪಿಂಗ್ ಮಾಡುವುದಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತ್ತು. ಜ.5 ರಂದು ನಡೆದ ಸಚಿವ ಸಂಪುಟ ಸಭೆ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದು, ಈ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಹಲವು ಷರತ್ತು:ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ತಾಂತ್ರಿಕ ಅನುಮೋದನೆಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆಯಬೇಕು. ₹100 ಕೋಟಿಗೆ ಕಡಿಮೆ ಇರದಂತೆ ಪ್ಯಾಕೇಜ್ ಮಾಡಿ ಟೆಂಡರ್ ಆಹ್ವಾನಿಸಬೇಕು. ಎಸ್‌ಸಿಪಿ/ಟಿಎಸ್‌ಪಿ ಕಾಯ್ದೆ ಪ್ರಕಾರ ಟೆಂಡರ್ ಆಹ್ವಾನಿಸಬೇಕು. ಕಾಮಗಾರಿ ಬದಲಾವಣೆ ಸಂದರ್ಭದಲ್ಲಿ ಸಚಿವರ ಅನುಮೋದನೆ ಕಡ್ಡಾಯವಾಗಿ ಪಡೆಯಬೇಕು ಎಂದು ರಾಜ್ಯ ಸರ್ಕಾರ ಷರತ್ತು ವಿಧಿಸಿದೆ.
2016-17ರಿಂದ ಈವರೆಗೆ ನಗರದಲ್ಲಿ 150 ಕಿ.ಮೀ ಉದ್ದದ ವಿವಿಧ ರಸ್ತೆಗಳನ್ನು ವೈಟ್ ಟಾಪಿಂಗ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಈಗ ಹೊಸದಾಗಿ 64.62 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಿದರೆ ಒಟ್ಟು 214.62 ಕಿ.ಮೀ ಉದ್ದದ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಗೊಂಡಂತಾಗಲಿದೆ.- - -
ಯಾವ ರಸ್ತೆ ವೈಟ್ ಟಾಪಿಂಗ್ಟ್ಯಾನರಿ ರಸ್ತೆಯನ್ನು ₹23.22 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ₹8.86 ಕೋಟಿ ವೆಚ್ಚದಲ್ಲಿ ಮಸೀದಿ ರಸ್ತೆ, ₹17.43 ಕೋಟಿ ವೆಚ್ಚದಲ್ಲಿ ಡಿ.ಜೆ.ಹಳ್ಳಿ ಮುಖ್ಯ ರಸ್ತೆ, ₹27.34 ಕೋಟಿ ವೆಚ್ಚದಲ್ಲಿ ಹೆಣ್ಣೂರು 80 ಅಡಿ ಮುಖ್ಯ ರಸ್ತೆ, ₹29.10 ಕೋಟಿ ವೆಚ್ಚದಲ್ಲಿ ನಾಗವಾರ ಮುಖ್ಯ ರಸ್ತೆ, ₹10.30 ಕೋಟಿಯಲ್ಲಿ ಸಿಬಿಐ ರಸ್ತೆ, ₹10.19 ಕೋಟಿ ವೆಚ್ಚದಲ್ಲಿ ದಿನ್ನೂರು ಮುಖ್ಯ ರಸ್ತೆ, ₹29.54 ಕೋಟಿ ವೆಚ್ಚದಲ್ಲಿ ವಿ.ನಾಗೇನಗಳ್ಳಿ ರಸ್ತೆ, ₹23.09 ಕೋಟಿ ವೆಚ್ಚದಲ್ಲಿ ಲೋಹರ್ ಅಗರಂ ರಸ್ತೆ, ₹44.92 ಕೋಟಿ ವೆಚ್ಚದಲ್ಲಿ ಎಂಜಿ ರಸ್ತೆ, ₹0.72 ಕೋಟಿ ವೆಚ್ಚದಲ್ಲಿ ರೆಸಿಡೆನ್ಸಿ ರಸ್ತೆ, ₹10.51 ಕೋಟಿ ವೆಚ್ಚದಲ್ಲಿ ಹಳೇ ಅಂಚೆ ಕಚೇರಿ ರಸ್ತೆ, ₹11.99 ಕೋಟಿ ವೆಚ್ಚದಲ್ಲಿ ತಿಮ್ಮಯ್ಯ ರಸ್ತೆ, ₹14.14 ಕೋಟಿ ವೆಚ್ಚದಲ್ಲಿ ನಾರಾಯಣಪಿಳೈ ರಸ್ತೆ, ₹14.75 ಕೋಟಿ ವೆಚ್ಚದಲ್ಲಿ ಎಂಇಐ ರಸ್ತೆ, ₹5.47 ಕೋಟಿ ವೆಚ್ಚದಲ್ಲಿ ಮಲ್ಲೇಶ್ವರ 8ನೇ ಮುಖ್ಯ ರಸ್ತೆ, ₹10.50 ಕೋಟಿ ವೆಚ್ಚದಲ್ಲಿ ಜಯನಗರ 22ನೇ ಕ್ರಾಸ್ ರಸ್ತೆ, ₹7.51 ಕೋಟಿ ವೆಚ್ಚದಲ್ಲಿ ಎಸ್ ಪಿ ರಸ್ತೆ, ₹15.39 ಕೋಟಿ ವೆಚ್ಚದಲ್ಲಿ ಸರ್ಜಾಪುರ ರಸ್ತೆ, ₹13.09 ಕೋಟಿ ವೆಚ್ಚದಲ್ಲಿ ಜವಾಹರ್ ಲಾಲ್ ನೆಹರು ರಸ್ತೆ, ₹13.17 ಕೋಟಿ ವೆಚ್ಚದಲ್ಲಿ ಜಾಲಹಳ್ಳಿ ಕ್ರಾಸ್ 100 ಅಡಿ ರಸ್ತೆ, ₹23.68 ಕೋಟಿ ವೆಚ್ಚದಲ್ಲಿ ಹಾಲಿಡೇ ಗ್ರಾಮ ರಸ್ತೆ, ₹30.75 ಕೋಟಿ ವೆಚ್ಚದಲ್ಲಿ ಕೋಡಿಪಾಳ್ಯ ರಸ್ತೆ ಹಾಗೂ ₹4.86 ಕೋಟಿ ವೆಚ್ಚದಲ್ಲಿ ಬುಲ್ ಟೆಂಪಲ್ ರಸ್ತೆಯನ್ನು ಮೊದಲ ಹಂತದಲ್ಲಿ ಕೈಗೊಳ್ಳಲಾಗುತ್ತಿದೆ.ಎ
ಎರಡನೇ ಹಂತದಲ್ಲಿ ಗಾಂಧಿನಗರದ ವಿವಿಧ ರಸ್ತೆಗಳನ್ನು ₹45.28 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ರೇಸ್ ಕೋರ್ಸ್ ರಸ್ತೆ, ಪಶ್ಚಿಮ ಕಾರ್ಡ್ ರಸ್ತೆ, ಅತ್ತಿಗುಪ್ಪೆ 14ನೇ ಮುಖ್ಯ ರಸ್ತೆ, ರೈಲ್ವೆ ಸಮಾನಂತರ ರಸ್ತೆ ಹೀಗೆ ವಿವಿಧ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ.