ಕುಡಿತಕ್ಕಾಗಿ 6500 ರು. ಮೌಲ್ಯದ ಮೀನು ಕದ್ದು 140 ರು.ಗೆ ಮಾರಿದ ಭೂಪ!

| Published : Jun 20 2024, 01:05 AM IST

ಕುಡಿತಕ್ಕಾಗಿ 6500 ರು. ಮೌಲ್ಯದ ಮೀನು ಕದ್ದು 140 ರು.ಗೆ ಮಾರಿದ ಭೂಪ!
Share this Article
  • FB
  • TW
  • Linkdin
  • Email

ಸಾರಾಂಶ

ಅಂಜಲ್ ಮೀನು ಕಳವು ಪ್ರಕರಣವೊಂದು ಕಾರ್ಕಳ ನಗರ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಬಳಿಕ ಅಂಜಲ್ ಮೀನು ಮಾಲಕ, ಕದ್ದವನು ಹಾಗೂ ಅದನ್ನು ತಿಂದವನ ನಡುವೆ ರಾಜಿ ಸಂಧಾನ ನಡೆದು ವಿವಾದ ಠಾಣೆಯಲ್ಲೇ ಬಗೆಹರಿದ ವಿಚಿತ್ರ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ಅಂಜಲ್ ಮೀನು ಕಳವು ಪ್ರಕರಣವೊಂದು ಕಾರ್ಕಳ ನಗರ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ಬಳಿಕ ಅಂಜಲ್ ಮೀನು ಮಾಲಕ, ಕದ್ದವನು ಹಾಗೂ ಅದನ್ನು ತಿಂದವನ ನಡುವೆ ರಾಜಿ ಸಂಧಾನ ನಡೆದು ವಿವಾದ ಠಾಣೆಯಲ್ಲೇ ಬಗೆಹರಿದ ವಿಚಿತ್ರ ಘಟನೆ ನಡೆದಿದೆ.

ಘಟನೆ ವಿವರ:

ಗ್ರಾಹಕರೊಬ್ಬರು ಜೂನ್‌ 9ರಂದು ಕಾರ್ಕಳದ ಮೀನು ಮಾರುಕಟ್ಟೆಯ ವ್ಯಾಪಾರಿ ಮಾಲಾ ಎಂಬವರ ಬಳಿ ದುಬಾರಿ ಅಂಜಲ್‌ ಮೀನನ್ನು ಬುಕ್‌ ಮಾಡಿದ್ದರು. ಅದರಂತೆ ಮಾಲಾ ಮರುದಿನ, 6.5 ಕೆ.ಜಿ. ತೂಕದ 6500 ರು. ಮೌಲ್ಯದ ಅಂಜಲ್ ಮೀನನ್ನು ಪಡೆದು ಫ್ರಿಡ್ಜ್‌ನಲ್ಲಿಟ್ಟಿದ್ದರು. ಅದರಂತೆ ಗ್ರಾಹಕರಿಗೆ ಮೀನು ನೀಡಲು ಫ್ರಿಡ್ಜ್‌ನಲ್ಲಿಟ್ಟಿದ್ದ ಮೀನು ತೆಗೆಯಲು ಹೋದಾಗ ಮೀನು ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಲಾ ಅವರ ಪುತ್ರ ಕಾರ್ಕಳ ನಗರ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿದ ಪೊಲೀಸರು ಅನುಮಾನದ ಮೇರೆಗೆ ಸೂರಜ್ ಎಂಬಾತನನ್ನು ವಿಚಾರಿಸಿದ್ದು, ಆತ ಕುಡಿತಕ್ಕಾಗಿ ಅಂಜಲ್ ಮೀನು ಕಳವುಗೈದಿರುವುದನ್ನು ಒಪ್ಪಿಕೊಂಡಿದ್ದಾನೆ. ತಾನು ಕದ್ದ 6500 ರು. ಮೌಲ್ಯದ ಅಂಜಲ್ ಮೀನನ್ನು ಮದ್ಯಕ್ಕಾಗಿ ಕೇವಲ 140 ರು.ಗೆ ಮಾರ್ಕೆಟ್ ಬಳಿಯ ಹೂವಿನ ವ್ಯಾಪಾರಿ ವಿಶಾಲ್ ಎಂಬಾತನಿಗೆ ಮಾರಾಟ ಮಾಡಿದ್ದಾನೆ. ಈತನ ಹೇಳಿಕೆ ಆಧರಿಸಿ ಪೊಲೀಸರು ಮೀನು ಖರೀದಿಸಿದ್ದ ಹೂವಿನ ವ್ಯಾಪಾರಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದು, ಆತ ಕೂಡ ಸತ್ಯ ಒಪ್ಪಿಕೊಂಡಿದ್ದಾನೆ.

ಬಳಿಕ ಮೀನು ವ್ಯಾಪಾರಿ ಮಾಲಾ ಅವರಿಗೆ ಅಂಜಲ್ ಮೀನಿನ ನಿಜವಾದ ಮೌಲ್ಯವನ್ನು ನೀಡಲು ಒಪ್ಪಿಕೊಂಡಿದ್ದಾನೆ. ಸದ್ಯಕ್ಕೆ 3 ಸಾವಿರ ರು. ಪಾವತಿಸಿ, ಉಳಿದ ಬಾಕಿ ಮೊತ್ತವನ್ನು ಜೂನ್‌ 27ರಂದು ನೀಡುವುದಾಗಿ ಒಪ್ಪಿಕೊಂಡ ಬಳಿಕ ಪೊಲೀಸರು ಮುಚ್ಚಳಿಕೆ ಬರೆಸಿ ಈ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿದ್ದಾರೆ.