ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಆರನೇ ಹಂತದ ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡುವುದಿಲ್ಲ. ಕೆಆರ್‌ಎಸ್ ಅಣೆಕಟ್ಟೆಯನ್ನು ಕೃಷಿ ಕ್ಷೇತ್ರದ ಉದ್ದೇಶಕ್ಕಾಗಿ ನಿರ್ಮಿಸಲಾಗಿದೆ. ಆದರೆ, ರಾಜ್ಯಸರ್ಕಾರ ಕೃಷಿ ಕ್ಷೇತ್ರವನ್ನೇ ನಾಶ ಮಾಡುವ ಹುನ್ನಾರ ರೂಪಿಸಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುನಂದಾ ಜಯರಾಂ ಕಿಡಿಕಾರಿದರು.ಕುಡಿಯುವ ನೀರಿಗಾಗಿ ಕೆಆರ್‌ಎಸ್‌ನಿಂದ 1 ರಿಂದ 4ನೇ ಹಂತದವರೆಗೆ ಯೋಜನೆ ರೂಪಿಸಿ ಜಾರಿಗೊಳಿಸಿದೆ. ಐದನೇ ಹಂತಕ್ಕೆ 4600 ಕೋಟಿ ರು. ಇದೀಗ 6939 ಕೋಟಿ ರು. ವೆಚ್ಚದಲ್ಲಿ ಆರನೇ ಹಂತದ ಯೋಜನೆಗೂ ಡಿಪಿಆರ್ ತಯಾರಿಸಿ ಸಂಪುಟದಲ್ಲಿ ಅನುಮೋದನೆ ಪಡೆಯಲಾಗಿದೆ. ಇದು ಮಂಡ್ಯ ಜಿಲ್ಲೆಯ ರೈತರಿಗೆ ದೊಡ್ಡ ಆಘಾತಕಾರಿ ಸುದ್ದಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆರನೇ ಹಂತದ ಯೋಜನೆಗೆ ಜಿಲ್ಲೆಯ ಕಟ್ಟೇರಿ ಬಳಿ ಸಂಸ್ಕರಣಾ ಘಟಕ, ಶೇಖರಣಾ ಜಲಾಶಯ ನಿರ್ಮಿಸಿ ಅಲ್ಲಿಂದ ನೀರನ್ನು ಪಂಪ್ ಮಾಡಿ 82 ಕಿ.ಮೀ. ದೂರಕ್ಕೆ ನೀರನ್ನು ಹರಿಸುವ ಕಾರ್ಯಕ್ರಮ ಇದಾಗಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ 49.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದರೂ ಬಳಕೆಗೆ ಸಿಗುವುದು 41 ಟಿಎಂಸಿ ನೀರು ಮಾತ್ರ. ವರ್ಷಕ್ಕೆ ಕುಡಿಯುವ ನೀರಿಗೆ 24 ಟಿಎಂಸಿ ನೀರನ್ನು ಬಳಕೆ ಮಾಡಲಾಗುತ್ತಿದ್ದು, ಉಳಿದ 25 ಟಿಎಂಸಿ ನೀರಿನಲ್ಲಿ ಡ್ಯಾಂ ಸುರಕ್ಷತೆ, ವಾತಾವರಣ, ತಮಿಳುನಾಡಿಗೆ ನೀರು ಬಿಡುವುದನ್ನು ಸೇರಿಸಿದರೆ ಜಿಲ್ಲೆಯ ಕೃಷಿಗೆ ನೀರಿನ ಲಭ್ಯತೆಯೇ ಇರುವುದಿಲ್ಲ ಎಂದರು.ಬೆಂಗಳೂರಿನ ಕುಡಿವ ನೀರಿನ ಯೋಜನೆಗೆ ಪ್ರತಿ ತಿಂಗಳು 2 ಟಿಎಂಸಿ ನೀರನ್ನು ಉಪಯೋಗಿಸಲಾಗುತ್ತಿದೆ. 6ನೇ ಹಂತದ ಯೋಜನೆಗೆ 6 ಟಿಎಂಸಿ ನೀರನ್ನು ತೆಗೆದುಕೊಂಡು ಹೋದರೆ ಕೊನೆಯ ಭಾಗದ ಮಳವಳ್ಳಿ, ಮದ್ದೂರು ಭಾಗಗಳ ಕೃಷಿ ಸಂಪೂರ್ಣ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೀರು ಹರಿಸುವುದಕ್ಕೆ, ಬೆಂಗಳೂರು ಕುಡಿಯುವ ನೀರಿಗೆ, ಅಮ್ಯೂಸ್‌ಮೆಂಟ್‌ಪಾರ್ಕ್‌ನಂತಹ ಅವೈಜ್ಞಾನಿಕ ಯೋಜನೆಗಳಿಗೆ ಕೆಆರ್‌ಎಸ್ ಮೇಲೆಯೇ ರಾಜ್ಯಸರ್ಕಾರ ಬ್ರಹ್ಮಾಸ ಪ್ರಯೋಗಿಸುತ್ತಿದೆ. ಮಳೆ ಬಿದ್ದ ಸಂದರ್ಭದಲ್ಲಿ ಹೆಚ್ಚುವರಿ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳುವ ಆಲೋಚನೆಗಳನ್ನೇ ಮಾಡುತ್ತಿಲ್ಲ. ಕಣ್ವ, ಮಾರ್ಕೋನಹಳ್ಳಿ, ಇಗ್ಗಲೂರು ಮಾದರಿಯಲ್ಲಿ ಚಿಕ್ಕ ಚಿಕ್ಕ ಬ್ಯಾರೇಜ್‌ಗಳನ್ನು ಅಲ್ಲಲ್ಲಿ ನಿರ್ಮಿಸಿದರೆ ಹೆಚ್ಚುವರಿ ಮಳೆಯಾದ ಸಮಯದಲ್ಲಿ ಸಿಗುವ ನೀರನ್ನು ಬಳಸಿಕೊಳ್ಳುವುದಕ್ಕೆ ಅವಕಾಶವಿದ್ದರೂ ರಾಜ್ಯಸರ್ಕಾರ ಅದಾವುದನ್ನೂ ಮಾಡದೆ ಕೃಷಿ ಕ್ಷೇತ್ರವನ್ನು ಬರಡು ಮಾಡಲು ಹೊರಟಿದೆ ಎಂದು ಟೀಕಿಸಿದರು.
ಕೆಆರ್‌ಎಸ್ ಅಣೆಕಟ್ಟೆ ನೀರು ಪ್ರಧಾನವಾಗಿ ಕೃಷಿಗೆ ಬಳಕೆಯಾಗಬೇಕೇ ಹೊರತು ಮಹಾನಗರಗಳಿಗೆ ಕುಡಿಯುವ ನೀರು ಪೂರೈಸುವುದಕ್ಕಲ್ಲ ಎನ್ನುವುದನ್ನು ಸರ್ಕಾರಕ್ಕೆ ಆಗಿಂದಾಗ್ಗೆ ಮನದಟ್ಟು ಮಾಡಿಕೊಡುತ್ತಿದ್ದರೂ ಕೆಆರ್‌ಎಸ್ ನೀರನ್ನು ಪೂರೈಸಜು ಜಿಲ್ಲೆಯ ಕೃಷಿ ಗ್ರಾಮಗಳನ್ನು ನಗರೀಕರಣ ಮಾಡಲು ಯೋಜನೆಗಳನ್ನು ಸರ್ಕಾರ ರೂಪಿಸುತ್ತಲೇ ಇದೆ ಎಂದು ದೂಷಿಸಿದರು.
ರಾಜ್ಯ ಸರ್ಕಾರ ಐದನೇ ಹಂತದ ಯೋಜನೆಗೆ ಕುಡಿಯುವ ನೀರನ್ನು ತೆಗೆದುಕೊಂಡು ಹೋಗುವುದಕ್ಕೆ ಫುಲ್‌ಸ್ಟಾಪ್ ಹಾಕಬೇಕು. ನೀರಿಗಾಗಿ ಕೆಆರ್‌ಎಸ್ ನೀರಿನ ಮೇಲೆ ಆಕ್ರಮಣಕಾರಿ ಧೋರಣೆಯನ್ನು ಕೈಬಿಡಬೇಕು. ಜೊತೆಗೆ ಜಿಲ್ಲೆಯ ರೈತರು, ಸಾರ್ವಜನಿಕರು ಭವಿಷ್ಯದಲ್ಲಿ ಎದುರಾಗಲಿರುವ ನೀರಿನ ಹಾಹಾಕಾರವನ್ನು ತಡೆಯಲು ಈಗಲೇ ಸನ್ನದ್ಧರಾಗಿ ಹೋರಾಟಕ್ಕೆ ಧುಮುಕುವಂತೆ ಮನವಿ ಮಾಡಿದರು.ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಈ ವಿಷಯವಾಗಿ ಶೀಘ್ರವೇ ಸಭೆ ಕರೆದು ಹೋರಾಟದ ರೂಪು-ರೇಷೆಗಳನ್ನು ತಯಾರಿಸಲಾಗುವುದು ಎಂದು ನುಡಿದರು.
ಗೋಷ್ಠಿಯಲ್ಲಿ ಕೆ.ಬೋರಯ್ಯ, ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಹೆಚ್.ಸಿ.ಮಂಜುನಾಥ, ಎಸ್.ನಾರಾಯಣ್, ಸಾತನೂರು ವೇಣುಗೋಪಾಲ್ ಇದ್ದರು.