ಕೊಪ್ಪಳ ಮತಕ್ಷೇತ್ರದ ಅಳವಂಡಿ ಹೋಬಳಿಯ ಬೋಚನಹಳ್ಳಿ-ಭೈರಾಪುರ-ನೆಲೋಗಿಪುರ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ₹7 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಕೊಪ್ಪಳ: ಕೊಪ್ಪಳ ಮತಕ್ಷೇತ್ರದ ಅಳವಂಡಿ ಹೋಬಳಿಯ ಬೋಚನಹಳ್ಳಿ-ಭೈರಾಪುರ-ನೆಲೋಗಿಪುರ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕೆ ₹7 ಕೋಟಿ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ಅಳವಂಡಿ ಹೋಬಳಿಯ ನೀರಲಗಿ, ಮತ್ತೂರು, ಹನಕುಂಟಿ, ತಿಗರಿ, ಬೆಟಗೇರಿ, ಮೋರನಾಳ, ಭೈರಾಪುರ, ಬೋಚನಹಳ್ಳಿ, ನೆಲೋಗಿಪುರ ಹಾಗೂ ಹಲವಾಗಲಿ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಬೋಚನಹಳ್ಳಿಯಲ್ಲಿ ಅವರು ಮಾತನಾಡಿದರು. ಈ ಭಾಗದಲ್ಲಿ ಇನ್ನೂ ಎರಡು-ಮೂರು ಸೇತುವೆಗಳ ನಿರ್ಮಾಣದ ಅಗತ್ಯವಿದೆ. ಪ್ರಮುಖವಾಗಿ ಅಳವಂಡಿ-ನೆಲೋಗಿಪುರ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಅಂದಾಜು ಸಿದ್ಧಪಡಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲೇ ಅನುದಾನ ಒದಗಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಸೇತುವೆಗಳ ನಿರ್ಮಾಣದಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂದರು.

ಅಳವಂಡಿ ಹೋಬಳಿಯ ಬೆಟಗೇರಿ-ಹನಕುಂಟಿ ನಡುವಿನ 4.34 ಕಿಮೀ ರಸ್ತೆ ನಿರ್ಮಾಣಕ್ಕೆ ಕಲ್ಯಾಣ ಪಥ ಯೋಜನೆಯಡಿ ₹3.09 ಕೋಟಿ ಮಂಜೂರಾಗಿದ್ದು, ಟೆಂಡರ್ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ಮತ್ತೂರು-ಬೆಟಗೇರಿ ನಡುವಿನ 3.34 ಕಿ.ಮೀ. ರಸ್ತೆ ನಿರ್ಮಾಣಕ್ಕೆ ₹2.36 ಕೋಟಿ ಮಂಜೂರಾಗಿದ್ದು, ಟೆಂಡರ್ ಹಂತದಲ್ಲಿದೆ ಎಂದು ತಿಳಿಸಿದರು.

ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭಿವೃದ್ಧಿ ಕಾರ್ಯಗಳನ್ನು ಕಂಡು ಬಿಜೆಪಿ-ಜೆಡಿಎಸ್ ಮುಖಂಡರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ತಮಗೆ ಬೇಕಾದವರನ್ನು ಕಳುಹಿಸಿ ಕಾಮಗಾರಿ ಹಾಳು ಮಾಡಿಸಿ, ಬಳಿಕ ವಿಡಿಯೋ ಮಾಡಿಸಿ ಕಳಪೆ ಕಾಮಗಾರಿ ಎಂದು ಆರೋಪಿಸುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಟೀಕಿಸಿದರು.

ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರೆಡ್ಡಿ, ಭರಮಪ್ಪ ಹಟ್ಟಿ, ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಗಾಳೆಪ್ಪ ಪೂಜಾರ್, ವೆಂಕನಗೌಡ್ರು ಹಿರೇಗೌಡ್ರು, ಕೇಶವ ರೆಡ್ಡಿ, ತೋಟಪ್ಪ ಸಿಂಟ್ರ, ಶಿವಣ್ಣ ಮೋರನಾಳ, ನಾರಾಯಣಪ್ಪ ಬೆಟಗೇರಿ, ನಿಂಗಪ್ಪ ಮೇಟಿ, ಪರಶುರಾಮ ಭೈರಾಪುರ, ಮಲ್ಲಪ್ಪ ಪೂಜಾರ್, ಕನಕರಾಜ ಹನಕುಂಟಿ, ಬಸವರಾಜ್ ನೀರಲಗಿ, ನಜೀರ್ ಅಳವಂಡಿ ಇದ್ದರು.