ಸಾರಾಂಶ
ಭಟ್ಕಳ ತಾಲೂಕಿನ ಬೆಳಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ ಕಳೆದ ಆರ್ಥಿಕ ವರ್ಷದಲ್ಲಿ ₹70.12 ಲಕ್ಷ ಲಾಭ ಗಳಿಸಿದೆ. ಸಂಘದ 72ನೇ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಮಾದೇವ ನಾಯ್ಕ ಈ ಮಾಹಿತಿ ನೀಡಿದ್ದಾರೆ.
ಭಟ್ಕಳ: ಇಲ್ಲಿನ ಬೆಳಕೆ ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘದ 72ನೇ ವಾರ್ಷಿಕ ಮಹಾಸಭೆ ಸಭೆ ಸಂಘದ ಅಧ್ಯಕ್ಷ ಮಾದೇವ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಶೇರುದಾರರನ್ನುದ್ದೇಶಿಸಿ ಮಾತನಾಡಿದ ಅವರು, ಸಂಘವು ಉತ್ತಮ ಪ್ರಗತಿ ಸಾಧಿಸಿದ್ದು, ಆರ್ಥಿಕವಾಗಿ ಸದೃಢವಾಗಿದೆ. ಸಂಘವು 2023-24ನೇ ಸಾಲಿನಲ್ಲಿ 8056 ಸದಸ್ಯರಿಂದ ₹5.17 ಕೋಟಿ ಶೇರು ಬಂಡವಾಳ ಹಾಗೂ ₹66.74 ಕೋಟಿ ಠೇವಣಿ ಸಂಗ್ರಹಿಸಿ, ₹85.04 ಕೋಟಿ ಸಾಲ ವಿತರಿಸಿದೆ. ಮಾರ್ಚ್ ಅಂತ್ಯಕ್ಕೆ ಸಂಘವು ₹70.12 ಲಕ್ಷ ನಿವ್ವಳ ಲಾಭ ಗಳಿಸಿದೆ. ಸಂಘದ ಕಾಯ್ದಿಟ್ಟ ನಿಧಿ ₹10.76 ಕೋಟಿ ಇದ್ದು, ಸಂಘದ ಒಟ್ಟೂ ದುಡಿಯುವ ಬಂಡವಾಳ ₹98.75 ಕೋಟಿ ಇದೆ ಎಂದರು. ಸಂಘದ ಮುಖ್ಯ ಶಾಖೆಯಲ್ಲಿ ಸೇಫ್ ಲಾಕರ್ ತೆರೆಯಲಾಗಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಸಾಮಾಜಿಕ ಕಾರ್ಯಚಟುವಟಿಕೆಯ ಭಾಗವಾಗಿ ಈ ಬಾರಿ ಸಂಘದ ವತಿಯಿಂದ ಬೆಳ್ಕೆಯಲ್ಲಿ ಬಸ್ ತಂಗುದಾಣ ನಿರ್ಮಿಸಿಕೊಡಲಾಗಿದೆ ಎಂದರು.ಶೇರುದಾರರ ಪ್ರಶ್ನೆಗೆ ಅಧ್ಯಕ್ಷರು ಉತ್ತರಿಸಿದರು. ಸಂಘದ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕಾರ ನೀಡಲಾಯಿತು. ಸಂಘದ ಮುಖ್ಯ ಕಾರ್ಯನಿರ್ವಾಹಕ ಅಣ್ಣಪ್ಪ ನಾಯ್ಕ ವರದಿ ವಾಚಿಸಿದರು. ಉಪಾಧ್ಯಕ್ಷ ಪಾಂಡು ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ, ನಾಗೇಶ ನಾಯ್ಕ, ದಾಮೋದರ ನಾಯ್ಕ, ಲೋಕೇಶ ನಾಯ್ಕ, ರವಿರಾಜ ಜೈನ್, ಮಂಜು ಮೊಗೇರ, ಭಾಸ್ಕರ ಗೊಂಡ, ಲಲಿತಾ ನಾಯ್ಕ, ಶಾರದಾ ನಾಯ್ಕ ಹಾಗೂ ಭಾರತಿ ನಾಯ್ಕ ಇದ್ದರು.