ಬಂಧಿತರಿಂದ ₹8 ಲಕ್ಷ ಮೌಲ್ಯದ 2 ಕಾರು, ಮೊಬೈಲ್‌ ಫೋನ್‌ ವಶ

ಮೇ 21ರಂದು ಗುಂಡ್ಲುಪೇಟೆಯ ಹಿರೀಕಾಟಿಯಲ್ಲಿ ನಡೆದಿದ್ದ ಘಟನೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಹಿರೀಕಾಟಿ ಗೇಟ್‌ ಬಳಿ ಮೇ ೨೧ರಂದು ಕಾರು ಅಡ್ಡಗಟ್ಟಿ ಚಾಲಕನ ಹೆದರಿಸಿ ದರೋಡೆ ಮಾಡಿದ ಆರೋಪಿಗಳನ್ನು ಬೇಗೂರು ಸರ್ಕಲ್‌ ಇನ್ಸ್‌ಪೆಕ್ಟರ್‌ ಮೋಹಿತ್‌ ಸಹದೇವ್‌ ನೇತೃತ್ವದ ತಂಡ 7 ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ದರೋಡೆಯಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ತ್ರಿಶೂರ್‌ ಮೂಲದ ಅನೀಶ್ ಪಿ.ಎಸ್, ಅನೂಷ್‌ ಟಿ.ಜೆ, ರಾಹುಲ್ ಇ.ಪಿ, ಹೆನೋಶ್ ಆಂಟೋ, ಅನುರಾಜ್ ಪಿ.ಆರ್‌, ಅಮಲ್ ಪಿ.ಎ, ರಮೇಶ್ ಉಂಡಪ್ನನನ್ನು ಬಂಧಿಸಲಾಗಿದೆ. ಬಂಧಿತರಿಂದ ಅಂದಾಜು ೮.೨ ಲಕ್ಷ ರು. ಮೌಲ್ಯದ ಕೆಎಲ್ ೦೫ ಎಲ್‌ಆರ್-೮೬೭೧ ಬಿಳಿ ಬಣ್ಣದ ಮಾರುತಿ ಸ್ವಿಫ್ಟ್ ಕಾರು, ಕೆಎಲ್ ೪೫ ವಿ-೨೫೦೭ ಬಿಳಿ ಬಣ್ಣದ ಇನ್ನೋವಾ ಕಾರು ಹಾಗೂ ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.


ಘಟನೆ ವಿವರ?

ಮೇ ೨೧ರ ಸಂಜೆ ಸುಮಾರು ೬.೪೫ ಸಮಯದಲ್ಲಿ ಹಿರೀಕಾಟಿ ಗೇಟ್ ಹತ್ತಿರ ಮೈಸೂರು ಕಡೆಯಿಂದ ಇನ್ನೋವಾ ಕಾರಿನಲ್ಲಿ ಬಂದ ಅಪರಿಚಿತರು, ಮುಂದೆ ಹೋಗುತ್ತಿದ್ದ ಮತ್ತೊಂದು ಇನ್ನೋವಾ ಕಾರನ್ನು ಓವರ್‌ಟೇಕ್ ಮಾಡಿ ಅಡ್ಡಗಟ್ಟಿದ್ದಾರೆ. ಇನೋವಾ ಕಾರಿನಲ್ಲಿದ್ದ ೪ ಅಪರಿಚಿತರು ವಾಹನದಿಂದ ಕೆಳಗೆ ಇಳಿದ ಬಳಿಕ ನಾಲ್ವರಲ್ಲಿ ಓರ್ವ ಅಪರಿಚಿತ ಕಬ್ಬಿಣದ ಸರಳಿನಿಂದ ಅಡ್ಡಗಟ್ಟಿದ ಕಾರಿನ ಗಾಜು ಒಡೆದು ಹಾಕಿದ್ದಾನೆ. ಕಾರಿನೊಳಗೆ ಪ್ರವೇಶಿಸಿ ಚಾಲಕನ ಪಕ್ಕದ ಸೀಟಿಗೆ ತಳ್ಳಿದ ಬಳಿಕ ಮೊಬೈಲ್‌ ಕಸಿದುಕೊಂಡು ಹಾಗೂ ಆರ್‌ಬಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹಾಗೂ ಐಸಿಐಸಿ ಕಂಪನಿಯ ಡೆಬಿಟ್ ಕಾರ್ಡನ್ನು ಕಿತ್ತುಕೊಂಡು ಕಾರನ್ನು ಚಲಾಯಿಸಿಕೊಂಡು ಹೋಗಿದ್ದರು.

ಘಟನೆ ಸಂಬಂಧ 7 ಆರೋಪಿಗಳನ್ನು ಗುಂಡ್ಲುಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

---

೪ಜಿಪಿಟಿ೧ಗುಂಡ್ಲುಪೇಟೆ ತಾಲೂಕಿನ ಬೇಗೂರು ಪೊಲೀಸರು ದಡೋಡೆ ನಡೆಸಿದ ಆರೋಪಿಗಳನ್ನು ಬಂಧಿಸಿ ಕಾರು ವಶಕ್ಕೆ ಪಡೆದಿದ್ದಾರೆ.