ಸಾಮಾನ್ಯವಾಗಿ ಎಕರೆಗೆ 6ರಿಂದ 7 ಕ್ವಿಂಟಲ್‌ ವರೆಗೆ ಇಳುವರಿ ಬರುತ್ತಿದ್ದ ಹೆಸರು ಈ ಬಾರಿ 1ರಿಂದ 2 ಕ್ವಿಂಟಲ್‌ಗೆ ಇಳಿದಿದೆ. ಕೆಲವೆಡೆ ಒಂದು ಕ್ವಿಂಟಲ್‌ ಕೂಡ ಸಿಕ್ಕಿಲ್ಲ. ಹೀಗಾಗಿ ಹೊಲ ಹರಗುವುದು, ಬಿತ್ತನೆ, ಬೀಜ, ಗೊಬ್ಬರ ಹಾಗೂ ಕಳೆ ನಿರ್ವಹಣೆ ಸೇರಿದಂತೆ ಎಕರೆಗೆ ₹ 7000ರಿಂದ ₹ 8000 ವರೆಗೆ ಮಾಡಿದ ಖರ್ಚು ರೈತರ ಪಾಲಿಗೆ ಹೊರೆಯಾಗಿದೆ.

ರಫೀಕ್‌ ಕಲೇಗಾರ

ಅಣ್ಣಿಗೇರಿ:

ಮುಂಗಾರು ಮಳೆ ಕೈಕೊಟ್ಟ ಪರಿಣಾಮ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಮಾಡಿದ ಹೆಸರು, ಉದ್ದು ಸೇರಿದಂತೆ ಪ್ರಮುಖ ಬೆಳೆಗಳು ಶೇ. 70ರಷ್ಟು ಕುಸಿತ ಕಂಡಿವೆ.

ಸಾಮಾನ್ಯವಾಗಿ ಎಕರೆಗೆ 6ರಿಂದ 7 ಕ್ವಿಂಟಲ್‌ ವರೆಗೆ ಇಳುವರಿ ಬರುತ್ತಿದ್ದ ಹೆಸರು ಈ ಬಾರಿ 1ರಿಂದ 2 ಕ್ವಿಂಟಲ್‌ಗೆ ಇಳಿದಿದೆ. ಕೆಲವೆಡೆ ಒಂದು ಕ್ವಿಂಟಲ್‌ ಕೂಡ ಸಿಕ್ಕಿಲ್ಲ. ಹೀಗಾಗಿ ಹೊಲ ಹರಗುವುದು, ಬಿತ್ತನೆ, ಬೀಜ, ಗೊಬ್ಬರ ಹಾಗೂ ಕಳೆ ನಿರ್ವಹಣೆ ಸೇರಿದಂತೆ ಎಕರೆಗೆ ₹ 7000ರಿಂದ ₹ 8000 ವರೆಗೆ ಮಾಡಿದ ಖರ್ಚು ರೈತರ ಪಾಲಿಗೆ ಹೊರೆಯಾಗಿದೆ.

ಇಳುವರಿ ಕುಸಿತ:

ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಸರು ಕ್ವಿಂಟಲ್‌ಗೆ ಸುಮಾರು ₹7,500 ದರವಿದೆ. ಆದರೆ, ಇಳುವರಿ ಗಣನೀಯವಾಗಿ ಕುಸಿದಿರುವುದರಿಂದ ಉತ್ತಮ ದರವಿದ್ದರೂ ರೈತರ ನಷ್ಟ ಸರಿದೂಗುತ್ತಿಲ್ಲ. ಕಟಾವು ಮಾಡಿದ ಹೆಸರು, ಉದ್ದನ್ನು ಒಣಗಿಸಲು ಹಾಕಲಾಗಿದ್ದು, ತುಂತುರು ಮಳೆಯ ಕಾರಣ ಒಣಗಿಸುವುದು ಕಷ್ಟವಾಗಿದೆ.

ಮಳೆ ಕೊರತೆ:

ನವಲಗುಂದ ಚಕ್ಕಡಿ ರಸ್ತೆ, ಹೆಟ್ಟದ ರಸ್ತೆ, ಯಮನೂರು ಹಾಗೂ ಹಳ್ಳಿಕೇರಿ ರಸ್ತೆ ಭಾಗಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದ ಕೆಲ ಹೊಲಗಳಲ್ಲಿ ಎಕರೆಗೆ ಒಂದೆರಡು ಕ್ವಿಂಟಲ್‌ ಹೆಸರು ಬಂದಿದೆ. ಆದರೆ, ಕೋಳಿವಾಡ, ಮಣಕವಾಡ, ಮಜ್ಜಿಗುಡ್ಡ, ಸೈದಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ಕೊರತೆಯಿಂದ ಬೆಳೆ ಸಂಪೂರ್ಣ ಕೈಕೊಟ್ಟಿದೆ.

23,116 ಹೆಕ್ಟೇರ್‌ನಲ್ಲಿ ಬಿತ್ತನೆ:

ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್‌ ಕೃಷಿ ಭೂಮಿ ಇದ್ದು ಈ ಬಾರಿ 23,116.85 ಹೆಕ್ಟೇರ್‌ನಲ್ಲಿ ಮುಂಗಾರು ಬಿತ್ತನೆ ಮಾಡಲಾಗಿದೆ. ಹಿಂದಿನ ಸಾಲಿಗೆ ಹೋಲಿಸಿದರೆ ಬಿತ್ತನೆ ಪ್ರದೇಶ ಶೇ. 9.58ರಷ್ಟು ಹೆಚ್ಚಾಗಿದೆ. ಆದರೆ, ಮಳೆ ಕೊರತೆಯಿಂದ ಇಳುವರಿ ಮಾತ್ರ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶೀಘ್ರವೇ ರೈತರ ನೆರವಿಗೆ ಬಂದು ಅವರ ಸಮಸ್ಯೆ ಪರಿಹರಿಸಬೇಕು ಎಂಬುದು ರೈತರ ಒಕ್ಕೋರಲ ಮನವಿಯಾಗಿದೆ.

ಖರ್ಚು ಕೂಡ ಬಂದಿಲ್ಲ:

21 ಎಕರೆ ಹೊಲದಲ್ಲಿ ಅರ್ಧದಷ್ಟು ಹೆಸರು ಬಿತ್ತಿದ್ದರೂ ಕೇವಲ 8 ಕ್ವಿಂಟಲ್‌ ಬಂದಿದೆ. ಹತ್ತಿಯೂ ಸರಿಯಾಗಿ ಬೆಳವಣಿಗೆಯಾಗಿಲ್ಲ. ಮಾಡಿದ ಖರ್ಚು ಕೂಡ ಬಂದಿಲ್ಲ ಎಂದು ನಾವಳ್ಳಿ ಗ್ರಾಮದ ರೈತ ಭೀಮನಗೌಡ ಪಾಟೀಲ "ಕನ್ನಡಪ್ರಭ "ದ ಎದುರು ಅಳಲು ತೋಡಿಕೊಂಡರು.ರೈತರ ಸಂಕಷ್ಟ ಗಮನಕ್ಕೆ ಬಂದಿದೆ. ಬರ ಪರಿಹಾರ ಘೋಷಿಸುವಂತೆ ಈಗಾಗಲೇ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ. ರೈತರ ಪರವಾಗಿ ಸದಾ ಸ್ಪಂದಿಸುತ್ತೇನೆ.ಎನ್‌.ಎಚ್‌. ಕೋನರಡ್ಡಿ, ಶಾಸಕಈಗಾಗಲೇ ಶೇ. 99ರಷ್ಟು ಬೆಳೆ ಸಮೀಕ್ಷೆ ಪೂರ್ಣಗೊಂಡು ವರದಿ ಸಲ್ಲಿಸಲಾಗಿದೆ. ಸರ್ಕಾರದ ಸೂಚನೆಯಂತೆ ಮುಂದಿನ ಕ್ರಮಕೈಗೊಳ್ಳಲಾಗುವುದು.

ರವೀಂದ್ರಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ