ಜ್ಯುವೆಲ್ಲರ್ಸ್ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ 550 ಗ್ರಾಂ ಚಿನ್ನಾಭರಣ ದರೋಡೆ : 7 ಮಂದಿ ಬಂಧನ

| Published : Aug 03 2024, 01:37 AM IST / Updated: Aug 03 2024, 06:10 AM IST

ಸಾರಾಂಶ

ಜ್ಯುವೆಲ್ಲರ್ಸ್ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ 550 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದ ಅಂತಾರಾಜ್ಯ ಖದೀಮರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

 ದಾಸರಹಳ್ಳಿ :  ಜ್ಯುವೆಲ್ಲರ್ಸ್ ಅಂಗಡಿಗೆ ನುಗ್ಗಿ ಪಿಸ್ತೂಲ್ ತೋರಿಸಿ 550 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದ ಅಂತಾರಾಜ್ಯ ಖದೀಮರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ನಾರಾಯಣ ಲಾಲ್, ರಾಮ್ ಲಾಲ್, ಕಿಶೋರ್ ಪವಾರ್, ಮಹೇಂದ್ರ ಗೊಹ್ಲೋಟ್, ರಾತರಾಮ್, ಅಶೋಕ್ ಕುಮಾರ್, ಸೋಹನ್ ರಾಮ್ ಬಂಧಿತರು. ಇವರು ರಾಜಸ್ಥಾನದ ಪಾಲಿ, ಜೋಧ್‌ಪುರ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ನಾರಾಯಣ ಲಾಲ್‌ ಮತ್ತು ರಾಮ್‌ಲಾಲ್‌ ಜ್ಯುವೆಲ್ಲರ್ಸ್‌ ಮತ್ತು ಕೆಮಿಕಲ್‌ ನಡೆಸುತ್ತಿದ್ದರು. 

ಇದರಿಂದ ನಷ್ಟವಾಗಿದ್ದರಿಂದ ಅವರು ಕಳ್ಳತನ ಕೃತ್ಯಕ್ಕೆ ಇಳಿದಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಅಧೀಕ್ಷಕ ಸಿ.ಕೆ.ಬಾಬ ಮಾಹಿತಿ ನೀಡಿದರು.ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೊಂಬರಹಳ್ಳಿ ಗ್ರಾಮದ ಪದಂ ಜ್ಯುವೆಲ್ಲರ್ಸ್ ಅಂಗಡಿಗೆ ತಿಂಗಳ ಹಿಂದೆ ನಾರಾಯಣ ಲಾಲ್‌, ರಾಮ್‌ಲಾಲ್‌ ಏಕಾಏಕಿ ನುಗ್ಗಿ ಅಂಗಡಿಯ ಮಾಲೀಕರಿಗೆ ಪಿಸ್ತೂಲ್‌ ತೋರಿಸಿ 550 ಗ್ರಾಂ ತೂಕದ ಚಿನ್ನಾಭರಣವನ್ನು ಸುಲಿಗೆ ಮಾಡಿ ಎಸ್ಕೇಪ್ ಆಗಿದ್ದರು. 

ಉಳಿದ ಆರೋಪಿಗಳು ಅಂಗಡಿಯ ಹೊರಭಾಗದಲ್ಲಿ ಕಾವಲು ನಿಂತಿದ್ದರು. ಸಿಸಿಟಿವಿ ಇರುವುದು ಗೊತ್ತಿದ್ದರಿಂದ ಆರೋಪಿಗಳು ಮುಖಕ್ಕೆ ಬಟ್ಟೆ ಮುಚ್ಚಿಕೊಂಡು ಬಂದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾದನಾಯಕನಹಳ್ಳಿ ಪೊಲೀಸರು ಸಿಸಿಟಿವಿ ಹಾಗೂ ತಾಂತ್ರಿಕ ಆಯಾಮದಲ್ಲಿ ಮಾಹಿತಿ ಕಲೆ ಹಾಕಿ ಕೃತ್ಯದಲ್ಲಿ ಭಾಗಿಯಾಗಿದ್ದ ರಾಜಸ್ಥಾನ ಮೂಲದ ಅಂತಾರಾಜ್ಯ ಖದೀಮರನ್ನು ಬಂಧಿಸಿದ್ದಾರೆ. ಅವರಿಂದ 417 ಗ್ರಾಂ ತೂಕದ ಚಿನ್ನಾಭರಣ ಹಾಗೂ ಚಿನ್ನದ ಗಟ್ಟಿ, ಪಿಸ್ತೂಲ್, ಡ್ರಾಗರ್, ಕೆಟಿಎಂ ಡ್ಯೂಕ್, ಆಟೋರಿಕ್ಷಾವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಅಪರ ಪೊಲೀಸ್ ಅಧೀಕ್ಷಕ ಪಿ.ನಾಗೇಶ್ ಕುಮಾರ್, ನಾಗರಾಜು, ಡಿವೈಎಸ್‌ಪಿ ಜಗದೀಶ್, ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಎಂ.ಕೆ.ಮುರಳಿಧರ, ಸಬ್ ಇನ್‌ಸ್ಪೆಕ್ಟರ್‌ ಸೋಮಶೇಖರ್, ಕುಮಾರಸ್ವಾಮಿ, ದೇವಿಕಾದೇವಿ, ಎಎಸ್‌ಐ ನಾರಾಯಣ ಸ್ವಾಮಿ ಮಲ್ಲಗೊಂಡಿ, ಎಸ್‌.ಮಂಜುನಾಥ, ಎಚ್‌.ನರೇಶ್ ಕುಮಾರ್, ಎಚ್‌.ರವಿಕುಮಾರ್ ಉಪಸ್ಥಿತರಿದ್ದರು.

ಫ್ಯಾಕ್ಟರಿಯಲ್ಲಿ ಕಾಪರ್‌ ಕದ್ದ ಏಳು ಆರೋಪಿಗಳ ಬಂಧನ

ಡಾಬಸ್‌ಪೇಟೆ ಪೊಲೀಸ್ ಠಾಣೆಯ ಸೊಂಪುರ ಕೈಗಾರಿಕಾ ಪ್ರದೇಶದ ನಿಡವಂದ ಬಳಿಯ ಸ್ಕೈ ಚಾಕೋಲೆಟ್ ಪ್ಯಾಕ್ಟರಿಯಲ್ಲಿ ಜು.24ರಂದು ಐದಾರು ಜನ ಖದೀಮರು ಅನೇಕ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದರು. ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಡಾಬಸ್‌ಪೇಟೆ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿ 75 ಕೆ.ಜಿ ಕಾಪರ್ ರೋಲ್, 75 ಕೆ.ಜಿ ಅಲ್ಯೂಮಿನಿಯಂ ಪ್ಲೇಟ್‌, 1500 ಕೆ.ಜಿ. ಕಬ್ಬಿಣವನ್ನು ವಶಕ್ಕೆ ಪಡೆಯಲಾಗಿದೆ.