ಸಾರಾಂಶ
ಕನ್ನಡಪ್ರಭವಾರ್ತೆ ನಾಗಮಂಗಲ
ಬೆಳ್ಳೂರು ಪಟ್ಟಣ ಪಂಚಾಯ್ತಿ ವ್ಯಾಪ್ತಿ ವಿಸ್ತೀರ್ಣವಾಗುತ್ತಿರುವ ಹಿನ್ನೆಲೆಯಲ್ಲಿ 70 ಕೋಟಿ ರು. ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ಯೋಜನೆ ಮಂಜೂರಾತಿ ಹಂತದಲ್ಲಿದೆ. ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯ್ತಿ ಮುಂಭಾಗದಲ್ಲಿ 31 ಕೋಟಿ ರು.ವೆಚ್ಚದ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಬೆಳ್ಳೂರು ಹೋಬಳಿ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಬೆಳ್ಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ದಾಸನಕೆರೆಯನ್ನು 25 ಕೋಟಿ ರು.ವೆಚ್ಚದಲ್ಲಿ ಹಾಗೂ ಬೊಮ್ಮನಹಳ್ಳಿ ಕೆರೆಯನ್ನು 10 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ, ಬೆಳ್ಳೂರು ಆಸುಪಾಸಿನ ಗ್ರಾಮಗಳ ರಸ್ತೆ ಅಭಿವೃದ್ಧಿ ಪಡಿಸಲು 7 ಕೋಟಿ ರು. ವೆಚ್ಚದ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದೆ. ತಿಂಗಳೊಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.ಹೊಸ ಕಟ್ಟಡಗಳ ನಿರ್ಮಾಣ:
ಬೆಳ್ಳೂರು ಪಟ್ಟಣ ಪಂಚಾಯ್ತಿ ಕಚೇರಿಗೆ ಹೊಸ ಕಟ್ಟಡ ಹಾಗೂ ಪೊಲೀಸ್ ಠಾಣೆ ಪಕ್ಕದಲ್ಲಿ ನಾಡ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಬೆಳ್ಳೂರಿನಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಗುರುತಿಸಿರುವ 1.30 ಎಕರೆ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ಸಾರಿಗೆ ಇಲಾಖೆಗೆ ಹಸ್ತಾಂತರಿಸಿದ ತಕ್ಷಣ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ. ಮುಂದಿನ ಮೂರು ವರ್ಷದೊಳಗೆ ಈ ಎಲ್ಲಾ ಕಟ್ಟಡಗಳನ್ನು ನಿರ್ಮಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು ಎಂದು ಭರವಸೆ ನೀಡಿದರು.ಚಾಲನಾ ತರಬೇತಿ ಕೇಂದ್ರಕ್ಕೆ ಭೂಮಿ ಹಸ್ತಾಂತರ:ನಿರುದ್ಯೋಗಿ ಯುವಕರಿಗೆ ವಾಹನ ಚಾಲನಾ ತರಬೇತಿ ನೀಡಲು ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ವಾಹನ ಚಾಲನಾ ತರಬೇತಿ ಕೇಂದ್ರ ಸ್ಥಾಪಿಸುವ ಸಲುವಾಗಿ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಮದ ಬಳಿ 9.5 ಎಕರೆ ಭೂಮಿಯನ್ನು ಗುರುತಿಸಲಾಗಿತ್ತು. ಆ ಜಾಗವನ್ನು ದುರಸ್ತು ಮಾಡಿ ಕಂದಾಯ ಇಲಾಖೆ ಅಧಿಕಾರಿಗಳಿಂದ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಇಂದು ಹಸ್ತಾಂತರಿಸಲಾಗುತ್ತಿದೆ. ಈ ಜಾಗದಲ್ಲಿ ಯುವಕರಿಗೆ ತರಬೇತಿ ನೀಡುವ ದೊಡ್ಡ ಪ್ರಮಾಣದ ತರಬೇತಿ ಕೇಂದ್ರ ನಿರ್ಮಾಣವಾಗಲಿದೆ. ತಾಲೂಕು ಹಾಗೂ ಜಿಲ್ಲೆಯ ಯುವಕರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದರು.
ತಾಲೂಕು ಕಚೇರಿಯಲ್ಲಿ ಪುರಾತನ ಕಾಲದಿಂದಿರುವ ರೈತರ ಜಮೀನಿಗೆ ಸಂಬಂಧಿಸಿದ ಆಸ್ತಿ ಪತ್ರಗಳು ಹಾಗೂ ಇನ್ನಿತರೆ ದಾಖಲೆಗಳನ್ನು ಡಿಜಟಲೀಕರಣ ಮಾಡುವ ಭೂ ಸುರಕ್ಷಾ ಯೋಜನೆಗೆ ಇಂದು ಚಾಲನೆ ನೀಡಲಾಗಿದೆ. ಇದರಿಂದ ಯಾವುದೇ ಹಳೆಯ ಭೂ ದಾಖಲೆಗಳನ್ನು ಮುಂದೆ ಕಳೆದುಹಾಕುವುದು, ತಿದ್ದುವುದು ತಪ್ಪುತ್ತದೆ ಎಂದರು.ಬೆಳ್ಳೂರು ಪಟ್ಟಣ ವ್ಯಾಪ್ತಿ ಭಾಗದ ಜನರ ಅನುಕೂಲಕ್ಕಾಗಿ ಶೀಘ್ರದಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗುವುದು. ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಲಿಗೆರೆ ಕ್ರಾಸ್‌ನಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಚಿಂತನೆ ನಡೆಸಲಾಗಿದೆ ಎಂದರು.