ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ, ಶಾಸಕ ಎಂ.ಆರ್.ಮಂಜುನಾಥ್ ವಧುವಿನ ಕೈಗೆ ಮಾಂಗಲ್ಯ ವಿತರಣೆ ಮಾಡಿದರು. ಬುಧವಾರ ಬೆಳಗ್ಗೆ 10.05 ರಿಂದ 10.40 ರವರೆಗೆ ಸಲ್ಲುವ ಶುಭ ತುಲಾ ಲಗ್ನದಲ್ಲಿ ಸಾಮೂಹಿಕ ವಿವಾಹ ಬೆಳಗ್ಗೆ 10.07 ರ ವೇಳೆಗೆ ವರರು ವಧುಗಳ ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ 64 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಪೈಕಿ ತಮಿಳುನಾಡು ರಾಜ್ಯದಿಂದಲೂ 5 ಜೋಡಿಗಳು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದು ವಿಶೇಷವಾಗಿತ್ತು.ಪ್ರಾಧಿಕಾರದ ವತಿಯಿಂದ ಮಧುವಿಗೆ ಚಿನ್ನದ 4 ಗ್ರಾಂ. ತೂಕದ ಚಿನ್ನದ ತಾಳಿ, ಬೆಳ್ಳಿ ಕಾಲುಂಗುರ, ಸೀರೆ ರವಿಕೆ, ವರನಿಗೆ ಪಂಚೆ, ಶರ್ಟ್, ಟವಲ್, ಪೇಟ ನೀಡಲಾಯಿತು. ವೇದಿಕೆ ಕಾರ್ಯಕ್ರಮದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ವಧು ವರರಿಗೆ ಆಶೀರ್ವಚನ ನೀಡುತ್ತಾ, ಧಾರ್ಮಿಕ ಕೇಂದ್ರದಲ್ಲಿ ವಿವಾಹವಾದರೆ ಒಳಿತು ಆಗುತ್ತದೆ ಎಂಬ ನಂಬಿಕೆ. ಮಲೆ ಮಹದೇಶ್ವರ ಸ್ವಾಮಿಯವರ ಪುಣ್ಯ ಸನ್ನಿಧಿಯಲ್ಲಿ ವಿವಾಹವಾಗಿರುವ ನವ ಜೋಡಿಗಳು ರಾಗ, ದ್ವೇಷ, ಅಸೂಯೆ ಬಿಟ್ಟು ಪರಸ್ಪರ ಅನ್ಯೂನ್ಯತೆಯಿಂದ ಅರಿತು ಸುಖ ಶಾಂತಿಯಿಂದ ಬಾಳ್ವೆ ಮಾಡಿ. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಮಲೆ ಮಾದಪ್ಪ ಬೆಟ್ಟಗುಡ್ಡ ಕಾಡುಗಳಲ್ಲಿ ಸುತ್ತಾಡಿ ನೆಲೆ ನಿಂತಿದ್ದು, ಚಾಮರಾಜನಗರ ಜಿಲ್ಲೆಯನ್ನು ಕತ್ತಲರಾಜ್ಯ ಎಂದು ಕರೆಯುತ್ತಿದ್ದರು. ಮಲೆಮಾದಪ್ಪ ಆಗಮನದ ಮೂಲಕ ಬೆಳಕಾಯಿತು. ಇಂದಿನ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಪ್ರಾಧಿಕಾರದ ಕಾರ್ಯದರ್ಶಿ ರಘು ನೇತೃತ್ವದಲ್ಲಿ ಅಚ್ಚುಕಟ್ಟಾಗಿ ನೆರೆವೆರಿಸಿರುವುದು ಶ್ಲಾಘನೀಯ ಎಂದರು.ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ಸಾಮೂಹಿಕ ವಿವಾಹಗಳು ಇನ್ನೂ ಹೆಚ್ಚು ಆಗಬೇಕು. ಈ ದಿಸೆಯಲ್ಲಿ ಸರ್ಕಾರ ಮುಜರಾಯಿ ಇಲಾಖೆಯಿಂದ 50 ಸಾವಿರ ರು.ಗಳ ಪ್ರೋತ್ಸಾಹ ಧನ ನೀಡಲಾಗುವ ವ್ಯವಸ್ಥೆ ಇದೆ. ಚಾಮುಂಡಿ ಬೆಟ್ಟ, ಘಾಟಿ ಸುಬ್ರಮಣ್ಯ ಇನ್ನಿತರೆ ದೇವಾಲಯಗಳನ್ನು ಮುಜರಾಯಿ ಇಲಾಖೆಗೆ ಒಳಪಡಿಸಲಾಗಿದೆ. 50 ರಿಂದ 1 ಕೋಟಿ ಭಕ್ತಾಧಿಗಳು ಬೇಟಿ ನೀಡುತ್ತಿದ್ದು, ದೇವಾಲಯಗಳಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಲು ಪ್ರಾಧಿಕಾರ ರಚನೆ ಮಾಡಲು ಸೂಚಿಸಲಾಗಿದೆ. ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ. ಮಲೆ ಮಹದೇಶ್ವರ ಬೆಟ್ಟದ ಆಧುನಿಕ ಅಭಿವೃದ್ಧಿಗೆ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಶ್ರಮಿಸಿದರು. ಬಳಿಕ ಎಚ್.ಎಸ್. ಮಹಾದೇವಪ್ರಸಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಿ ಪ್ರಾಧಿಕಾರದ ರಚನೆ ಮಾಡಿದರು. ಅಲ್ಲಿಂದ ಮಲೆ ಮಹದೇಶ್ವರ ಬೆಟ್ಟದಲ್ಲಿ ಅತಿ ಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗಿವೆ. ಇನ್ನು ಹೆಚ್ಚಿನ ಅಭಿವೃದ್ಧಿ ಆಗಲಿ ಎಂದು ತಿಳಿಸಿದರು.
ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಲಕ್ಷಾಂತರ, ಕೋಟ್ಯಂತರ ರು.ಗಳನ್ನು ವ್ಯಯಿಸಿ ಮದುವೆ ಮಾಡಿ ದುಂದು ವೆಚ್ಚ ಮಾಡುವ ಬದಲು ಸರಳ ವಿವಾಹವಾದರೆ ಉತ್ತಮ. ಬಡವರು ಸಾಲದ ಸುಳಿಗೆ ಸಿಲುಕಿರುವ ಅನೇಕ ಉದಾಹರಣೆಗಳು ಉಂಟು. ಸರಳ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿರುವ ನೂತನ ವಧು ವರರು ಸುಖ ಶಾಂತಿ ನೆಮ್ಮದಿಯಿಂದ ಬಾಳಿ ಎಂದು ಆಶಿಸಿದರು.ನಮ್ಮ ಕ್ಷೇತ್ರ ಭೌಗೋಳಿಕವಾಗಿ ವಿಸ್ತಾರವಾದ ಕ್ಷೇತ್ರ ಇಂತಹ ಕ್ಷೇತ್ರಕ್ಕೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಬೇಕು. ನಮ್ಮ ಭಾಗದಲ್ಲಿ ಅನೇಕ ಧಾರ್ಮಿಕ ಸ್ಥಳಗಳಿದ್ದು ದೇವಾಲಯಗಳಿಗೆ ತೆರಳುವ ರಸ್ತೆ ಅಭಿವೃದ್ಧಿಗೂ ಕ್ರಮವಹಿಸಬೇಕು. ಹಾಗೇ ರಾಮಾಪುರದಲ್ಲಿ ನೂತನ ಉದ್ಘಾಟನೆಯಾಗುತ್ತಿರುವ ಡಯಾಲೀಸಿಸ್ ಕೇಂದ್ರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಲು ಮನವಿ ಮಾಡಿದರು.
ಸಾಲೂರು ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶ್ರೀಮಂತರಿಗೆ ತಿರುಪತಿಯಲ್ಲಿ ಸಾಮೂಹಿಕ ವಿವಾಹ, ಬಡವರಿಗೆ ಮಹದೇಶ್ವರ ಬೆಟ್ಟದಲ್ಲಿ. ಹೀಗಾಗಿ ಇಲ್ಲಿನ ನವ ವಧು ವರರು ಪ್ರತಿ ವರ್ಷ ನಡೆಯುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಶ್ರೀ ಕ್ಷೇತ್ರ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ನಡೆಯುತ್ತಿದೆ. ಎಲ್ಲರಿಗೂ ಒಳಿತು ಮಾಡಲಿ ಎಂದು ನೂತನ ವಧು ವರರಿಗೆ ಶುಭ ಹಾರೈಸಿದರು.ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಸ್ತಾವಿಕ ಮಾತನಾಡಿ, ಮಲೆ ಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೂಲಕ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಜೊತೆಗೆ ಧಾರ್ಮಿಕ ವಿಧಿ ವಿಧಾನಗಳ ಜೊತೆ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ವಧು ವರರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಹರವೆ ಮಠದ ಸರ್ಪಭೂಷಣ ಸ್ವಾಮೀಜಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಚಾಮಲ್ ಅಧ್ಯಕ್ಷ ನಾಗೇಂದ್ರ, ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರ್ ಗುರುಪ್ರಸಾದ್, ಗ್ರಾಪಂ ಅಧ್ಯಕ್ಷೆ ಅರ್ಚನ, ವಧು ವರರು, ಸಂಬಂಧಿಕರು ಉಪಸ್ಥಿತರಿದ್ದರು.ಮದುವೆಯ ಭೋಜನ ವ್ಯವಸ್ಥೆ: ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ನವ ವಧು-ವರರು ಸೇರಿದಂತೆ ಸಂಬಂಧಿಕರು ಭಕ್ತಾದಿಗಳಿಗೆ ಪ್ರಾಧಿಕಾರದ ವತಿಯಿಂದ ವಿಶೇಷ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಇತರೆ ಮದುವೆಗಳಲ್ಲಿ ನೀಡಲಾಗುವ ಎಲ್ಲ ರೀತಿಯ ಮದುವೆಯ ಭೋಜನ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು.21ಸಿಎಚ್ಎನ್11ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನೂತನ ವಧು ವರರಿಗೆ ಮಾಂಗಲ್ಯ ವಿತರಣೆ ಮಾಡಿದರು.21ಸಿಎಚ್ಎನ್12ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಉದ್ಘಾಟನೆಯನ್ನು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಶ್ರೀ ನೆರವೇರಿಸಿದರು.21ಸಿಎಚ್ಎನ್13
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 64 ನೂತನ ಜೋಡಿಗಳೊಂದಿಗೆ ಗಣ್ಯರು.21ಸಿಎಚ್ಎನ್14ಹನೂರು ತಾಲೂಕಿನ ಮಲೆ ಮಾದೇಶ್ವರ ಬೆಟ್ಟದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಗಣ್ಯರು ನೂತನ ವಧುವರಿಗೆ ಶುಭ ಹಾರೈಸಿದರು.