ರಾಜ್ಯದಲ್ಲಿ 2 ತಿಂಗಳಲ್ಲಿ 66000ಮಂದಿಗೆ ನಾಯಿ ಕಡಿತ: ಸರ್ಜಿ

| Published : Mar 05 2025, 12:32 AM IST

ರಾಜ್ಯದಲ್ಲಿ 2 ತಿಂಗಳಲ್ಲಿ 66000ಮಂದಿಗೆ ನಾಯಿ ಕಡಿತ: ಸರ್ಜಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಜನರ ಮೇಲೆ ನಾಯಿ ಕಡಿತ ಮತ್ತು ರೇಬಿಸ್‌ ಸಾವು ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯ ಡಾ.ಧನಂಜಯ ಸರ್ಜಿ ಸರ್ಕಾರವನ್ನು ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್ತು

ರಾಜ್ಯದಲ್ಲಿ ಜನರ ಮೇಲೆ ನಾಯಿ ಕಡಿತ ಮತ್ತು ರೇಬಿಸ್‌ ಸಾವು ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಸದಸ್ಯ ಡಾ.ಧನಂಜಯ ಸರ್ಜಿ ಸರ್ಕಾರವನ್ನು ಒತ್ತಾಯಿಸಿದರು.

ಮೇಲ್ಮನೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 2025ರ ಜನವರಿಯಿಂದ ಈವರೆಗೆ 66,400 ನಾಯಿ ಕಡಿತ ಪ್ರಕರಣಗಳು ವರದಿಯಾಗಿದ್ದು, 8 ಮಂದಿ ರೇಬಿಸ್‌ನಿಂದ ಮೃತಪಟ್ಟಿದ್ದಾರೆ. ಇದರಲ್ಲಿ ಬೆಂಗಳೂರಲ್ಲೇ 2400 ನಾಯಿ ಕಡಿತ ಮತ್ತು 4 ಮಂದಿ ರೇಬಿಸ್‌ನಿಂದ ಮೃತಪಟ್ಟಿದ್ದಾರೆ. ಕಳೆದ ವರ್ಷದ ಪ್ರಕರಣಗಳಿಗೆ ಹೋಲಿಸಿದರೆ ಇದು ಶೇ.47ರಷ್ಟು ಹೆಚ್ಚಳವಾಗಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ. ಇದು ಆತಂಕಕಾರಿ ವಿಚಾರ. ಸರ್ಕಾರ ಸ್ಥಳೀಯ ಸಂಸ್ಥೆಗಳ ಆಡಳಿತದ ಮೂಲಕ ನಾಯಿಗಳ ಸಂತಾನ ಶಕ್ತಿಹರಣ ಹಾಗೂ ಸಂಪೂರ್ಣ ರೇಬಿಸ್‌ ನಿರೋಧಕ ವ್ಯಾಕ್ಸಿನೇಷನ್‌ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸಭಾನಾಯಕರೂ ಆದ ಸಚಿವ ಎನ್‌.ಎಸ್‌.ಬೋಸರಾಜು ಅವರು, ಸಂಬಂಧಿಸಿದ ಸಚಿವರಿಂದ ಉತ್ತರ ಕೊಡಿಸುವುದಾಗಿ ಹೇಳಿದರು.

ಅಲ್ಲದೆ, ರಾಜ್ಯದಲ್ಲಿ 13 ಸಾವಿರ ಹಾವು ಕಡಿತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 103 ಮಂದಿ ಮೃತಪಟ್ಟಿದ್ದಾರೆ. ತಿಳಿವಳಿಕೆ ಕೊರತೆಯಿಂದ ಹಾವು ಕಡಿತಕ್ಕೊಳಗಾದವರನ್ನು ಆಸ್ಪತ್ರೆಗೆ ಕರೆತರುವ ಬದಲು ನಾಟಿ ಔಷಧ ಮತ್ತಿತರ ಚಿಕಿತ್ಸೆಗೆ ಕರೆದೊಯ್ಯುತ್ತಿರುವುದು ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ ಈ ಬಗ್ಗೆ ಹೆಚ್ಚಿನ ಜಾಗೃತಿಗೆ ಸರ್ಕಾರ ಕ್ರಮ ವಹಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಿಸಿದ ಸಚಿವರುಗಳು ಸದಸ್ಯರ ಎಲ್ಲ ಪ್ರಶ್ನೆಗಳಿಗೆ ಸದನ ಮುಗಿಯುವುದರೊಳಗೆ ಉತ್ತರ ಕೊಡಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.