ಸಾರಾಂಶ
- ಸರ್ಕಾರಿ ನೌಕರರ ಸಂಘ ದರ್ಬಾರ್ । ಲೋಕಸಭೆ, ವಿಧಾನಸಭೆ ಚುನಾವಣೆ ಖರ್ಚುಗಳಿಗೇ ಸಡ್ಡು
- ಜಿಲ್ಲಾಧ್ಯಕ್ಷ, ರಾಜ್ಯ ಪರಿಷತ್ತು ಸದಸ್ಯ, ಖಜಾಂಚಿ ಸ್ಥಾನಗಳಿಗೆ ಬುಧವಾರ ನಡೆದಿರುವ ಚುನಾವಣೆ- - - ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನ, ರಾಜ್ಯ ಪರಿಷತ್ತು ಸದಸ್ಯ ಸ್ಥಾನ ಹಾಗೂ ಜಿಲ್ಲಾ ಖಜಾಂಚಿ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದಿದೆ. ವಿಶೇಷವೆಂದರೆ, ಲೋಕಸಭೆ, ವಿಧಾನಸಭೆ, ವಿಧಾನ ಪರಿಷತ್ತು ಚುನಾವಣೆಗಳಲ್ಲಿ ಮತದಾರರಿಗೆ ಮಾಡುವ ಖರ್ಚು ವೆಚ್ಚಗಳನ್ನು ಈ ಚುನಾವಣೆ ಮೀರಿಸಿದೆ.
ಈ ಮೂರೂ ಸ್ಥಾನಗಳಿಗೆ ಜಾತಿ, ರಾಜಕೀಯ, ಹಾಗೂ ಸಂಘದ ರಾಜ್ಯ ಸ್ಥಾನಗಳ ಆಕಾಂಕ್ಷಿಗಳ ಬಲ, ಪ್ರಭಾವವನ್ನೆಲ್ಲಾ ಬಳಸಲಾಗಿದೆ. ಯಾವುದೇ ದೊಡ್ಡ ಚುನಾವಣೆಗೂ ನೀಡದಷ್ಟು ನಗದು, ಸೀರೆ, ಬೆಳ್ಳಿ, ವಸ್ತುಗಳು, ಕಟ್ಟಿಗೆಯ ಆಕರ್ಷಕ ಬುಟ್ಟಿ, ಪಾನಪ್ರಿಯರಿಗೆ ಕಳೆದೊಂದು ತಿಂಗಳಿಂದ ಪಾನಗೋಷ್ಠಿಗಳು ಎಗ್ಗಿಲ್ಲದೇ ಆಗಿವೆ ಎಂಬ ವಿಚಾರ ನೌಕರರ ವಲಯದಲ್ಲೇ ಹರಿದಾಡುತ್ತಿದೆ.66 ಮತಗಳ ಮೇಲೆ ಕಣ್ಣು:
ಸಂಘದ ಪ್ರಮುಖ ಮೂರು ಸ್ಥಾನಗಳ ಮೇಲೆ ಜಿಲ್ಲೆಯ ಎರಡು ಗುಂಪುಗಳು ಕಣ್ಣಿಟ್ಟಿದ್ದವು. ಒಟ್ಟು 66 ಮತದಾರರು ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪರಿಷತ್ತು ಸದಸ್ಯ ಸ್ಥಾನಕ್ಕೆ ಮತ ಚಲಾವಣೆ ಮಾಡಬೇಕಿತ್ತು. ಹಾಗಾಗಿ 66 ಜನರನ್ನೂ ಪ್ರೀತಿ- ವಿಶ್ವಾಸದಿಂದ ಕಾಣುವ ಕೆಲಸ ಕಳೆದ ಕೆಲವು ವಾರಗಳಿಂದ ನಡೆದಿತ್ತು. ಅಷ್ಟೇ ಅಲ್ಲ, 66 ಜನರ ಕೃಪೆ ಗಿಟ್ಟಿಸಲು ಸಂಘದ ರಾಜ್ಯ ಸಮಿತಿ ಮೇಲೆ ಕಣ್ಣಿಟ್ಟ ಸಂಘದ ನಾಯಕರೂ ದಾವಣಗೆರೆಯಲ್ಲೇ ಬೀಡುಬಿಟ್ಟು, ಕೆಲಸ ಮಾಡಿದ್ದ ವಿಚಾರ ಸದ್ದಿಲ್ಲದ ಸುದ್ದಿಯಾಗಿದೆ.ಜಿಲ್ಲೆಯ ಆರೂ ತಾಲೂಕುಗಳ ಅಧ್ಯಕ್ಷರಾದವರಿಗೆ ಮಾತ್ರ ಜಿಲ್ಲಾ ಘಟಕ, ರಾಜ್ಯ ಪರಿಷತ್ತು ಸದಸ್ಯ ಸ್ಥಾನದ ಚುನಾವಣೆಗೆ ಒಟ್ಟು 3 ಮತ ಚಲಾಯಿಸಲು ಅವಕಾಶ ಇತ್ತು. ಜಿಲ್ಲಾ ಕೇಂದ್ರದಿಂದ ಸಂಘದ ನಿರ್ದೇಶಕರಾದ ಎಲ್ಲರಿಗೂ ಮೂರೂ ಸ್ಥಾನಗಳಿಗೆ ಮತ ಚಲಾಯಿಸುವ ಅಧಿಕಾರ ಇತ್ತು. ಸಂಘದ ಚುನಾವಣೆಯನ್ನು ಕೆಲವರು ಪ್ರತಿಷ್ಟೆ ಸಂಗತಿಯಾಗಿ ಪರಿಗಣಿಸಿದ್ದರಿಂದ ಹಿಂದೆಂದಿಗಿಂತಲೂ ಈ ಸಲ ಸಂಘದ ಚುನಾವಣೆ ತೀವ್ರ ಕಾವೇರಿತ್ತು. ಎದುರಾಳಿ ಏನು ಕೊಡುತ್ತಾರೋ, ಅದಕ್ಕಿಂತ ತುಸು ಹೆಚ್ಚೆಂಬಂತೆ ಕೈಚೆಲ್ಲಿ, ಹಣ ಖರ್ಚು ಮಾಡಿರುವುದೂ ಇದೆ ಎನ್ನಲಾಗಿದೆ.
ದುಬಾರಿ ಗಿಫ್ಟ್‌ಗಳು:ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪರಿಷತ್ತು ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಎರಡೂ ಗುಂಪಿನ ಕಡೆಯಿಂದಲೂ ಮತದಾರರನ್ನು ಸೆಳೆಯಲು ಸಕಲ ಪ್ರಯತ್ನಗಳೂ ತಿಂಗಳಿನಿಂದ ನಿರಂತರ ನಡೆದಿವೆ. 66 ಮತದಾರರ ವಿಶ್ವಾಸ ಹಾಗೂ ಮುಖ್ಯವಾಗಿ ಮತ ಗಿಟ್ಟಿಸಲು ಮಹಿಳಾ ನಿರ್ದೇಶಕರ ಮತ ಸೆಳೆಯಲು ಸಹಜವಾಗಿಯೇ ಹತ್ತಾರು ಸಾವಿರ ರು. ಮೌಲ್ಯದ ರೇಷ್ಮೆ ಸೀರೆ, ಬೆಳ್ಳಿಯ ವಸ್ತುಗಳು, ಕಟ್ಟಿಗೆಯ ಆಕರ್ಷಕ ಬುಟ್ಟಿ, 10 ಸಾವಿರ ರು. ನಗದು, ಪ್ರತಿಯೊಬ್ಬರಿಗೂ ಡ್ರೈಫ್ರೂಟ್ಸ್‌ಗಳ ಬಾಕ್ಸ್‌ಗಳನ್ನು ಹೊಂದಿರುವ ಪುಟ್ಟಿ ನೀಡಿ, ಮತ ನೀಡುವಂತೆ ಮನವೊಲಿಕೆ ಕಸರತ್ತು ನಡೆದುಕೊಂಡೇ ಬಂದಿದ್ದು ಎಂದು ಗೊತ್ತಾಗಿದೆ.
ಮಧ್ಯಾರಾಧನೆ-ಬೆದರಿಕೆಯಂತೆ:ಇನ್ನು ಪುರುಷ ನಿರ್ದೇಶಕರು, ತಾಲೂಕು ಅಧ್ಯಕ್ಷರಾದವರಿಗೆ ಅಲ್ಲಲ್ಲಿ ಆಯ್ದ ಸ್ಥಳಗಳು, ಮನೆಗಳು, ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಅಭ್ಯರ್ಥಿ, ಅಭ್ಯರ್ಥಿ ಕಡೆಯ ಗುಂಪಿನವರಿಂದ ರಾತ್ರೋರಾತ್ರಿ ಪಾರ್ಟಿಗಳು, ಪ್ರತಿ ಓದಿಗೆ ₹20-₹30 ಸಾವಿರವರೆಗೆ ನೀಡಿ, ಬೆಲೆ ಬಾಳುವ ವಸ್ತುಗಳ ಗಿಫ್ಟ್ ನೀಡಲಾಗಿದೆ. ಇದು ಜಿಲ್ಲಾ ಘಟಕದ ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ತು ಸದಸ್ಯತ್ವದ ಚುನಾವಣೆ ಕಥೆ. ಇದಕ್ಕೂ ಮುನ್ನ ನಿರ್ದೇಶಕ ಸ್ಥಾನಗಳಿಗೆ ಹಣ, ಗಿಫ್ಟ್ ಕೊಟ್ಟಿರುವುದೂ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲ ಕಡೆಗಳಲ್ಲಂತೂ ಅಭ್ಯರ್ಥಿ ಸ್ಥಾನಕ್ಕೆ ಸ್ಪರ್ಧಿಸುವವರಿಗೆ ಮಾತಿನ ಮೂಲಕ, ಭವಿಷ್ಯದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆಂದು ಬೆದರಿಕೆ ಹಾಕಿ, ಕಣದಿಂದ ಹಿಂದೆ ಸರಿಸುವ ಪ್ರಯತ್ನ, ಘಟನೆಗಳೂ ನಡೆದಿವೆ ಎಂಬುದಾಗಿ ಸ್ವತಃ ವಿವಿಧ ಇಲಾಖೆಗಳ ನೌಕರ ವಲಯಗಳಲ್ಲೇ ಕೇಳಿಬರುತ್ತಿದೆ.
ಒಂದು ಸಂಘದ ಚುನಾವಣೆಗೆ ಲಕ್ಷಾಂತರ ರು. ಖರ್ಚು ಮಾಡುತ್ತಾರೆಂದರೆ ಅದೇನು ಪ್ರತಿಷ್ಟೆಗಾಗಿ ಮಾಡುತ್ತಾರೋ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಮಾತ್ರ ಸಂಘದೊಳಗಿನ ದೊಡ್ಡ ಶಕ್ತಿಗಳೇ ಬಲ್ಲವು. ಈ ಹಿಂದೆಂದೂ ಇಲ್ಲದಷ್ಟು ಹಣ, ಗಿಫ್ಟ್ ಬಾಕ್ಸ್, ಬೆಳ್ಳಿ ವಸ್ತುಗಳು, ಸೀರೆಗಳು, ಎಣ್ಣೆ ಬಾಟಲಿಗಳ ಭಾರಿ ಸದ್ದು ಮಾಡಿದ ಚುನಾವಣೆ ಇದಾಗಿತ್ತು. ಹಿಂದೆ ಇಂಥ ಚುನಾವಣೆ ಕಂಡಿರಲಿಲ್ಲ, ಕೇಳಿರಲಿಲ್ಲ ಎಂಬ ಮಾತು ನೌಕರರದು. ಒಟ್ಟಾರೆ, ಲೋಕಸಭೆ, ವಿಧಾನಸಭೆ ಚುನಾವಣೆಗಳಿಗೆ ಸೆಡ್ಡು ಹೊಡೆಯುವಂಥ ಖರ್ಚು-ವೆಚ್ಚದ ಚುನಾವಣೆಯಾಯ್ತು ಎಂಬುದು ವ್ಯಂಗ್ಯದಂತೆಯೂ ಹರಿದಾಡುತ್ತಿರೋದು ಸುಳ್ಳಲ್ಲ.- - - -4ಕೆಡಿವಿಜಿ16, 17, 18:
ದಾವಣಗೆರೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಚಿ, ರಾಜ್ಯ ಪರಿಷತ್ತು ಸದಸ್ಯ ಸ್ಥಾನಗಳ ಚುನಾವಣೆ ಹಿನ್ನೆಲೆ ಮತದಾರರಿಗೆ ತಲುಪಿಸಲಾಗಿದ್ದ ರೇಷ್ಮೆ ಸೀರೆ ಬಾಕ್ಸ್‌ಗಳು, ಡ್ರೈಫ್ರೂಟ್ಸ್ ಪ್ಯಾಕ್‌ಗಳು.