ಮಂಗಳೂರು ಕೆ.ಆರ್.ಐ.ಡಿ.ಎಲ್. ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ ಗಳು ಭ್ರಷ್ಟಾಚಾರ ನಡೆಸಿ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಪುತ್ತೂರು: ಮಂಗಳೂರು ಕೆ.ಆರ್.ಐ.ಡಿ.ಎಲ್. ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ ಗಳು ಭ್ರಷ್ಟಾಚಾರ ನಡೆಸಿ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಮಂಗಳೂರು ಕೆ.ಆರ್.ಐ.ಡಿ.ಎಲ್. ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ ಅವರ ಕರ್ತವ್ಯ ನಿರ್ವಹಣೆ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಗಳಿವೆ. ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಲಾಖೆಯ ಸಚಿವರಿಗೆ ಮಾಸಿಕವಾಗಿ ಹಣ ಸಂದಾಯ ಮಾಡಬೇಕಾಗುತ್ತದೆ ಎಂದು ಹೇಳಿ, ಕೆ.ಆರ್.ಐ.ಡಿ.ಎಲ್. ಚಾರ್ಜ್ ಹೆಸರಿನಲ್ಲಿ ಶೇ.೭ರಷ್ಟು ವರೆಗೆ ಹೆಚ್ಚುವರಿ ಹಣವನ್ನು ಪಡೆಯಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.

ಅಧಿಕಾರಿಗಳ ವಿರುದ್ಧ ಈಗಾಗಲೇ ಬಂದಿರುವ ದೂರುಗಳು ಮತ್ತು ಆರೋಪಗಳ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ಇಲಾಖಾ ತನಿಖೆ ನಡೆಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ಆರೋಪಗಳ ಗಂಭೀರತೆಯನ್ನು ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸುವುದು ಅಥವಾ ಆಡಳಿತಾತ್ಮಕ ಹಿತದೃಷ್ಟಿಯಿಂದ ಬೇರೆಡೆಗೆ ವರ್ಗಾವಣೆ ಮಾಡುವ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ರೈ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.