ಕೊಡಗಿನಲ್ಲಿ ವಾಡಿಕೆಗಿಂತ ಶೇ.64ರಷ್ಟು ಮಳೆ ಕೊರತೆ

| Published : Apr 30 2024, 02:14 AM IST

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಬೇಸಿಗೆಯಲ್ಲೂ ಕೂಡ ವಾಡಿಕೆ ಮಳೆಯಾಗಿಲ್ಲ. ಕೇವಲ 39 ಮಿ.ಮೀ. ಮಳೆಯಾಗಿದೆ.

ವಿಘ್ನೇಶ್‌ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಳೆದ ಮುಂಗಾರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಕೊರತೆ ಎದುರಿಸಿದ್ದ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಬೇಸಗೆಯಲ್ಲೂ ಕೂಡ ವಾಡಿಕೆ ಮಳೆಯಾಗಲಿಲ್ಲ. ಜನವರಿಯಿಂದ ಇಲ್ಲಿಯವರಿಗೆ 110 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಕೇವಲ 39 ಮಿ.ಮೀ ಮಾತ್ರ ಮಳೆಯಾಗಿದ್ದು, ಜಿಲ್ಲೆಯಲ್ಲಿ ಶೇ.64ರಷ್ಟು ಮಳೆ ಕೊರತೆ ಉಂಟಾಗಿದೆ.

ಏಪ್ರಿಲ್ ತಿಂಗಳಲ್ಲಿ ವಾಡಿಕೆ ಪ್ರಕಾರ 80 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಜಿಲ್ಲೆಯಲ್ಲಿ ಕೇವಲ 19 ಮಿ.ಮೀ ಮಳೆಯಾಗಿದೆ. ಶೇ.76ರಷ್ಟು ಮಳೆ ಕೊರತೆ ಉಂಟಾಗಿದೆ.

2024ರ ಜನವರಿ ತಿಂಗಳಿಂದ ಏಪ್ರಿಲ್ ತಿಂಗಳ ಅಂತ್ಯಕ್ಕೆ ಮಡಿಕೇರಿ ತಾಲೂಕಿನ ವಾಡಿಕೆ ಮಳೆ 89 ಮಿ.ಮೀ ಮಳೆ ಆಗಬೇಕಿದ್ದು, 54 ಮಿ.ಮೀ ಮಳೆಯಾಗಿದ್ದು, ಶೇ.39ರಷ್ಟು ಮಳೆ ಕೊರತೆ ಕಂಡುಬಂದಿದೆ. ಸೋಮವಾರಪೇಟೆ ತಾಲೂಕಿನಲ್ಲಿ 88 ಮಿ.ಮೀ ಮಳೆಯಾಗಬೇಕಿದ್ದು, 32 ಮಿ.ಮೀ ಮಳೆಯಾಗಿ ಶೇ.63ರಷ್ಟು ಮಳೆ ಕುಂಠಿತವಾಗಿದೆ.

ವಿರಾಜಪೇಟೆ ತಾಲೂಕಿನಲ್ಲಿ 100 ಮಿ.ಮೀ ಮಳೆಯಾಗಬೇಕಿದ್ದು, 35.8 ಮಿಮೀ ಮಳೆಯಾಗಿದ್ದು, ಶೇ.64ರಷ್ಟು ಕಡಿಮೆಯಾಗಿದೆ. ಕುಶಾಲನಗರ ತಾಲೂಕಿನಲ್ಲಿ 79 ಮಿ.ಮೀ ಮಳೆಯಾಗಬೇಕಿದ್ದು, 40 ಮಿ.ಮೀ ಮಳೆಯಾಗಿದ್ದು, ಶೇ.49 ರಷ್ಟು ಮಳೆ ಕೊರತೆ ಉಂಟಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ 99 ಮಿ.ಮೀ ಮಳೆಯಾಗಬೇಕಿದ್ದು, 23 ಮಿ.ಮೀ ಮಾತ್ರ ಮಳೆಯಾಗಿದ್ದು ಸುಮಾರು ಶೇ.74ರಷ್ಟು ಮಳೆ ಕೊರತೆಯುಂಟಾಗಿದೆ.

ಹೋಬಳಿ ವಿವರ : ಜಿಲ್ಲೆಯ ಹೋಬಳಿವಾರು ಮಳೆ ಕೊರತೆ ವಿವರ, ಮಡಿಕೇರಿ ಶೇ-42, ಭಾಗಮಂಡಲ ಶೇ-59, ನಾಪೋಕ್ಲು ಶೇ-68, ಸಂಪಾಜೆ ಶೇ-64, ಸೋಮವಾರಪೇಟೆ ಶೇ -72, ಕೊಡ್ಲಿಪೇಟೆ ಶೇ-62, ಶನಿವಾರಸಂತೆ ಶೇ-75, ಶಾಂತಳ್ಳಿ ಶೇ-47, ವಿರಾಜಪೇಟೆ ಶೇ-64, ಅಮ್ಮತ್ತಿ ಶೇ-73, ಕುಶಾಲನಗರ ಶೇ-49, ಸುಂಟಿಕೊಪ್ಪ ಶೇ-50ರಷ್ಟು ಮಳೆ ಕೊರತೆಯಾಗಿದೆ.

ತೀರಾ ಮಳೆ ಕಡಿಮೆ : ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ತೀರಾ ಮಳೆ ಕೊರತೆ ಕಂಡುಬಂದಿದೆ. ಬೇಸಗೆ ಅವಧಿಯಲ್ಲಿ ವಾಡಿಕೆ ಮಳೆಯೂ ಆಗದಿರುವ ಹಿನ್ನೆಲೆಯಲ್ಲಿ ಈ ಭಾಗದ ಕೃಷಿಕರು ಕೂಡ ಕಂಗಾಲಾಗಿದ್ದಾರೆ. ಪೊನ್ನಂಪೇಟೆ ಹೋಬಳಿಯಲ್ಲಿ ಶೇ -75, ಬಾಳೆಲೆ ಶೇ-86, ಹುದಿಕೇರಿ ಶೇ-79, ಶ್ರೀಮಂಗಲ ಹೋಬಳಿ ಶೇ-63ರಷ್ಟು ಮಳೆ ಕೊರತೆಯನ್ನು ಎದುರಿಸುತ್ತಿದೆ.

ಒಣಗಿದ ಕಾಫಿ ಗಿಡಗಳು: ಕೊಡಗಿನಲ್ಲಿ ಬಿಸಿಲ ಕಾವು ಏರುತ್ತಿರುವ ಪರಿಣಾಮ ಕಾಫಿ ಗಿಡಗಳು ಬಾಡಿ ಹೋಗುತ್ತಿವೆ. ಕೊಡಗಿನ ಕೆಲವು ಕಡೆ ಬಿಸಿಲಿಗೆ ನೀರಿಲ್ಲದೆ ಕಾಫಿ ಗಿಡಗಳು ಒಣಗಿದ್ದು, ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ನಾಕೂರುವಿನ ತೋಟವೊಂದರಲ್ಲಿ ಅಪಾರ ಪ್ರಮಾಣದಲ್ಲಿ ಕಾಫಿ ಗಿಡಗಳು ಒಣಗಿ ಹೋಗಿದ್ದು, ಈ ಭಾಗದ ಬೆಳೆಗಾರರು ಕಂಗಾಲಾಗಿದ್ದಾರೆ. ಇದಲ್ಲದೆ ಮಳೆ ಕೊರತೆ ಎದುರಿಸಿದ ವಿವಿಧ ಕಡೆಗಳಲ್ಲೂ ಕೂಡ ಕಾಫಿ ತೋಟಗಳು ಸೇರಿದಂತೆ ಮೆಣಸು ಬಳ್ಳಿಗಳು ಬಾಡಲಾರಂಭಿಸಿದೆ. ಇನ್ನೂ ಮಳೆಯಾಗಲು ಒಂದು ತಿಂಗಳು ಕಾಯಬೇಕಾಗಿರುವುದರಿಂದ ಏನು ಮಾಡಬೇಕೆಂದು ತೋಚದೆ ಬೆಳೆಗಾರರು ಕಂಗಾಲಾಗಿದ್ದಾರೆ.

ಮಳೆ ಕೊರತೆ ವಿವರ : ಕೊಡಗು - ಶೇ.64, ಮಡಿಕೇರಿ - ಶೇ.39, ಸೋಮವಾರಪೇಟೆ - ಶೇ.63, ವಿರಾಜಪೇಟೆ - ಶೇ.64 ಕುಶಾಲನಗರ -ಶೇ.49, ಪೊನ್ನಂಪೇಟೆ -ಶೇ.74

ಮಳೆ ಇಲ್ಲದೆ ಈ ವರ್ಷ ವಿಪರೀತ ಬರ ಉಂಟಾಗಿದೆ. ಮಳೆಗಾಲದಲ್ಲಿ ಸಮರ್ಪಕ ಮಳೆಯಾಗದ ಹಿನ್ನೆಲೆಯಲ್ಲಿ ಕಾಫಿ ಗಿಡಗಳು ಒಣಗಿ ಹೋಗಿದೆ. ಕಾಫಿ ಗಿಡಗಳ ಬುಡಗಳು ಕೂಡ ಗೆದ್ದಿಲು ಹಿಡಿದಿದೆ. ಇದು ಮುಂಬರುವ ಫಸಲಿನ ಮೇಲೆ ತೀವ್ರ ಪರಿಣಾಮ ಬೀರಲಿದೆ. ನೀರಿನಾಂಶ ಇಲ್ಲದೆ ಮಣ್ಣು ಒಣಗಿ ಹೋಗಿದ್ದು, ಫಲವತ್ತತೆ ತೀವ್ರ ಕುಂಠಿತವಾಗಿದೆ. ಶೇ.70ರಷ್ಟು ಮೆಣಸು ಬಳ್ಳಿಗಳು ಒಣಗಿ ಹೋಗಿದೆ ಎಂದು ನಾಲ್ಕೇರಿ ಗ್ರಾ.ಪಂ. ಸದಸ್ಯ ಸಚಿನ್ ಪೆಮ್ಮಯ್ಯ ಹೇಳಿದರು.

ಮಳೆ ಇಲ್ಲದೆ ಕೊಡಗಿನ ಬಹುತೇಕ ರೈತರು ಕಂಗೆಟ್ಟಿದ್ದಾರೆ. ತಮ್ಮ ಕೃಷಿ ಚಟುವಟಿಕೆಗೆ ನೀರು ಹಾಕಲು ತೀರಾ ಸಮಸ್ಯೆಯಾಗಿದೆ. ಜಾನುವಾರುಗಳಿಗೆ ಕೂಡ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಬರ ಪರಿಹಾರ ಘೋಷಿಸಿದ್ದು, ಅದನ್ನು ರಾಜ್ಯ ಸರ್ಕಾರ ರೈತರಿಗೆ ತಲುಪಿಸಬೇಕು ಎಂದು ಕೊಡಗು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಚೋಡುಮಾಡ ದಿನೇಶ್ ತಿಳಿಸಿದರು.