ಸಾರಾಂಶ
ಹಿರಿಯೂರು ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಎಂದು ರೈತ ಸಂಘದಿಂದ ನಡೆಸುತ್ತಿರುವ ಧರಣಿ 65ನೇ ದಿನ ಪೂರೈಸಿದ್ದು, ಧರಣಿ ಸ್ಥಳಕ್ಕೆ ಇದುವರೆಗೂ ಯಾವುದೇ ಜನಪ್ರತಿನಿಧಿ ಬಾರದೇ ಇರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಹಿರಿಯೂರು
ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ಹರಿಸಿ ಎಂದು ರೈತ ಸಂಘದಿಂದ ನಡೆಸುತ್ತಿರುವ ಧರಣಿ ಗುರುವಾರಕ್ಕೆ 65ನೇ ದಿನ ಪೂರೈಸಿದೆ.ಕೆಆರ್ ಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಆರ್ ಹಳ್ಳಿ, ಬೋರನಕುಂಟೆ ಹಾಗೂ ಗೊರಲಡಕು ಗ್ರಾಮದ ರೈತರು ಭಜನೆ ಮಾಡುವ ಮೂಲಕ 65ನೇ ದಿನದ ಧರಣಿ ನಡೆಸಿದರು. ಧರಣಿ ನಿರತರನ್ನು ಉದ್ದೇಶಿಸಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ಗಾಯಿತ್ರಿ ಜಲಾಶಯ ಸೇರಿ ಹೋಬಳಿಯ 16 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ನಡೆಸುತ್ತಿರುವ ಧರಣಿ 65 ದಿನಕ್ಕೆ ಕಾಲಿಟ್ಟಿದ್ದರು ಸಹ ಇದುವರೆಗೂ ಕ್ಷೇತ್ರದ ಶಾಸಕರು ಧರಣಿ ಸ್ಥಳಕ್ಕೆ ಬಾರದೇ ಇರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇದ್ದಿದ್ದೇ ಆಗಿದ್ದಲ್ಲಿ ಅವರು ಧರಣಿ ಸ್ಥಳಕ್ಕೆ ಆಗಮಿಸಿ ನಮ್ಮ ಅಹವಾಲುಗಳನ್ನು ಆಲಿಸಿ ಸರ್ಕಾರಕ್ಕೆ ನಮ್ಮ ಬೇಡಿಕೆ ಮುಟ್ಟಿಸಬೇಕು. ಇದುವರೆಗೂ ಧರಣಿ ನಿರತ ರೈತರನ್ನು ಭೇಟಿ ಮಾಡದೇ ಇರುವುದು ಆಶ್ಚರ್ಯ ತಂದಿದ್ದು ಇನ್ನು ಮೂರ್ನಾಲ್ಕು ದಿನಗಳಲ್ಲಿ ಶಾಸಕರು ಧರಣಿ ಸ್ಥಳಕ್ಕೆ ಬಾರದೇ ಇದ್ದಲ್ಲಿ ಅವರ ಕಚೇರಿ ಮುಂಭಾಗವೇ ಬಂದು ರೈತರು ಧರಣಿ ಕೂರುವುದರ ಜೊತೆಗೆ ಅವರಿಗೆ ಘೇರಾವ್ ಹಾಕಲಾಗುವುದು. ಈಗಾಗಲೇ ಮಳೆಗಾಲ ಮುಗಿಯುತ್ತಾ ಬಂದಿದ್ದು ಕೆರೆಗಳಿಗೆ ನೀರು ಬಾರದೆ ಇರುವುದು ರೈತರಲ್ಲಿ ಆತಂಕ ಉಂಟಾಗಿದೆ. ಮುಂದಿನ ದಿನಗಳಲ್ಲಿ ತೋಟಗಳನ್ನು ಮತ್ತು ಜಾನುವಾರುಗಳನ್ನು ಉಳಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ ಸರ್ಕಾರ ರೈತರ ಬೇಡಿಕೆಗಳನ್ನು ಶೀಘ್ರವಾಗಿ ಪೂರೈಸಬೇಕು ಎಂದರು.ಈ ವೇಳೆ ಕೆಆರ್ ಹಳ್ಳಿ ರಾಜಪ್ಪ, ರಾಮಯ್ಯ, ಸುರೇಶ್, ರಾಜಕುಮಾರ್, ಜಯರಾಮಪ್ಪ, ಬಿ.ಚಂದ್ರಪ್ಪ, ಎಚ್ ಆರ್ ತಿಪ್ಪೇಸ್ವಾಮಿ, ಎಂಆರ್ ಈರಣ್ಣ, ನಾಗರಾಜ್,ಮೀಸೆ ರಾಜಪ್ಪ, ತಿಮ್ಮರಾಯ, ಈರಣ್ಣ, ಕನ್ಯಪ್ಪ, ವಜೀರ್ ಸಾಬ್, ಸಣ್ಣಪ್ಪ, ವಾಜಿದ್ ಸಾಬ್,ರಾಮಕೃಷ್ಣ ಸುರೇಶ್, ತಿಪ್ಪೇಸ್ವಾಮಿ ಮುಂತಾದವರು ಹಾಜರಿದ್ದರು.