ಸಾರಾಂಶ
ಜಮಖಂಡಿ ತಾಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆ ಪ್ರದೇಶದ ಏಳು ಕುಟುಂಬಗಳನ್ನು ಶನಿವಾರ ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ ಅನೀಲ ಬಡಿಗೇರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಮುತ್ತೂರು ಗ್ರಾಮದ ನಡುಗಡ್ಡೆ ಪ್ರದೇಶದ ಏಳು ಕುಟುಂಬಗಳನ್ನು ಶನಿವಾರ ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ ಅನೀಲ ಬಡಿಗೇರ ತಿಳಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆಯಾಗಿದ್ದರಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು ಹಿಪ್ಪರಗಿ ಜಲಾಶಯದಿಂದ 2.25 ಲಕ್ಷ ಕ್ಯುಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಇದರಿಂದ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ನದಿನೀರು ಪ್ರವೇಶಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮುತ್ತೂರು ನಡುಗಡ್ಡೆ ಪ್ರದೇಶದ 7 ಕುಟುಂಬಗಳ 36 ಜನರನ್ನು ಹಾಗೂ 38 ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ಮುತ್ತೂರಿನ ನಡುಗಡ್ಡೆ ಪ್ರದೇಶದಲ್ಲಿ 25 ಕುಟುಂಬಗಳು ವಾಸವಾಗಿವೆ. ನೀರಿನ ಹತ್ತಿರ ಇರುವ 7 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.ಉಳಿದ ಕುಟುಂಬಗಳು ನದಿ ಪಾತ್ರದಿಂದ ದೂರ ಇದ್ದು ಸ್ಥಳಾಂತರಿಸುವ ಅವಶ್ಯಕತೆ ಇಲ್ಲ. ಇನ್ನೆರಡು ದಿನಗಳಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಲಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದರಿಂದ ನೀರಿನ ಒಳಹರಿವು ಕಡಿಮೆಯಾಗಿ ಸದ್ಯಕ್ಕಿಂತ ನದಿ ಪಾತ್ರದಲ್ಲಿ ನೀರು ಇಳಿಮುಖವಾಗಲಿದೆ. ಆಲಮಟ್ಟಿ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್ ನೀರನ್ನು ಹರಿ ಬಿಡಲಾಗುತ್ತಿದ್ದು ನದಿ ತೀರದ ಗ್ರಾಮಸ್ಥರು ಭಯ ಪಡುವ ಅವಶ್ಯಕತೆ ಇಲ್ಲ. ತಾಲೂಕು ಆಡಳಿತ ನಿರಂತರವಾಗಿ ಬಾಧಿತ ಪ್ರದೇಶಗಳ ಜನರೊಂದಿಗೆ ಸಂಪರ್ಕದಲ್ಲಿರುತ್ತದೆ. ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು ಸಕಾಲಕ್ಕೆ ಸೂಕ್ತ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.