ಸಾರಾಂಶ
ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ನಾಪೋಕ್ಲು ಹೋಬಳಿ ಘಟಕ ಹಾಗೂ ಸಹಕಾರ ಮಹಿಳಾ ಸಮಾಜ, ಪಿಪಿ ಫೌಂಡೇಶನ್ ಆಶ್ರಯದಲ್ಲಿ ಗುರುವಾರ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆದವು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದ ಕನ್ನಡ ಭಾಷೆ, ನಾಡು, ನುಡಿ ಅತಿ ಉತ್ಕೃಷ್ಟವಾದದ್ದು . ಕನ್ನಡ ನಾಡು, ನುಡಿ ಪರಂಪರೆ ಬಗ್ಗೆ ಪ್ರತಿಯೊಬ್ಬ ಕನ್ನಡಿಗರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ ಕೇಶವ ಕಾಮತ್ ಹೇಳಿದ್ದಾರೆ.ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ನಾಪೋಕ್ಲು ಹೋಬಳಿ ಘಟಕ ಹಾಗೂ ಸಹಕಾರ ಮಹಿಳಾ ಸಮಾಜ, ಪಿಪಿ ಫೌಂಡೇಶನ್ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಬೆಳೆಯಬೇಕು. ಕನ್ನಡ ನಾಡು ನುಡಿಯ ವಿಚಾರ ತಿಳಿಯಬೇಕು ಎಂದ ಅವರು, ಕನ್ನಡ ಗೀತೆಗಳನ್ನು ಹಾಡುವ ಮೂಲಕ ಅದರ ಅರಿವು ಅವರಿಗೆ ಮೂಡಬೇಕು ಎಂದರು. ಕನ್ನಡ ಧ್ವಜಾರೋಹಣ ನೆರವೇರಿಸಿದ ಕಾಫಿ ಬೆಳೆಗಾರ ಕೇಟೊಳಿರ ಕುಟ್ಟಪ್ಪ ಮಾತನಾಡಿ, ಜಾತಿ, ಮತ, ಭೇದ, ಧರ್ಮ ಮರೆತು ಕನ್ನಡದ ವಿಚಾರಗಳಲ್ಲಿ ಒಗ್ಗಟ್ಟು ಪ್ರವೇಶಿಸಬೇಕು. ಒಂದು ಕೊಡೆಯ ಆಸರೆಯಲ್ಲಿ ನಾವೆಲ್ಲ ನಿಂತಿದ್ದೇವೆ. ಕನ್ನಡ ರಾಜ್ಯೋತ್ಸವ ಹೆಸರಿನಲ್ಲಿ ಎಲ್ಲರೂ ಒಗ್ಗೂಡಬೇಕು. ಕನ್ನಡದಲ್ಲಿ ವ್ಯವಹಾರ ಮಾಡುವುದರಿಂದ ಇನ್ನಷ್ಟು ಭಾಷೆ ಬೆಳೆಯಲು ಸಹಕಾರಿಯಾಗಿದೆ ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅದ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಕನ್ನಡದ ಕಾರ್ಯಕ್ರಮ ನಡೆದಾಗ ಹೆಚ್ಚು ಹೆಚ್ಚು ಸದಸ್ಯರು ಸಾಹಿತ್ಯ ಪರಿಷತ್ತಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ಜಾನಪದ ಗೀತೆ, ಭಾವಗೀತೆ ಸೇರಿದಂತೆ ವಿವಿಧ ಸ್ಪರ್ಧೆಗಳು ಜರುಗಿದವು. ವಿಜೇತರಿಗೆ ಬಹುಮಾನ ಹಾಗೂ ಅರ್ಹತಾ ಪತ್ರ ವಿತರಿಸಲಾಯಿತು.ಬೆಳಗ್ಗೆ ಕೆಪಿಎಸ್ ಆವರಣದಲ್ಲಿ ಕಾಫಿ ಬೆಳೆಗಾರ ಕೇಟೋಳಿರ ಕುಟ್ಟಪ್ಪ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪ್ರೌಢಶಾಲೆಯಿಂದ ನಾಪೋಕ್ಲು ಪೆಟ್ರೋಲ್ ಬಂಕ್ ವರೆಗೆ ಪಟ್ಟಣದ ಮುಖ್ಯ ಬೀದಿಯಲ್ಲಿ ಕನ್ನಡ ಧ್ವಜ, ಬ್ಯಾಂಡ್ ವಾದ್ಯಗಳೊಂದಿಗೆ ವರ್ಣ ರಂಜಿತ ಮೆರವಣಿಗೆ ಜರುಗಿತು.
ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೆರವಂಡ ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಆರ್. ವನಜಾಕ್ಷಿ , ಸರ್ಕಾರಿ ಸಹಕಾರಿ ಮಹಿಳಾ ಸಮಾಜ ಅಧ್ಯಕ್ಷೆ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ನಾಪೋಕ್ಲು ಕೆಪಿಎಸ್ ಪ್ರೌಢಶಾಲಾ ಉಪ ಪ್ರಾಂಶುಪಾಲ ಎಂ.ಎಸ್. ಶಿವಣ್ಣ , ಕಾಫಿ ಬೆಳೆಗಾರ, ಪಿ.ಪಿ. ಫೌಂಡೇಶನ್ ಅಧ್ಯಕ್ಷ ಪಿ.ಪಿ. ಅಹಮದ್, ಅರಫತ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಹೋಬಳಿ ಕಸಾಪ ಗೌರವ ಕಾರ್ಯದರ್ಶಿ ಬಾಲೆಯಡ ದಿವ್ಯ ಮಂದಪ್ಪ, ಗೌರವ ಕಾರ್ಯದರ್ಶಿ ಉಮಾ ಪ್ರಭು, ಗೌರವ ಕೋಶಾಧಿಕಾರಿ ಎಂ.ಎ. ಮನ್ಸೂರ್ ಆಲಿ, ಸಂಘಟನಾ ಕಾರ್ಯದರ್ಶಿ ಸಿ.ಎಚ್. ಅಹಮದ್, ಗ್ರಾಮ ಪಂಚಾಯತಿ ಉಪ ಅಧ್ಯಕ್ಷ ಹೇಮಾ, ಯಶೋಧ ಕಟ್ಟಿ, ಅರುಣ್, ರಾಜ ದೇವಯ್ಯ, ಎನ್‌ಕೆ ಪ್ರಭು, ಬೊಳ್ಳಮ್ಮ ನಾಣಯ್ಯ, ಮಹಿಳಾ ಸಮಾಜದ ನಿರ್ದೇಶಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ವಿವಿಧ ಶಾಲೆಯ ಶಿಕ್ಷಕರು ಹಾಗೂ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿರುವರು