ಸಾರಾಂಶ
ವಿಜಯನಗರ ಜಿಲ್ಲೆಯಲ್ಲಿ ಐದನೇ ದಿನವಾದ ಭಾನುವಾರ ಸಡಗರ-ಸಂಭ್ರಮದಿಂದ ಗಣೇಶ ವಿಸರ್ಜನೆ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಹೊಸಪೇಟೆ
ವಿಜಯನಗರ ಜಿಲ್ಲೆಯಲ್ಲಿ ಐದನೇ ದಿನವಾದ ಭಾನುವಾರ ಸಡಗರ-ಸಂಭ್ರಮದಿಂದ ಗಣೇಶ ವಿಸರ್ಜನೆ ನೆರವೇರಿಸಲಾಯಿತು.ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿದಂತೆ ಒಟ್ಟು ಆರು ತಾಲೂಕುಗಳಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ಸಂಭ್ರಮ ಮನೆ ಮಾಡಿತ್ತು. ಜಿಲ್ಲೆಯ 666 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು.
ಹೊಸಪೇಟೆಯಲ್ಲಿ ಒಟ್ಟು 121 ಮತ್ತು ಹಂಪಿ, ಕಮಲಾಪುರ ಭಾಗದಲ್ಲಿ 40 ಸೇರಿದಂತೆ ಒಟ್ಟು 161 ಸೇರಿದಂತೆ ಇಡೀ ಜಿಲ್ಲೆಯಾದ್ಯಂತ 666 ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಇಲ್ಲಿನ ಮೇನ್ ಮಸೀದಿ ಮೂಲಕ ನಗರದ ವಿವಿಧ ಕಡೆಗಳಲ್ಲಿ ಪ್ರತಿಷ್ಠಾಪಿಸಿದ್ದ 51 ಗಣಪತಿ ಮೂರ್ತಿಗಳನ್ನು ಮೆರವಣಿಗೆ ಮೂಲಕ ಬಸ್ ನಿಲ್ದಾಣದ ಮಾರ್ಗವಾಗಿ ಎಲ್‌ಎಲ್‌ಸಿ ಕಾಲುವೆಯಲ್ಲಿ ವಿಸರ್ಜಿಸಲಾಯಿತು.ಬೃಹತ್ ಗಣೇಶ ಮೂರ್ತಿಗಳನ್ನು ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳಲ್ಲಿ ಮೆರವಣಿಗೆ ಮೂಲಕ ಸಾಗಿಸಿ, ಹತ್ತಿರದ ನದಿ, ಕೆರೆ, ಕಾಲುವೆಗಳಲ್ಲಿ ಭಕ್ತರು ವಿಸರ್ಜನೆ ಮಾಡಿದರು. ದಾರಿಯುದಕ್ಕೂ ಡಿಜೆಗಳ ಕರ್ಕಶ ಧ್ವನಿ ಯುವಕರಿಗೆ ಇಂಪು ನೀಡಿದರೆ, ವೃದ್ದರು, ಮಕ್ಕಳಿಗೆ ಕಿರಿಕಿರಿ ಎನ್ನಿಸಿತ್ತಿತ್ತು. ಕೆಲ ಕಡೆ ಸಣ್ಣ ಪುಟ್ಟ ಘರ್ಷಣೆಗಳು ಹೊರತುಪಡಿಸಿದರೆ ಉಳಿದಂತೆ ಶಾಂತಿಯುತವಾಗಿಯೇ ಗಣೇಶ ವಿಸರ್ಜನೆ ನೆರವೇರಿತು.
ಪೊಲೀಸ್ ಬಂದೋಬಸ್ತ್:ಗಣೇಶ ವಿಸರ್ಜನೆ ಐದನೇ ದಿನದ ನಿಮಿತ್ತ ವಿಜಯನಗರ ಜಿಲ್ಲಾ ಪೊಲೀಸರು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರು. ಜಿಲ್ಲೆಯ ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಆಯಾ ಠಾಣಾ ವ್ಯಾಪ್ತಿಗಳಲ್ಲಿ ಸಭೆಗಳನ್ನು ನಡೆಸುವರ ಜತೆಗೆ ಪಥಸಂಚಲನ, ಬೈಕ್ ರ‍್ಯಾಲಿಗಳನ್ನು ನಡೆಸಿ, ಸಾರ್ವಜನಿಕರ ಗಮನ ಸೆಳೆದರು. ವಿಸರ್ಜನೆ ಸ್ಥಳಗಳಿಗೆ ತೆರಳಿದ ಪರಿಶೀಲಿಸಿ, ಗಣೇಶ ಉತ್ಸವ ಸಮಿತಿ ಸಂಚಾಲಕರಿಗೆ ಸಲಹೆ ಸೂಚನೆ ನೀಡಿದರು.ಉತ್ತಮ ಗಣಪತಿಗೆ ಬಹುಮಾನ:
ಇಲ್ಲಿನ ತಾಯಮ್ಮ ಶಕ್ತಿ ಸಂಘ, ಪ್ರತಿವರ್ಷದಂತೆ ಈ ಬಾರಿಯೂ 2025-26ನೇ ಸಾಲಿನ ಅತ್ಯುತ್ತಮ ಗಣಪತಿ ಮೂರ್ತಿಗಳಿಗೆ ನಗದು ಬಹುಮಾನ, ನೆನಪಿನ ಕಾಣಿಕೆ ನೀಡಿ, ಪ್ರೋತ್ಸಾಹಿಸಿದೆ.ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮ ಗಣೇಶನ ಮೂರ್ತಿಗಳಿಗೆ ಪ್ರಥಮ, ದ್ವಿತೀಯ, ತೃತಿಯ ಹಾಗೂ ಸಮಾಧಾನಕರ ಬಹುಮಾನ ಪ್ರಕಟಿಸಿದೆ. ಪ್ರಥಮ ಬಹುಮಾನ ₹20 ಸಾವಿರ, ದ್ವಿತೀಯ ಬಹುಮಾನ ₹15 ಸಾವಿರ, ತೃತೀಯ ಬಹುಮಾನ ₹10 ಸಾವಿರ ಹಾಗೂ ಸಮಾಧಾನಕರ ₹5 ಸಾವಿರ ಹಾಗೂ ನೆನಪಿನ ಕಾಣಿಕೆ ನೀಡಿದೆ.ನಗರದ ಚಿತ್ರಕೇರಿ ಯುವಕರ ಸಂಘ(ಬಳಗ) ಪ್ರಥಮ ಬಹುಮಾನ, ಟಿ.ಬಿ. ಡ್ಯಾಂನ ಮಹಾಗಣಪತಿ ಯುವಕ ಮಂಡಳಿ ದ್ವಿತೀಯ, ವಿಜಯನಗರ ಪ್ರಖ್ಯಾತ ಅರಸ ಶ್ರೀ ಕೃಷ್ಣ ದೇವರಾಯ ಗಣಪತಿ ಪ್ರತಿಷ್ಠಾಪಿಸಿ, ಜನಮನ್ನಣೆಗೆ ಪಾತ್ರವಾದ ಚಿತ್ತವಾಡ್ಗಿ ಗಜಾನನ ಯುವಕರ ಸಂಘ, ತೃತೀಯ ಬಹುಮಾನ ಪಡೆದುಕೊಂಡಿದೆ. ಛಲವಾದಿ ಯುವಕರ ಸಂಘ ಹಾಗೂ ಬಾಣದಕೇರಿ ಕದಂಬ ಯುವಕರ ಸಂಘಕ್ಕೆ ಸಮಾಧಾನಕರ ಬಹುಮಾನ ಲಭಿಸಿದೆ.