ಕನ್ನಡಪ್ರಭ ವಾರ್ತೆ ದಾವಣಗೆರೆ ಹೊನ್ನಾಳಿಯ ದುರ್ಗಿಗುಡಿ ಬಡಾವಣೆಯ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನದ ದಸರಾ ಹಬ್ಬದ ಪುರಾಣ ಕಾರ್ಯಕ್ರಮಕ್ಕೆ ತಾಯಿ ನಾಗರತ್ನಮ್ಮ ಜೊತೆಗೆ ಹೋಗಿ, ಮನೆಗೆ ಮರಳುತ್ತಿದ್ದ ಯುವಕ ಅಮಿತ್‌ ಎಂಬವನನ್ನು ಅ.13ರಂದು ರಾತ್ರಿ 11.30ರ ವೇಳೆಗೆ ಪಟ್ಟಣದಲ್ಲಿ ಕಳೆದ ವಾರ ಹತ್ಯೆ ಮಾಡಿ, ಪರಾರಿಯಾಗಿದ್ದ 7 ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ.

ಹೊನ್ನಾಳಿ ಪಟ್ಟಣ ವಾಸಿಗಳಾದ ಗಣೇಶ (23), ಚಂದ್ರಶೇಖರ ಅಲಿಯಾಸ್ ಕಾರದಪುಡಿ ಚಂದ್ರು (30), ಸಿ.ಎಲ್.ಆಕಾಶ್ ಯಾನೆ ತುಪ್ಪ ಆಕಾಶ್ (26), ಎನ್.ಸಂದೀಪ್ (25), ಪುನೀತ್ (27), ಶಿವಮೊಗ್ಗ ವಾಸಿಗಳಾದ ಜಿ.ಮಣಿಕಂಠ (30) ಹಾಗೂ ಜಿ.ವಿನಯಕುಮಾರ (31) ಬಂಧಿತರು.

ತಾಯಿ ಜೊತೆ ಅಮಿತ್ ಮನೆಗೆ ನಡೆದು ಹೋಗುತ್ತಿದ್ದಾಗ ಗಣೇಶ ಮತ್ತು ಇತರೆ ಐವರು ಹೊನ್ನಾಳಿ ವಾಸಿಗಳು ಮತ್ತು ಸ್ಕೂಟಿ, ಕಾರಿನಲ್ಲಿ ಬಂದ ಗುಂಪು ಅಮಿತ್ ಕಣ್ಣಿಗೆ ಕಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಮಾಡಿದ್ದರು. ತಾಯಿ ನೀಡಿದ ದೂರಿನ ಮೇರೆಗೆ ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತು.

ಘಟನಾ ಸ್ಥಳಕ್ಕೆ ಎಸ್ಪಿ ಡಾ.ಎಚ್.ಟಿ.ಶೇಖರ್, ತನಿಖಾಧಿಕಾರಿಗಳು, ಸೊಕೋ ತಂಡದ ಸಮೇತ ಭೇಟಿ ನೀಡಿ, ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿ, ಸೂಕ್ತ ನಿರ್ದೇಶನ ನೀಡಿದ್ದರು. ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಎಸ್.ಉಜ್ಜನಕೊಪ್ಪ ಉಸ್ತುವಾರಿಯಲ್ಲಿ ಹೊನ್ನಾಳಿ ಇನ್‌ಸ್ಪೆಕ್ಟರ್ ಎಚ್.ಸುನಿಲಕುಮಾರ ನೇತೃತ್ವದ ಸಿಬ್ಬಂದಿ ತಂಡವು ಏಳು ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ ಅಮಿತ್ ಹಾಗೂ ಹೊನ್ನಾಳಿಯ ಗಣೇಶ ಇಬ್ಬರೂ ಸ್ನೇಹಿತರಾಗಿದ್ದು, ಗಣೇಶನ ಹೆಂಡತಿ ಜೊತೆ ಅಮಿತ್‌ ಅನೈತಿಕ ಸಂಬಂಧ ಹೊಂದಿದ್ದ ವಿಚಾರವಾಗಿ ಹಳೆ ದ್ವೇಷದಿಂದ ಗಲಾಟೆ ಮಾಡಿಕೊಂಡಿದ್ದರು. ಅದೇ ದ್ವೇಷ ಅಮಿತ್‌ ಕೊಲೆಗೆ ಕಾರಣವಾಗಿದೆ ಎಂಬುದು ಬಯಲಾಗಿದೆ. ಬಂಧಿತರು ಕೃತ್ಯಕ್ಕೆ ಬಳಸಿದ್ದ ಸ್ಕೂಟಿ, ಬುಲೆಟ್‌ ಬೈಕ್‌, 2 ಬೈಕ್‌, 2 ಮಚ್ಚು, 3 ಚಾಕು, 2 ಕಪ್ಪು ಮುಖ ಕವಚ, ಬೊಲೆರೋ ವಾಹನ, ಕಾರದ ಪುಡಿ ಪಾಕೆಟ್‌ಗಳನ್ನು ಜಪ್ತಿ ಮಾಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


ಎಸ್ಐಗಳಾದ ಹೊಳಿಬಸಪ್ಪ ಹೋಳಿ, ಬಿ.ಎಂ.ಗುರುಶಾಂತಯ್ಯ, ಎಲ್.ನಿರ್ಮಲ, ಎಎಸ್ಐಗಳಾದ ಎಚ್.ವಿ.ಹರೀಶ, ತೀರ್ಥಲಿಂಗಪ್ಪ, ಅಶೋಕ ರೆಡ್ಡಿ, ತಿಪ್ಪೇಸ್ವಾಮಿ, ಸಿಬ್ಬಂದಿಯಾದ ಎ.ಬಿ.ರಾಜಶೇಖರ, ಎನ್.ಜಿ.ನಾಗನಗೌಡ, ಅಮ್ಜದ್ ಖಾನ್‌, ಡಿ.ಜಗದೀಶ, ಆರ್.ಕೆ.ಸಂಜೀವ್, ಬಸವರಾಜ ಕೋಟೆಪ್ಪನವರ್, ಸುರೇಶ ನಾಯ್ಕ, ಮೌನೇಶಾಚಾರಿ, ಜಿ.ಕೆ.ರಾಮಚಂದ್ರ, ಮನೋಹರ, ಡಿ.ಕೃಷ್ಣ, ಹೇಮನಾಯ್ಕ, ಸುರೇಶ ನಾಯ್ಕ, ಯು.ಮಾರುತಿ, ಎಸ್.ಶಿವರಾಜ, ಆನಂದ, ವೆಂಕಟೇಶ, ಕುಮಾರ ನಾಯ್ಕ, ರಘು, ಎಸ್ಪಿ ಕಚೇರಿಯ ರಾಮಚಂದ್ರ ಜಾಧವ್‌, ಶಿವಕುಮಾರ, ಸಿದ್ಧಾರ್ಥ ಅವರನ್ನು ಒಳಗೊಂಡ ತಂಡದ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಡಾ. ಎಚ್.ಟಿ.ಶೇಖರ್ ಶ್ಲಾಘಿಸಿದ್ದಾರೆ.

- - -