ಸಾರಾಂಶ
- ಜೋಳದಾಳ್ ಅರಣ್ಯದಲ್ಲಿ ಅಡಕೆ ವ್ಯಾಪಾರಿ, ಇತರರಿಗೆ ಬೆದರಿಸಿ, ₹17.24 ಲಕ್ಷ ದರೋಡೆ ಪ್ರಕರಣ
- - - ಕನ್ನಡಪ್ರಭ ವಾರ್ತೆ, ದಾವಣಗೆರೆ, ಅ.9ಅಡಕೆ ವ್ಯಾಪಾರ ಮಾಡಿಸುವುದಾಗಿ ಹೇಳಿ ಮಧ್ಯವರ್ತಿಯಾಗಿ ಹೋಗಿ, ₹17.24 ಲಕ್ಷ ನಗದು ದರೋಡೆ ಮಾಡಿದ್ದ ಏಳು ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿ, ₹7,37,920 ನಗದು, ಕೃತ್ಯಕ್ಕೆ ಬಳಸಿದ್ದ 4 ವಾಹನಗಳು, 9 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಚನ್ನಗಿರಿ ತಾಲೂಕಿನ ಬುಳಸಾಗರ ಗ್ರಾಮ ನಿವಾಸಿ, ಅಡಕೆ ವ್ಯಾಪಾರಿ ಅಶೋಕ (28) ಎಂಬವರಿಗೆ ಚನ್ನಗಿರಿ ಪಟ್ಟಣದ ನಿವಾಸಿ ಮಹ್ಮದ್ ಇನಾಯತ್ತುಲ್ಲಾ (20) ಎಂಬಾತ ಜೋಳದಾಳ್, ಕಲ್ಲಾಪುರ ಗ್ರಾಮಗಳಲ್ಲಿ 35 ಚೀಲ ಅಡಕೆ ವ್ಯಾಪಾರ ಮಾಡಿಸಿಕೊಡುವುದಾಗಿ ನಂಬಿಸಿಸಿದ್ದ.2024ರ ಸೆ.30ರಂದು ಬೊಲೇರೋ ಪಿಕಪ್ ಗೂಡ್ಸ್ ವಾಹನ (ಕೆಎ 13, ಸಿ 6260)ದಲ್ಲಿ ₹17.24 ಲಕ್ಷ ಸಮೇತ ತನ್ನ ಹಮಾಲರೊಂದಿಗೆ ಹೋಗುತ್ತಿದ್ದರು. ಅಜ್ಜಿಹಳ್ಳಿ ವೃತ್ತದ ಬಳಿ ಬಂದು, ಅಲ್ಲಿಂದ ಮಹ್ಮದ್ ಇನಾಯತ್ತುಲ್ಲಾ ಜೊತೆ ಜೋಳದಾಳು ಮಾರ್ಗವಾಗಿ ಸಾಗಿದ್ದಾರೆ. ಅಲ್ಲಿಂದ ಭದ್ರಾವತಿ ಕಡೆ ಹೋಗುವಾಗ ಜೋಳದಾಳ ಅರಣ್ಯ ಪ್ರದೇಶ ರಸ್ತೆಯಲ್ಲಿ ಮೂತ್ರ ವಿಸರ್ಜಿಸಬೇಕೆಂದು ಮಹ್ಮದ್ ಇನಾಯುತುಲ್ಲಾ ಗಾಡಿ ನಿಲ್ಲಿಸಿದ್ದಾನೆ.
ರಸ್ತೆ ಪಕ್ಕದಲ್ಲಿ ವಾಹನ ನಿಲ್ಲಿಸುತ್ತಿದ್ದಂತೆಯೇ ಹಿಂದಿನಿಂದ ಬಂದ ಇನ್ನೋವಾ ಕಾರಿನಲ್ಲಿದ್ದ ಏಳೆಂಟು ಜನ ಅಪರಿಚಿತರು ಕೈಗಳಲ್ಲಿ ಚಾಕು ಹಿಡಿದುಕೊಂಡು ಬಂದು, ಪಿರ್ಯಾದಿ ಅಶೋಕ ಮತ್ತು ಆತನ ಜೊತೆಗಿದ್ದವರಿಗೆ ಹೆದರಿಸಿದ್ದರೆ. ಅವರ ಬಳಿ ಇದ್ದ ₹17.24 ಲಕ್ಷ ಹಣ, ಮೊಬೈಲ್ ಹಾಗೂ ಗೂಡ್ಸ್ ವಾಹನದ ಕೀ ದರೋಡೆ ಮಾಡಿ, ಪರಾರಿಯಾಗಿದ್ದರು. ಈ ಬಗ್ಗೆ ಅಶೋಕ ಚನ್ನಗಿರಿ ಪೊಲೀಸ್ ಠಾಣೆಗೆ ಧಾವಿಸಿ, ದೂರು ದಾಖಲಿಸಿದ್ದರು. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಘಟನೆ ನಡೆದ ಸ್ಥಳ ಪರಿಶೀಲಿಸಿದ್ದರು.ಚನ್ನಗಿರಿ ಡಿವೈಎಸ್‌ಪಿ ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಬಾಲಚಂದ್ರ ನಾಯ್ಕ, ಪಿಎಸ್ಐಗಳಾದ ಸುರೇಶ, ಸಂತೇಬೆನ್ನೂರು ಎಸ್ಐ ಜಗದೀಶ, ಹೊನ್ನಾಳಿ ಎಸ್ಐ ಸಂಜೀವಕುಮಾರ, ಡಿಸಿಆರ್‌ಬಿ ಸಿಬ್ಬಂದಿಯಾದ ಕೆ.ಸಿ.ಮಜೀದ್, ರಾಘವೇಂದ್ರ, ರಮೇಶ ನಾಯ್ಕ, ಆಂಜನೇಯ, ಬಾಲಾಜಿ, ಚನ್ನಗಿರಿ ಠಾಣೆ ಸಿಬ್ಬಂದಿಯಾದ ಶಶಿಧರ, ರಮೇಶ, ರವಿ, ಚನ್ನಕೇಶ, ಶ್ರೀನಿವಾಸ, ಹರೀಶಕುಮಾರ, ರೇವಣಸಿದ್ದಪ್ಪ ಸಂತೇಬೆನ್ನೂರು ಟಾಮೆ ಸಿಬ್ಬಂದಿ ತಂಡ ರಚಿಸಿದ್ದರು. ಎಎಸ್‌ಪಿಗಳಾದ ವಿಜಯಕುಮಾರ ಎಂ.ಸಂತೋಷ, ಜಿ.ಮಂಜುನಾಥ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆ ಕಾರ್ಯ ಕೈಗೊಳ್ಳಲಾಯಿತು.
ಅಡಕೆ ವ್ಯಾಪಾರಿ ಅಶೋಕ ಜೊತೆಗಿದ್ದ ವ್ಯಕ್ತಿ ಬಗ್ಗೆ ಪೊಲೀಸರಿಗೆ ಅನುಮಾನ ಬಂದಿತ್ತು. ಅಡಕೆ ಕೊಡಿಸುವಲ್ಲಿ ಮಧ್ಯವರ್ತಿ ಆಗಿದ್ದ ಮಹ್ಮದ್ ಇನಾಯತ್ತುಲ್ಲಾನನ್ನು ತೀವ್ರ ವಿಚಾರಣೆ ನಡೆಸಿದಾಗ ಹಣ ದರೋಡೆ ಮಾಡುವ ಸಂಚು ರೂಪಿಸಿದ್ದು ಬಯಲಾಗಿದೆ.ಚನ್ನಗಿರಿ ಪಟ್ಟಣದ ಮಹ್ಮದ್ ಇನಾಯತುಲ್ಲಾ (21), ಉಮ್ಮರ್ ಫಾರೂಕ್ (20), ಷಾಬುದ್ದೀನ್ ಖಾಜಿ ಅಲಿಯಾಸ್ ಶಾಹೀದ್ ಖಾಜಿ (24) ಈ ಮೂವರೂ ಸೇರಿ, ಮೈಸೂರಿನ ತಂಡವೊಂದರ ಜೊತೆಗೂಡಿ ಹಣ ಲಪಟಾಯಿಸುವ ಸಂಚು ರೂಪಿಸಿದ್ದರು. ಅದರಂತೆ ಅಡಕೆ ಕೊಡಿಸುವುದಾಗಿ ಕರೆದೊಯ್ದು, ಜೋಳದಾಳು ಅರಣ್ಯದಲ್ಲಿ ಸೆ.30ರಂದು ದರೋಡೆ ಮಾಡಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ.
ಮೈಸೂರಿಗೆ ತೆರಳಿದ್ದ ಪೊಲೀಸರ ತಂಡವು ಮೈಸೂರಿನ ಸಲ್ಮಾನ್ ಅಹಮ್ಮದ್ ಖಾನ್ (25), ತುಮಕೂರು ಜಿಲ್ಲೆ ಖುರಂ ಖಾನ್ (25), ಮೈಸೂರಿನ ಸೈಯದ್ ಸೈಫುಲ್ಲಾ ಅಲಿಯಾಸ್ ಸೈಫು (24), ಖಾಷಿಫ್ ಅಹಮ್ಮದ್ (25) ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಿದರು. ಪ್ರಕರಣ ಭೇದಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮೆಚ್ಚಿ, ನಗದು ಬಹುಮಾನ ಘೋಷಿಸಿದ್ದಾರೆ.- - - -9ಕೆಡಿವಿಜಿ8, 9:
ಚನ್ನಗಿರಿ ತಾಲೂಕು ಜೋಳದಾಳು ಅರಣ್ಯ ಪ್ರದೇಶದಲ್ಲಿ ಅಡಕೆ ವ್ಯಾಪಾರಿಗೆ ದರೋಡೆ ಮಾಡಿದ್ದ ಪ್ರಕರಣದ 9 ಆರೋಪಿಗಳನ್ನು ಬಂಧಿಸಿ, 6 ವಾಹನಗಳು, 9 ಮೊಬೈಲ್ ಹಾಗೂ ದರೋಡೆ ಮಾಡಿದ್ದ ಹಣದ ಪೈಕಿ ₹7,37,920 ವನ್ನು ಪೊಲೀಸರು ಜಪ್ತಿ ಮಾಡಿದ್ದು, ಕಾರ್ಯಾಚರಣೆ ನಡೆಸಿದ ಅಧಿಕಾರಿ-ಸಿಬ್ಬಂದಿ ತಂಡಕ್ಕೆ ಎಸ್‌ಪಿ ಪ್ರಶಂಸಿಸಿದರು.