ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಮೇ 20ರಂದು ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಹಮ್ಮಿಕೊಂಡಿರುವ ಸಮರ್ಪಣೆ ಸಂಕಲ್ಪ ಸಮಾವೇಶಕ್ಕೆ ಬಳ್ಳಾರಿ ಜಿಲ್ಲೆಯಿಂದ 70 ಸಾವಿರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನಪರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದ ಹಿನ್ನೆಲೆ ಪಕ್ಷದಿಂದ ಬಹುದೊಡ್ಡ ಸಂಖ್ಯೆಯ ಸಮಾವೇಶ ಆಯೋಜಿಸಲಾಗಿದೆ ಎಂದರು.ಹೊಸಪೇಟೆಗೆ ತೆರಳುವ ಪಕ್ಷದ ಕಾರ್ಯಕರ್ತರು ಹಾಗೂ ಸಿದ್ಧರಾಮಯ್ಯನವರ ಅಭಿಮಾನಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. 300ಕ್ಕೂ ಅಧಿಕ ಬಸ್‌ಗಳು, 100 ಖಾಸಗಿ ಟ್ರ್ಯಾಕ್ಸ್‌ಗಳಲ್ಲಿ ಜನರು ಹೊಸಪೇಟೆಗೆ ತೆರಳಲಿದ್ದಾರೆ. ಇದಲ್ಲದೆ, ಬಳ್ಳಾರಿ ನಗರ ಹಾಗೂ ಗ್ರಾಮೀಣ ಕ್ಷೇತ್ರದಿಂದ ಸಾವಿರಾರು ಯುವಕರು ಬೈಕ್‌ಗಳ ಮೂಲಕ ಹೊಸಪೇಟೆಗೆ ತೆರಳುತ್ತಿದ್ದಾರೆ. ಬಳ್ಳಾರಿಯಿಂದ ತೆರಳುವ ಜನರಿಗೆ ಊಟ, ಉಪಾಹಾರ, ಕುಡಿವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಹುಮಾಯೂನ್ ಖಾನ್ ಹಾಗೂ ವೆಂಕಟೇಶ್ ಹೆಗಡೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಿಂದುಳಿದ, ದಲಿತ ಸಮುದಾಯಗಳ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಲಾಗಿದೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳಿಂದ ಬಡ ಹಾಗೂ ಮಧ್ಯಮ ವರ್ಗದ ಬದುಕಿಗೆ ಹೆಚ್ಚು ಆಸರೆಯಾಗಿದೆ. ಕೇಂದ್ರ ಸರ್ಕಾರ ಕರ್ನಾಟಕದ ಪ್ರಗತಿಗೆ ಸ್ಪಂದಿಸುತ್ತಿಲ್ಲ. ಕೇಂದ್ರದಿಂದ ಬರಬೇಕಾದ ಅನುದಾನ ಸಮರ್ಪಕವಾಗಿ ನೀಡುತ್ತಿಲ್ಲ. ಪದೇ ಪದೇ ಕೇಂದ್ರ ಸರ್ಕಾರಕ್ಕೆ ಹಣ ನೀಡಿ ಎಂದು ಕೇಳುವುದಾಗಿದೆ. ಆದಾಗ್ಯೂ ಕೇಂದ್ರವು ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಇದು ಸರಿಯಾದ ಕ್ರಮವಲ್ಲ. ಕೇಂದ್ರ ರಾಜ್ಯಕ್ಕೆ ನೀಡಬೇಕಾದ ಅನುದಾನದ ಪಾಲನ್ನು ನೀಡಬೇಕು ಎಂದು ಒತ್ತಾಯಿಸಿದರು.ಹೊಸಪೇಟೆಯಲ್ಲಿ ಜರುಗುತ್ತಿರುವ ಸಮಾವೇಶ ಯಶಸ್ವಿಗೊಳಿಸಲು ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಎಲ್ಲ ಪ್ರತಿನಿಧಿಗಳು ಹತ್ತಾರು ಸಭೆಗಳನ್ನು ನಡೆಸಿ, ಜನರಿಗೆ ಸರ್ಕಾರದ ಯೋಜನೆಗಳು ಹಾಗೂ ಸಮಾವೇಶದ ಮಹತ್ವ ಕುರಿತು ತಿಳಿಸಲಾಗಿದೆ. ಬೂತ್ ವಾರು ಸಭೆಗಳನ್ನು ಸಹ ನಡೆಸಲಾಗಿದೆ ಎಂದು ತಿಳಿಸಿದರು.ಪಕ್ಷದ ಮುಖಂಡರಾದ ಪಿ.ಗಾದೆಪ್ಪ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಈ.ಚಿದಾನಂದಪ್ಪ, ಮಾಜಿ ಮೇಯರ್ ರಾಜೇಶ್ವರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಾಗಭೂಷಣಗೌಡ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಶ್ರೀಕಾಂತ್ ಸೇರಿದಂತೆ ಪಕ್ಷದ ಮುಖಂಡರು ಸುದ್ದಿಗೋಷ್ಠಿಯಲ್ಲಿದ್ದರು.