ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಏಳು ಸಾಕ್ಷಿಗಳ ಪಾಟಿ ಸವಾಲು ನಡೆಸುವ ವೇಳೆ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಲು ನಟ ದರ್ಶನ್‌ಗೆ ಹೈಕೋರ್ಟ್‌ ಅನುಮತಿ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಏಳು ಸಾಕ್ಷಿಗಳ ಪಾಟಿ ಸವಾಲು ನಡೆಸುವ ವೇಳೆ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಲು ನಟ ದರ್ಶನ್‌ಗೆ ಹೈಕೋರ್ಟ್‌ ಅನುಮತಿ ನೀಡಿದೆ.

ಪ್ರಕರಣದ ಸಾಕ್ಷಿಗಳ ಹೇಳಿಕೆ ದಾಖಲಾತಿ ವೇಳೆ ಖುದ್ದಾಗಿ ಹಾಜರಾಗಲು ತನಗೆ ಅನುಮತಿ ನೀಡಲು ಕೋರಿ ದರ್ಶನ್‌ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿ ನಗರದ 59ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್‌ ಪರವಾಗಿ ಪತ್ನಿ ವಿಜಯಲಕ್ಷ್ಮೀ ಅವರು ಹೈಕೋರ್ಟ್‌ಗೆ ಸಾಕ್ಷಿಗಳ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ದರ್ಶನ್‌ಗೆ ಅನುಮತಿ ಕಲ್ಪಿಸುವಂತೆ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಷಾನಂದ ಅವರ ಪೀಠ, ಒಂದು ವರ್ಷದಲ್ಲಿ ಪ್ರಕರಣದ 60 ಸಾಕ್ಷಿಗಳ ವಿಚಾರಣೆ ಮುಗಿಯಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಸುಪ್ರೀಂ ಕೋರ್ಟ್‌ ಮುಂದೆ ಸಲ್ಲಿಸಲಾದ 60 ಸಾಕ್ಷಿಗಳ ಪಟ್ಟಿಯಲ್ಲಿ ಸದ್ಯ ಹೆಸರಿಸಲಾಗಿರುವ ಏಳು ಪ್ರಮುಖ ಸಾಕ್ಷಿಗಳು ಸೇರಿರಬೇಕು. ಮೊದಲಿಗೆ ಈ ಏಳು ಸಾಕ್ಷಿಗಳ ಮುಖ್ಯ ವಿಚಾರಣೆಯನ್ನು ಪ್ರಾಸಿಕ್ಯೂಷನ್‌ (ತನಿಖಾಧಿಕಾರಿಗಳ) ಪರ ವಿಶೇಷ ಸರ್ಕಾರಿ ಅಭಿಯೋಜಕರು (ಎಸ್‌ಪಿಸಿ) ನಡೆಸಬೇಕು. ಈ ಸಂದರ್ಭದಲ್ಲಿ ದರ್ಶನ್‌ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ಪೀಠ ಹೇಳಿದೆ.

ಅಲ್ಲದೆ, ಪ್ರಾಸಿಕ್ಯೂಷನ್‌ ಮುಖ್ಯ ವಿಚಾರಣೆ ಬಳಿಕ ಪಾಟಿ ಸವಾಲು ಪ್ರಕ್ರಿಯೆ ನಡೆಸಲು ಪ್ರತ್ಯೇಕ ಎರಡು-ಮೂರು ದಿನ ನಿಗದಿಪಡಿಸಬೇಕು. ಯಾವಾಗ ಪಾಟಿ ಸವಾಲು ನಡೆಸಬೇಕು ಎಂಬ ಬಗ್ಗೆ ಸೆಷನ್ಸ್ ನ್ಯಾಯಾಲಯ ದರ್ಶನ್‌ ಪರ ವಕೀಲರು ಮತ್ತು ಎಸ್‌ಪಿಪಿ ಅವರೊಂದಿಗೆ ಸಮಾಲೋಚಿಸಿದ ನಂತರ ನಿಗದಿ ಪಡಿಸಬೇಕು. ನಿಗದಿತ ದಿನದಂದು ಪಾಟಿ ಸವಾಲು ನಡೆಸಬೇಕು. ವಿಚಾರಣೆ ಮಂದೂಡಿಕೆಗೆ ಆರೋಪಿಗಳು ಕೇಳಬಾರದು. ಅಗತ್ಯವಾದರೆ ಮಾತ್ರ ಒಂದೆರಡು ದಿನ ಪಾಟಿ ಸವಾಲು ಪ್ರಕ್ರಿಯೆಯನ್ನು ವಿಸ್ತರಣೆ ಮಾಡಲು ಸೆಷನ್ಸ್‌ ನ್ಯಾಯಾಧೀಶರು ಮುಕ್ತರಾಗಿದ್ದಾರೆ ಎಂದು ಪೀಠ ಆದೇಶದಲ್ಲಿ ತಿಳಿಸಿದ್ದಾರೆ.

ಈ ಏಳು ಪ್ರಮುಖ ಸಾಕ್ಷಿಗಳ ಪಾಟಿ ಸವಾಲು ವೇಳೆ ದರ್ಶನ್‌ ಸೇರಿ ಅನುಮತಿ ಕೋರುವ ಇತರೆ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನ ಮುಖ್ಯ ಅಧಿಕ್ಷಕರು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕು. ಅಗತ್ಯವಿದ್ದರೆ ಸೆಷನ್ಸ್‌ ನ್ಯಾಯಾಧೀಶರು ಪಾಟಿ ಸವಾಲು ಪ್ರಕ್ರಿಯೆಯನ್ನು ಇನ್‌-ಕ್ಯಾಮೆರಾದಲ್ಲಿ ನಡೆಸಬಹುದು. ಪ್ರಕರಣದ ಸೂಕ್ಷ್ಮತೆ ಮತ್ತು ವಿಚಿತ್ರ ಸನ್ನಿವೇಶ ಪರಿಗಣಿಸಿ ಈ ಆದೇಶ ಮಾಡಲಾಗುತ್ತಿದೆ. ಇದು ಇತರೆ ಯಾವುದೇ ಪ್ರಕರಣಕ್ಕೆ ನಿದರ್ಶನವಾಗುವುದಿಲ್ಲ ಎಂದು ಸೂಚಿಸಿರುವ ಪೀಠ ಅರ್ಜಿ ಇತ್ಯರ್ಥಪಡಿಸಿದೆ.

ವಿಚಾರಣೆ ವೇಳೆ ದರ್ಶನ್‌ ಪರ ಹಿರಿಯ ವಕೀಲ ಹಸ್ಮತ್‌ ಪಾಷಾ ಅವರು, ಏಳು ಜನ ಪ್ರಮುಖ ಸಾಕ್ಷಿಗಳ ಪಟ್ಟಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅಲ್ಲದೆ, ಈ ಏಳು ಸಾಕ್ಷಿಗಳ ವಿಚಾರಣೆ/ಹೇಳಿಕೆ ದಾಖಲು ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ದರ್ಶನ್‌ ಅವಕಾಶ ಕಲ್ಪಿಸಿ ಆದೇಶಿಸುವಂತೆ ಕೋರಿದರು.

ಅದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ಅವರು, ಆರೋಪಿಗಳ ಖುದ್ದು ಹಾಜರಿ ಅಗತ್ಯವಾಗಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸಿರುವ ಪ್ರಕರಣಗಳ ಆರೋಪಿಗಳೂ ಸಾಕ್ಷಿಗಳ ವಿಚಾರಣೆ ವೇಳೆ ತಮ್ಮನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲು ಕೇಳಿದರೆ ಕಷ್ಟವಾಗುತ್ತದೆ. ಸುಮಾರು 1,616 ಪ್ರಕರಣ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣ ಮುಂದಿಟ್ಟುಕೊಂಡು ಇತರೆ ಆರೋಪಿಗಳು ಖುದ್ದು ಹಾಜರಾತಿಗೆ ಕೇಳಿದರೆ ಸಮಸ್ಯೆ ಆಗಲಿದೆ. ಖುದ್ದು ಹಾಜರಾತಿ ಬದಲು ಇ‌ ಮುಲಾಕತ್ ಸೌಲಭ್ಯದಡಿ ಆರೋಪಿಯೊಂದಿಗೆ ಸಂಭಾಷಣೆ ನಡೆಸಬಹುದು ಎಂದು ಆಕ್ಷೇಪಿಸಿದರು.

ವಿಶಿಷ್ಟ ಪ್ರಕರಣ:

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಈ ಪ್ರಮುಖ ಏಳು ಸಾಕ್ಷಿಗಳಲ್ಲಿ ಮಾಫಿ ಸಾಕ್ಷಿಯೂ ಇರುವುದರಿಂದ ವಿಶಿಷ್ಟ ಪ್ರಕರಣ ಇದಾಗಿದೆ. ಇತರೆ ಪ್ರಕರಣಗಳಲ್ಲಿ ಇದೇ ಮಾದರಿ ಅನುಸರಿಸಲಾಗದು ಎಂದು ನುಡಿಯಿತು. ಹಾಗೆಯೇ, ಸೂಕ್ತ ಭದ್ರತೆ ಕೊಟ್ಟು ಆರೋಪಿಗಳನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವುದು ಸರ್ಕಾರದ ಹೊಣೆಯಲ್ಲವೇ? ದರ್ಶನ್‌ ಸದ್ಯ ಆರೋಪಿ ಮಾತ್ರ. ವಿಚಾರಣೆಯ ಪ್ರತಿ ವಿದ್ಯಮಾನ ಆರೋಪಿ ಸಮ್ಮುಖದಲ್ಲೇ ನಡೆಯಬೇಕೆಂದಿದೆ. ಹೀಗಾಗಿ ನ್ಯಾಯಾಲಯಗಳ ಮೇಲೆಯೂ ಆರೋಪಿಯ ಭದ್ರತೆ ಹೊಣೆ ಇರುತ್ತದೆ ಎಂದು ಅಭಿಪ್ರಾಯಟ್ಟು ಈ ಆದೇಶ ಮಾಡಿದೆ.

-ಬಾಕ್ಸ್‌-

ಈ ಏಳು ಮಂದಿ ಪ್ರಮುಖ ಸಾಕ್ಷಿಗಳಲ್ಲಿ ಮಾಫಿ ಸಾಕ್ಷಿಯಾಗಿರುವ ಪ್ರದೂಷ್‌, ರೇಣುಕಾಸ್ವಾಮಿಯ ಶವಪರಿಕ್ಷೆ ನಡೆಸಿದ ವೈದ್ಯರು ಮತ್ತು ಮೂರು ಮಂದಿ ತನಿಖಾಧಿಕಾರಿಗಳಿದ್ದಾರೆ.