ನಗರದ ಪೇಯಿಂಗ್‌ ಗೆಸ್ಟ್‌ ಕೇಂದ್ರಗಳ ಮೇಲೆ ನಿಯಂತ್ರಣ : ಪ್ರತಿ ನಿವಾಸಿಗೆ 70 ಚ.ಅಡಿ ಜಾಗ ಕಡ್ಡಾಯ

| Published : Aug 10 2024, 01:33 AM IST / Updated: Aug 10 2024, 07:21 AM IST

Bengaluru Paying guest guidelines
ನಗರದ ಪೇಯಿಂಗ್‌ ಗೆಸ್ಟ್‌ ಕೇಂದ್ರಗಳ ಮೇಲೆ ನಿಯಂತ್ರಣ : ಪ್ರತಿ ನಿವಾಸಿಗೆ 70 ಚ.ಅಡಿ ಜಾಗ ಕಡ್ಡಾಯ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಪೇಯಿಂಗ್‌ ಗೆಸ್ಟ್‌ (ಪಿಜಿ) ಕೇಂದ್ರಗಳ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಬಿಬಿಎಂಪಿಯಿಂದ 10 ಅಂಶಗಳ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಒಂದು ವೇಳೆ ಮಾರ್ಗಸೂಚಿಯ ಅಂಶಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

 ಬೆಂಗಳೂರು :  ನಗರದ ಪೇಯಿಂಗ್‌ ಗೆಸ್ಟ್‌ (ಪಿಜಿ) ಕೇಂದ್ರಗಳ ಮೇಲೆ ನಿಯಂತ್ರಣ ಹೇರುವ ಸಲುವಾಗಿ ಬಿಬಿಎಂಪಿಯಿಂದ 10 ಅಂಶಗಳ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಒಂದು ವೇಳೆ ಮಾರ್ಗಸೂಚಿಯ ಅಂಶಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪಿಜಿ ಕೇಂದ್ರಗಳ ಸುರಕ್ಷತೆ ಮತ್ತು ಅವುಗಳ ಮೇಲೆ ನಿಗಾವಹಿಸಲು ಹಾಗೂ ಪಿಜಿ ಕೇಂದ್ರಗಳಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಪಿಜಿ ಕೇಂದ್ರಗಳಲ್ಲಿ ವಸತಿ ಸೇವೆ ಪಡೆಯುವವರ ಅನುಕೂಲಕ್ಕಾಗಿ ಕಡ್ಡಾಯವಾಗಿ ಇರಬೇಕಾದ ಅಂಶಗಳನ್ನೂ ಮಾರ್ಗಸೂಚಿಯಲ್ಲಿ ಸೇರಿಸಲಾಗಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪಿಜಿ ಕೇಂದ್ರಗಳಿಗೆ ಸೂಚಿಸಲಾಗಿದೆ.

ಪಿಜಿ ಕೇಂದ್ರಗಳು ಮಾರ್ಗಸೂಚಿಯಲ್ಲಿರುವ ಅಂಶಗಳನ್ನು ಅಳವಡಿಸಿಕೊಂಡಿವೆಯೇ ಎಂಬ ಕುರಿತಂತೆ ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವೀಕ್ಷಕರು ತಮ್ಮ ಕಾರ್ಯಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿ ಆರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು. ಒಂದು ವೇಳೆ ಮಾರ್ಗಸೂಚಿ ಪಾಲನೆ ಮಾಡದಿದ್ದರೆ ಅಂತಹ ಪಿಜಿ ಕೇಂದ್ರಗಳ ವಿರುದ್ಧ ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 307 ಮತ್ತು 308ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಮಾರ್ಗಸೂಚಿಯಲ್ಲಿನ ಅಂಶಗಳು

1.ಪಿಜಿ ಕೇಂದ್ರಗಳ ಪ್ರವೇಶ/ನಿರ್ಗಮನ ದ್ವಾರ ಮತ್ತು ಆವರಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಹಾಗೂ ಅದರ ದೃಶ್ಯಾವಳಿಗಳನ್ನು 90 ದಿನಗಳವರೆಗೆ ಸಂರಕ್ಷಿಸಬೇಕು.

2.ಪಿಜಿ ಕೇಂದ್ರಗಳಲ್ಲಿ ಪ್ರತಿಯೊಬ್ಬ ನಿವಾಸಿಯ ವಾಸಕ್ಕೆ ತಲಾ 70 ಚದರ ಅಡಿಗಳ ಜಾಗ ನೀಡಬೇಕು.

3.ಸ್ವಚ್ಛತೆ ಮತ್ತು ನೈರ್ಮಲ್ಯತೆ ಕಾಪಾಡಬೇಕು.

4.ಶುದ್ಧ ಕುಡಿಯುವ ನೀರು ನೀಡಬೇಕು.

5.ಪಿಜಿ ಕೇಂದ್ರಗಳು ಉದ್ದಿಮೆ ಪರವಾನಗಿ ಪಡೆದ 3 ತಿಂಗಳಲ್ಲಿ, ತನ್ನ ಅಡುಗೆ ಮನೆಯ ಆಹಾರ ಗುಣಮಟ್ಟ ಕುರಿತು ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆಯಬೇಕು.

6.ದಿನದ 24 ಗಂಟೆಯೂ ಕನಿಷ್ಠ ಒಬ್ಬ ಭದ್ರತಾ ಸಿಬ್ಬಂದಿ ನೇಮಿಸಬೇಕು.

7.ಪಿಜಿ ಕೇಂದ್ರಗಳು ಉದ್ದಿಮೆ ಪರವಾನಗಿ ಪಡೆಯುವುದಕ್ಕೂ ಮುನ್ನ ಅಗ್ನಿ ಸುರಕ್ಷತಾ ಕ್ರಮ ಅಳವಡಿಸಿರುವ ಕುರಿತು ಸಕ್ಷಮ ಪ್ರಾಧಿಕಾರದಿಂದ ಪ್ರಮಾಣಪತ್ರ ಪಡೆಯಬೇಕು.

8.ಬಿಬಿಎಂಪಿ ಸಹಾಯವಾಣಿ ಸಂಖ್ಯೆ, ಪೊಲೀಸ್‌ ಇಲಾಖೆ ಸಹಾಯವಾಣಿ ಸಂಖ್ಯೆ ಸೇರಿದಂತೆ ಇನ್ನಿತರ ತುರ್ತು ಸೇವೆಗಳ ಮೊಬೈಲ್‌ ಸಂಖ್ಯೆಯನ್ನು ಪ್ರದರ್ಶಿಸಬೇಕು.

9.ಪ್ರಥಮ ಚಿಕಿತ್ಸಾ ಪಟ್ಟಿ ಇಡಬೇಕು.

10.ಘನತ್ಯಾಜ್ಯ ಸಮರ್ಪಕವಾಗಿ ವಿಂಗಡಿಸಿ, ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು.