ಸಾರಾಂಶ
- 1.35 ಎಕರೆ ಸುಟ್ಟುಹೋದ ಘಟನೆ ಕಂಡು ರೈತ ಕಣ್ಣೀರು - - - ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದ ಶಾಂತಮ್ಮ ಎಂಬವರಿಗೆ ಸೇರಿದ 1.35 ಎಕರೆಯಲ್ಲಿ ಬೆಳೆದಿದ್ದ 3 ವರ್ಷದ 650 ಅಡಕೆ ಮರಗಳ ತೋಟಕ್ಕೆ ಶುಕ್ರವಾರ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ನಾಶವಾದ ಘಟನೆ ನಡೆದಿದೆ.ಮಧ್ಯಾಹ್ನ 12.30ರ ಸುಮಾರಿಗೆ ಬೋರ್‌ವೆಲ್ ಆನ್ ಆಗುತ್ತಿದ್ದಂತೆ ವಿದ್ಯುತ್ ಪ್ರವಹಿಸಿ, ಬೆಂಕಿ ತಗಲುಗಿದೆ. ತೋಟಕ್ಕೆ ಕಳೆನಾಶಕ ಸಿಂಪಡಿಸಿದ್ದರಿಂದ ಹುಲ್ಲು, ಗಿಡಗಳು ಒಣಗಿದ್ದವು. ಹೀಗಾಗಿ, ವಿದ್ಯುತ್ ಬಂದ ತಕ್ಷಣವೇ ಶಾರ್ಟ್ ಸರ್ಕ್ಯೂಟ್ ಸಂಭವಿಸಿ, ಈ ದುರ್ಘಟನೆ ನಡೆದಿದೆ. ಸುತ್ತಮುತ್ತಲಿನ ರೈತರು ಬೆಂಕಿ ನಂದಿಸಲು ಶ್ರಮಿಸಿದರು. ಪರಿಸ್ಥಿತಿ ಕೈ ಮೀರಿ ಇಡೀ ತೋಟವೇ ಸುಟ್ಟು ಕರಕಲಾಗಿದೆ. ಲಕ್ಷಾಂತರ ರು. ನಷ್ಟವಾಗಿದೆ ಎಂದು ರೈತ ಮಹಿಳೆ ಶಾಂತಮ್ಮ ಪುತ್ರ ಕೆ.ಎನ್.ಬಸವನಗೌಡ ಕಣ್ಣೀರು ಹಾಕಿದರು.
ಜಮೀನಿಗೆ ಭೇಟಿ, ಪರಿಶೀಲನೆ:ಅಡಕೆ ತೋಟ ವಿದ್ಯುತ್‌ಗೆ ಬಲಿಯಾದ ವಿಷಯ ತಿಳಿದು ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರು ಆರ್‌ಐ ಧನಂಜಯ್ ಅವರಿಗೆ ಸೂಚನೆ ನೀಡಿ, ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದರು. ವಿಎ ದಿಲೀಪ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಾಲೂಕು ಆಡಳಿತಕ್ಕೆ ವರದಿ ಸಲ್ಲಿಸಿದರು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಭುಶಂಕರ್, ಬೆಸ್ಕಾಂ ಸಿಬ್ಬಂದಿ ಮುದೇಗೌಡರ ನಾಗರಾಜ್, ಓಬಳೇಶ್ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಹಾರ ಕೊಡಲಾಗಲ್ಲ-ಬೆಸ್ಕಾಂ:ವಿಷಯದ ತಿಳಿದು ಸ್ಥಳಕ್ಕೆ ಬೆಸ್ಕಾಂ ಎಇಇ ಸುಧಾಮಣಿ, ಎಸ್ಒ ರಂಗನಾಥ್ ಭೇಟಿ ನೀಡಿ ಪರಿಶೀಲಿಸಿರು. ವಿದ್ಯುತ್ ಮೇನ್ ವೈರ್ ತುಂಡಾಗಿ ಬಿದ್ದಿದ್ದರೆ ಅದು ಬೆಸ್ಕಾಂ ಜವಾಬ್ದಾರಿ ಆಗಿರುತ್ತಿತ್ತು. ಇಲ್ಲಿ ಸ್ಟಾರ್ಟರ್ ಡಬ್ಬಿಯಿಂದ ಮೋಟಾರ್‌ಗೆ ಸಂಪರ್ಕಿಸುವ ಔಟ್‌ಪುಟ್ ಸಪ್ಲೇ ವೈರ್ ಬ್ಲಾಸ್ಟ್‌ನಿಂದಾಗಿ ವಿದ್ಯುತ್ ಅವಘಡವಾಗಿದೆ. ಅದಕ್ಕೆ ನಾವು ಜವಾಬ್ದಾರರಲ್ಲ. ಪರಿಹಾರ ಕೊಡಲು ಬರುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.
- - -ಬಾಕ್ಸ್ * ಮಾನವೀಯತೆಯಿಂದ ಪರಿಹಾರ ನೀಡಿ: ಶಾಸಕ ತಾಕೀತು
ಬೆಂಕಿ ಅವಘಡಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಎಇಇ ಸುಧಾಮಣಿ ಜೊತೆ ದೂರವಾಣಿ ಸಂಭಾಷಣೆ ನಡೆಸಿದ ಶಾಸಕ ಬಿ.ದೇವೇಂದ್ರಪ್ಪ, ಅವಘಡ ಆಗಿರುವುದು ನಿಜ. ಆದರೆ, ಇಲಾಖೆಯಿಂದ ಅವಘಡವಾಗಿದೆಯೋ ಅಥವಾ ಇಲ್ಲ ಎಂಬುದು ಪ್ರಶ್ನೆಯಲ್ಲ. ಈ ಘಟನೆಯಿಂದ ರೈತ ಬೆಳೆದ 650 ಅಡಕೆ ಗಿಡಗಳು ಸಂಪೂರ್ಣ ಸುಟ್ಟುಹೋಗಿವೆ. ಮೊನ್ನೆಯಷ್ಟೇ ತಾಲೂಕಿನ ಗ್ರಾಮವೊಂದರಲ್ಲಿ ಗುಡಿಸಲಿಗೆ ಬೆಂಕಿ ಬಿದ್ದಾಗಲೂ ಇಲಾಖೆಗೂ, ಘಟನೆಗೂ ಸಂಬಂಧವಿಲ್ಲ ಎಂದು ಉತ್ತರಿಸಿದ್ದೀರಿ. ನೊಂದವರಿಗೆ ವೈಯಕ್ತಿಕವಾಗಿ ₹50 ಸಾವಿರ ಪರಿಹಾರ ನೀಡಿದ್ದೇನೆ. ಕಾನೂನಾತ್ಮವಾಗಿ ಎಲ್ಲವನ್ನೂ ಪರಿಗಣಿಸಬೇಡಿ. ಮಾನವೀಯ ದೃಷ್ಟಿಯಿಂದ ನಷ್ಟವೆಂದು ಪರಿಗಣಿಸಿ. ಇಲಾಖೆ ನಿಯಮಗಳ ಅನುಸಾರ ನೊಂದ ರೈತನಿಗೆ ಪರಿಹಾರ ನೀಡಿ ಎಂದು ಸೂಚನೆ ನೀಡಿದರು.- - - -29ಜೆ.ಎಲ್.ಆರ್.ಚಿತ್ರ1ಎ:
ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಶಾಂತಮ್ಮ ಎಂಬವರ ಅಡಕೆ ತೋಟಕ್ಕೆ ಬೆಂಕಿ ತಗುಲಿರುವುದು.