ಓವರ್ ಬ್ರಿಡ್ಜ್, ಅಂಡರ್ ಪಾಸ್ ಕಾಮಗಾರಿಗೆ 69. 85ಕೋಟಿ ಅನುದಾ‍‍ನ ಮಂಜೂರು

| Published : Aug 25 2024, 01:53 AM IST

ಸಾರಾಂಶ

ಕಡೂರು, ತಾಲೂಕಿನ ಮತ್ತು ಪಟ್ಟಣದ ಜನರ ಅನೇಕ ದಶಕಗಳ ಬೇಡಿಕೆಯಾದ ಓವರ್ ಬ್ರಿಡ್ಜ್ ಮತ್ತು ಅಂಡರ್ ಪಾಸ್ ಕಾಮಗಾರಿಗೆ 69. 85 ಅನುದಾ‍‍ನ ಮಂಜೂರಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯಲಿರುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಮಗಾರಿ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ಪರಿಶೀಲನೆ

ಕನ್ನಡಪ್ರಭ ವಾರ್ತೆ,ಕಡೂರು

ತಾಲೂಕಿನ ಮತ್ತು ಪಟ್ಟಣದ ಜನರ ಅನೇಕ ದಶಕಗಳ ಬೇಡಿಕೆಯಾದ ಓವರ್ ಬ್ರಿಡ್ಜ್ ಮತ್ತು ಅಂಡರ್ ಪಾಸ್ ಕಾಮಗಾರಿಗೆ 69. 85 ಅನುದಾ‍‍ನ ಮಂಜೂರಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯಲಿರುವ ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ವಾತಂತ್ರ ಪೂರ್ವಕ್ಕೂ ಹೆಚ್ಚು ಕಾಲದಿಂದ ಪಟ್ಟಣದ ಕೆ.ಎಂ.ರಸ್ತೆಯ ರೈಲ್ವೆ ಗೇಟಿನ ಮೂಲಕವೇ ಎಮ್ಮೇದೊಡ್ಡಿ ಭಾಗ ಸೇರಿದಂತೆ ಚಿಕ್ಕಮಗಳೂರು ಕಡೆಯಿಂದ ಬರುವ ವಾಹನಗಳು ಕೆ.ಹೊಸಳ್ಳಿ, ಸುಭಾಷ್ ನಗರ ಭಾಗದ ಜನರು ಈ ರೈಲ್ವೆ ಗೇಟಿನಿಂದಾಗಿ ಸಂಚರಿಸಬೇಕಿತ್ತು. ಅಲ್ಲದೆ ತುಂಬಾ ಹೊತ್ತು ಕಾಯುವ ಜೊತೆ ಕಡೂರು ಪಟ್ಟಣ ಎರಡು ಭಾಗಗಳಂತಾಗಿದೆ. ರೈಲು ಸಾಗಿದ ಬಳಿಕವೇ ಕೆ.ಎಂ.ರಸ್ತೆಯ ಈ ರೈಲ್ವೆ ಗೇಟು ತೆರೆದ ನಂತರ ಎರಡೂ ಕಡೆಯಿಂದ ಸಂಚರಿಸಬೇಕಿತ್ತು. ಇದೀಗ ಹೆಚ್ಚಿರುವ ರೈಲುಗಳ ಸಂಚಾರದಿಂದ ಅಗತ್ಯವಾಗಿ ಪ್ಲೈ ಓವರ್ ಬ್ರಿಡ್ಜ್ ಮತ್ತು ಅಂಡರ್ ಪಾಸ್ ನ ನಿರ್ಮಾಣಕ್ಕೆ ಕಾಲ ಕೂಡಿ ಬಂದಂತಾಗಿದೆ.

ಶನಿವಾರ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ಶಾಸಕ ಆನಂದ್, ನಿತ್ಯ 90 ಕ್ಕೂ ಹೆಚ್ಚು ರೈಲುಗಳು ಇಲ್ಲಿ ಸಂಚರಿಸುತ್ತವೆ. ರೈಲ್ವೆ ಗೇಟ್ ಹಾಕುವುದರಿಂದ ವಾಹನ ಸಂಚಾರಕ್ಕೆ ಬಹಳಷ್ಟು ಅಡಚಣೆಯಾಗಿತ್ತು. ಒಂದು ರೀತಿಯಲ್ಲಿ ಕಡೂರು ಪಟ್ಟಣ ಎರಡು ಭಾಗವಾಗಿದೆ ಎಂಬ ಭಾವನೆ ಜನರಲ್ಲಿದೆ. ಅನೇಕ ದಶಕಗಳಿಂದ ಈ ಸಮಸ್ಯೆ ನಿವಾರಣೆ ಆಗಬೇಕೆಂಬ ಬೇಡಿಕೆ ಇತ್ತು. ಕಳೆದ ಫೆಬ್ರವರಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿಯಾಗಿ ಈ ಸಮಸ್ಯೆ ಕುರಿತು ಮನವಿ ನೀಡಿ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮನವರಿಕೆ ಮಾಡಲಾಗಿತ್ತು.

ಅದರ ಫಲವಾಗಿ ಕಳೆದ 4-4-2024 ರ ರೈಲ್ವೆ ಮಂಡಳಿ ಸಭೆಯಲ್ಲಿ ಕಡೂರು ಪಟ್ಟಣದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ಮತ್ತು ಅಂಡರ್ ಪಾಸ್ ಕಾಮಗಾರಿಗೆ 69. 85 ಕೋಟಿ ಮಂಜೂರು ಮಾಡಲಾಗಿದೆ. ಪಕ್ಷ ಯಾವುದೇ ಇದ್ದರೂ ಅಭಿವೃದ್ಧಿ ಪರವಾಗಿ ಕೆಲಸ ಮಾಡುವರಿಗೆ ಅಭಿನಂದಿಸುವುದು ಶಾಸಕನಾದ ನನ್ನ ಕರ್ತವ್ಯ. ತಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರಾದ ಅಶ್ವಿನ್ ವೈಷ್ಣವ್ ಅವರಿಗೆ ಕಡೂರು ಜನತೆ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ಈ ಕಾಮಗಾರಿಗೆ ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆಗೆ ಈಗಾಗಲೇ ಮೈಸೂರು ವಿಭಾಗೀಯ ಕಚೇರಿಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನೆಯಾಗಿದೆ. ಜಿಲ್ಲಾಧಿಕಾರಿ ಶೀಘ್ರವಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಬೇಕೆಂದು ಮನವಿ ಮಾಡಿದರು.

ರೈಲ್ವೆ ಸಚಿವ ವಿ.ಸೋಮಣ್ಣನವರೂ ಕೂಡ ಕರ್ನಾಟಕದವರೇ ಆಗಿರುವುದರಿಂದ ಅವರ ಉಪಸ್ಥಿತಿಯಲ್ಲಿಯೇ ಕಾಮಗಾರಿಗೆ ಚಾಲನೆ ಕೊಡಿಸುವ ಚಿಂತನೆಯಿದೆ. ಕಡೂರು ಪಟ್ಟಣದ ಅಭಿವೃದ್ಧಿ ಇತಿಹಾಸದಲ್ಲಿ ಇದು ಮೈಲಿಗಲ್ಲಾಗಲಿದೆ ಎಂದು ನುಡಿದರು.

ಪುರಸಭಾ ಸದಸ್ಯ ಸಯ್ಯದ್ ಯಾಸೀನ್ ಮಾತನಾಡಿ, ಕೇಂದ್ರ ಸಚಿವರೊಡನೆ ಚರ್ಚಿಸಿ ಮನವರಿಕೆ ಮಾಡಿ ಬಹುದಿನಗಳ ಸಮಸ್ಯೆ ಬಗೆಹರಿಸಲು ಅನುದಾನ ಮಂಜೂರು ಮಾಡಿಸಿದ ಶಾಸಕ ಕೆ.ಎಸ್.ಆನಂದ್ ಅವರನ್ನು ಪಟ್ಟಣದ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದರು.

ಪುರಸಭೆ ಸದಸ್ಯ ಇಕ್ಬಾಲ್, ಹೊಗರೇಹಳ್ಳಿ ಶಶಿ, ಶ್ರೀನಿವಾಸ ನಾಯ್ಕ, ಶ್ರೀಕಂಠ ಒಡೆಯರ್, ಪುರಸಭೆ ಇಂಜಿನಿಯರ್ ಜಗದೀಶ್ ಮತ್ತಿತರರು ಇದ್ದರು.

-- ಬಾಕ್ಸ್ ಸುದ್ದಿ-- ಕಾಮಗಾರಿ ಸ್ವರೂಪ

ಕಡೂರು ಪಟ್ಟಣದ ಗಣಪತಿ ವೃತ್ತದಿಂದ ಚಿಕ್ಕಮಗಳೂರು ರಸ್ತೆಯ ( ಕೆ‌.ಎಂ.ರಸ್ತೆ) ವರೆಗೆ ಓವರ್ ಬ್ರಿಡ್ಜ್, ಮತ್ತು ಸಮಾನಾಂತರವಾಗಿ ಸುಮಾರು 750 ಮೀಟರ್ ಉದ್ದದ ಅಂಡರ್ ಪಾಸ್ ನಿರ್ಮಾಣಗೊಳ್ಳಲಿದೆ. ಇದರಿಂದ ರೈಲ್ವೆ ಗೇಟ್ ಹಾಕಿ ವಾಹನಗಳು ಕಾಯುವ ಅವಶ್ಯಕತೆಯಿಲ್ಲ. ಚಿಕ್ಕಮಗಳೂರು ಕಡೆಯಿಂದ ಬರುವ ವಾಹನಗಳು ಓವರ್ ಬ್ರಿಡ್ಜ್ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ತಲುಪಿ ರಾ.ಹೆ.206 ರ ಶಿವಮೊಗ್ಗ- ಬೆಂಗಳೂರು ಕಡೆಗೆ ಸಂಚರಿಸುವ ಅವಕಾಶ ದೊರೆಯಲಿದೆ.