ಕದ್ದ ಬೈಕ್‌ನಲ್ಲಿ ಬಿದ್ದರೂ ನೆರವಿಗೆಬಾರದ ಗೆಳೆಯನಿಗೆ ಚಾಕು ಇರಿತ : ಶಿವಾಜಿನಗರ ಠಾಣೆ ಪೊಲೀಸರಿಂದ ಆರೋಪಿ ಬಂಧನ

| Published : Aug 03 2024, 01:37 AM IST / Updated: Aug 03 2024, 06:11 AM IST

ಸಾರಾಂಶ

ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗುವಾಗ ಆಯತಪ್ಪಿ ಬಿದ್ದರೂ ನೆರವಿಗೆ ಬಾರಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದ ಆರೋಪಿಯ ಬಂಧನ.

 ಬೆಂಗಳೂರು :  ದ್ವಿಚಕ್ರ ವಾಹನ ಕಳವು ಮಾಡಿಕೊಂಡು ಹೋಗುವಾಗ ಆಯತಪ್ಪಿ ಬಿದ್ದರೂ ನೆರವಿಗೆ ಬಾರಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದ ಆರೋಪಿಯನ್ನು ಶಿವಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾರಿಯಿಪಾಳ್ಯದ ಸಾದಿಕ್‌ ಅಲಿಯಾಸ್‌ ಡ್ಯಾನಿ(24) ಬಂಧಿತ. ಶಿವಾಜಿನಗರದ ಸೈಯದ್‌ ನಾಜೀಂ(23) ಎಂಬಾತ ಚಾಕು ಇರಿತಕ್ಕೆ ಒಳಗಾಗಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜು.21ರಂದು ಈ ಘಟನೆ ನಡೆದಿದೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆರೋಪಿ ಸಾದಿಕ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಘಟನೆ?:

ಅಪರಾಧ ಹಿನ್ನೆಲೆಯುಳ್ಳ ಆರೋಪಿ ಸಾದಿಕ್‌ ಮತ್ತು ನಾಜೀಂ ಜೈಲಿನಲ್ಲಿ ಸ್ನೇಹಿತರಾಗಿದ್ದರು. ಸಾದಿಕ್‌ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಜುಲೈ 21ರಂದು ಆರೋಪಿ ಸಾದಿಕ್‌ ಗೋರಿಪಾಳ್ಯದಲ್ಲಿರುವ ಅಕ್ಕನ ಮನೆಗೆ ಸ್ನೇಹಿತ ನಾಜೀಂನನ್ನು ಊಬರ್‌ ಕ್ಯಾಬ್‌ನಲ್ಲಿ ಕರೆದುಕೊಂಡು ಹೋಗಿದ್ದ. ವಾಪಾಸ್‌ ಬರುವಾಗ ಗೋರಿಪಾಳ್ಯದಲ್ಲಿ ಇಬ್ಬರು ಸೇರಿ ದ್ವಿಚಕ್ರ ವಾಹನ ಕಳವು ಮಾಡಿದ್ದಾರೆ. ಬಳಿಕ ಕದ್ದ ಆ ದ್ವಿಚಕ್ರ ವಾಹನದಲ್ಲಿ ನಂದಿನಿ ಲೇಔಟ್‌ ಕಡೆಗೆ ಹೊರಟ್ಟಿದ್ದಾರೆ. ಈ ವೇಳೆ ಅಲ್ಲಿ ರಸ್ತೆ ಬದಿ ನಿಲುಗಡೆ ಮಾಡಿದ್ದ ಮತ್ತೊಂದು ದ್ವಿಚಕ್ರ ವಾಹನ ಕಳವು ಮಾಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ:

ಬಳಿಕ ಇಬ್ಬರೂ ಒಂದೊಂದು ದ್ವಿಚಕ್ರ ವಾಹನದಲ್ಲಿ ದಾಸರಹಳ್ಳಿ ಕಡೆಗೆ ಹೊರಟ್ಟಿದ್ದಾರೆ. ಈ ವೇಳೆ ಆರೋಪಿ ಸಾದಿಕ್‌ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನದಿಂದ ರಸ್ತೆಗೆ ಬಿದ್ದಿದ್ದಾನೆ. ಅಷ್ಟರಲ್ಲಿ ನಾಜೀಂ ಮತ್ತೊಂದು ದ್ವಿಚಕ್ರ ವಾಹನದಲ್ಲಿ ಮುಂದಕ್ಕೆ ಹೋಗಿದ್ದ. ಎಷ್ಟು ಹೊತ್ತಾದರೂ ಸಾದಿಕ್‌ ಬಾರದಿದ್ದ ಹಿನ್ನೆಲೆಯಲ್ಲಿ ನಾಜೀಂ ಹಿಂದಕ್ಕೆ ಬಂದಿದ್ದಾನೆ. ಈ ವೇಳೆ ಕೋಪಗೊಂಡಿದ್ದ ಸಾದಿಕ್‌, ನಾನು ಬಿದ್ದರೂ ನೆರವಿಗೆ ಬಾರಲಿಲ್ಲ ಎಂದು ನಾಜೀಂಗೆ ಚಾಕುವಿನಿಂದ ಇರಿದಿದ್ದಾನೆ. ಕೆಲ ಸಮಯ ಇಬ್ಬರು ಜಗಳವಾಡಿದ್ದಾರೆ.

ಒಟ್ಟಿಗೆ ಆಸ್ಪತ್ರೆಗೆ ತೆರಳಿದ್ದ ಗೆಳೆಯರು

ಚಾಕು ಇರಿತದಿಂದ ನಾಜೀಂಗೆ ರಕ್ತಸ್ರಾವವಾದ್ದರಿಂದ ಸಾರಾಯಿಪಾಳ್ಯದ ಆಸ್ಪತ್ರೆಗೆ ಜತೆಯಲ್ಲೇ ತೆರಳಿ ದ್ವಿಚಕ್ರವಾಹನದಿಂದ ಬಿದ್ದು ಗಾಯಗೊಂಡಿದ್ದು, ಚಿಕಿತ್ಸೆ ನೀಡುವಂತೆ ಕೇಳಿದ್ದಾರೆ. ಬಳಿಕ ಅಲ್ಲಿ ಬ್ಯಾಡೇಜ್‌ ಮಾಡಿಸಿಕೊಂಡು ನಾಜೀಂ ಮನೆ ಕಡೆಗೆ ತೆರಳಿದ್ದಾನೆ. ಬಳಿಕ ಸಾದಿಕ್‌ ಸಹ ಹೊರಟ್ಟು ಹೋಗಿದ್ದಾನೆ. ಮಾರನೇ ದಿನ ನಾಜೀಂ ಗಾಯಗೊಂಡಿರುವುದನ್ನು ಕಂಡು ಆತನ ಸಹೋದರ ಪ್ರಶ್ನಿಸಿದ್ದಾರೆ. ನಾಜೀಂನನ್ನು ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ವಿಷಯ ತಿಳಿದು ಶಿವಾಜಿನಗರ ಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ನಾಜೀಂನಿಂದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿದ್ದರು.

ಸ್ಥಳೀಯರ ಜತೆ ಸಾದಿಕ್‌ ಕಿರಿಕ್‌

ಈ ನಡುವೆ ಸಾದಿಕ್‌ ಕದ್ದ ದ್ವಿಚಕ್ರ ವಾಹನದಲ್ಲಿ ಮಾಗಡಿಗೆ ತೆರಳಿದ್ದು, ಅಲ್ಲಿ ಸ್ಥಳೀಯರ ಜತೆಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದಾನೆ. ಈ ವೇಳೆ ಮಾಗಡಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದಾಗ, ಸಾದಿಕ್‌ ಬಳಿ ಚಾಕು ಇರುವುದು ಕಂಡು ಬಂದಿದೆ. ಬಳಿಕ ಆತನನ್ನು ಬಂಧಿಸಿ, ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಇತ್ತ ಶಿವಾಜಿನಗರ ಠಾಣೆ ಪೊಲೀಸರು, ಸಾದಿಕ್‌ ಬಂಧನದ ಸುದ್ದಿ ತಿಳಿದು, ಬಾಡಿ ವಾರೆಂಟ್‌ ಮೇಲೆ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.