ಹೊಸಪೇಟೆ: ರಾಜ್ಯದಲ್ಲಿ ಎಸ್.ಟಿ ಸಮುದಾಯಕ್ಕೆ ಮೀಸಲಾಗಿರುವ ಶೇ.7 ಮೀಸಲಾತಿಯನ್ನು ರಾಜ್ಯ ಸರ್ಕಾರ ತಕ್ಷಣ ಜಾರಿ ಮಾಡಬೇಕು. ಮೀಸಲಾತಿ ಜಾರಿ ಆಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ಸೋಮವಾರ ಇಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ಆಯೋಜಿದ್ದ "ಸಾಮಾಜಿಕ ನ್ಯಾಯಕ್ಕಾಗಿ ಜಾಗೃತಿ ಸಮಾವೇಶ "ದಲ್ಲಿ ಅವರು ಮಾತನಾಡಿದರು.

ಪರಿಶಿಷ್ಟ ಪಂಗಡಕ್ಕೆ ಇದ್ದ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿದ ಬಿಜೆಪಿ ವಾಲ್ಮೀಕಿ ನಾಯಕ ಸಮುದಾಯಕ್ಕೆ ಮಾಡಿದ ಕೆಲಸ ಅಪಾರ. ಮುಂದಿನ 2028ರಲ್ಲಿ ಸಮಾಜ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮುಂದಾಗಬೇಕು. ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಶ್ರೀರಾಮುಲು ಕರೆನೀಡಿದರು.

ಎಸ್‌ಟಿ ಸಮುದಾಯದವರ ಬಗೆಗೆ ಕಾಂಗ್ರೆಸ್ಸಿಗೆ ಒಂದಿಷ್ಟು ಕಾಳಜಿಯೂ ಇಲ್ಲ. ವಿಧಾನಪರಿಷತ್ ಚುನಾವಣೆಯಲ್ಲಿ ಟಿಕೆಟ್‌ ಸಿಗಬಹುದು ಎಂಬ ಆಸೆಯಿಂದ ಉಗ್ರಪ್ಪ ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಕಾಂಗ್ರೆಸ್‌ ಪರ ಕೆಲಸ ಮಾಡಿದರೂ ಕಾಂಗ್ರೆಸ್‌ ಪಕ್ಷ ಅವರಿಗೆ ಟಿಕೆಟ್‌ ನೀಡಿಲ್ಲ. ಆದರೂ ಪಕ್ಷದಲ್ಲಿ ಅವರು ಸುಮ್ಮನಾಗಿದ್ದಾರೆ ಎಂದು ಹೇಳಿದರು.

ಶಾಸಕ ರಮೇಶ್ ಜಾರಕಿಹೊಳಿ ಮಾತನಾಡಿ, ರಾಜ್ಯದ ಎಲ್ಲ ಎಸ್‌ಟಿ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಆದರೆ ಅವರೆಲ್ಲರ ನಾಯಕ ಎಂದು ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಅವರಿಗೆ ಸಮಾಜದ ಪರ ಮಾತನಾಡುವ ಧೈರ್ಯ ಇಲ್ಲ. ಶಕ್ತಿಯೂ ಇಲ್ಲ. ಅವರ ಸ್ಥಾನದಲ್ಲಿ ತಾವು ಇದ್ದಿದ್ದರೆ ರಾಜೀನಾಮೆ ನೀಡಿ ಹೊರಗೆ ಬರುತ್ತಿದ್ದೆ ಎಂದು ಹೇಳಿದರು.


ಚುನಾವಣೆಗೆ ಇನ್ನು 22 ತಿಂಗಳು ಇದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಾನೂ ಸೇರಿ ಈ ವೇದಿಕೆ ಮೇಲೆ ಇರುವವರೆಲ್ಲರೂ ಶಾಸಕರಾಗುತ್ತೇವೆ. ಇವರಲ್ಲಿ ಕೆಲವರು ಸಚಿವರೂ ಆಗುತ್ತಾರೆ. ಆಗ ನಮ್ಮ ಸಮಾಜಕ್ಕೆ ಶೇ.7ರ ಮೀಸಲಾತಿ ಕೊಡದೇ ಹೋದರೆ ನಾನೇ ರಾಜೀನಾಮೆ ಕೊಟ್ಟು ಹೊರಬರುತ್ತೇನೆ ಎಂದರು.

ಮಾಜಿ ಶಾಸಕ ರಾಜೂಗೌಡ ಮಾತನಾಡಿ, ಸತೀಶ್ ಜಾರಕೊಹೊಳಿ ತಮ್ಮ ಸರ್ಕಾರದಲ್ಲಿ ಮಾತನಾಡಿ ಶೇ.7 ಮೀಸಲಾತಿ ಕೊಡಿಸುವ ಕೆಲಸವನ್ನು ಮಾಡಿಸಬೇಕಿತ್ತು. ಆದರೆ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.

ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಚಿವ ಶಿವನಗೌಡ ನಾಯಕ, ಮಾಜಿ ಸಂಸದರಾದ ಬಿ.ವಿ. ನಾಯಕ, ಫಕೀರಪ್ಪ, ಮಾಜಿ ಶಾಸಕ ಸೋಮಲಿಂಗಪ್ಪ, ಮೈಸೂರಿನ ಅಪ್ಪಣ್ಣ ಸಭೆಯಲ್ಲಿ ಮಾತನಾಡಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವ ರೆಡ್ಡಿ, ಮುಖಂಡರಾದ ರಾಜೇಶ್, ಸಿದ್ದರಾಜು, ಶಿವಕುಮಾರ್, ವಿಜಯಲಕ್ಷ್ಮಿ, ಮಣಿಕಂಠ, ಓಬಳೇಶ್‌ ಉಪಸ್ಥಿತರಿದ್ದರು.