ಜಿಲ್ಲಾಡಳಿತದಿಂದ 70 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆ

| Published : Nov 02 2025, 03:45 AM IST

ಸಾರಾಂಶ

70ನೇ ಕನ್ನಡ ರಾಜ್ಯೋತ್ಸವ ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಜರುಗಿತು.

ಕನ್ನಡಪಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲಾಡಳಿತ ವತಿಯಿಂದ 70 ನೇ ಕನ್ನಡ ರಾಜ್ಯೋತ್ಸವ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜರುಗಿತು. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಕನ್ನಡಾಂಬೆಗೆ ಪುಷ್ಪಾರ್ಚನೆ ಹಾಗೂ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ದೇಶದಲ್ಲಿ ಕನ್ನಡ ಭಾಷೆಗೆ ಜ್ಞಾನಪೀಠ ಪ್ರಶಸ್ತಿ ಹೆಚ್ಚು ದೊರೆತಿರುವುದು ವಿಶೇಷವೇ ಸರಿ. ಇಂದು ಹೆಮ್ಮೆಯಿಂದ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಹಿಂದೆ ನಮ್ಮ ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಮಹನೀಯರ ಹೋರಾಟವಿದೆ. ಸಹಸ್ರಾರು ಜನ ಕನ್ನಡಿಗರು ಆಡಳಿತಾತ್ಮಕ ಹಾಗೂ ಭಾವನಾತ್ಮಕ ಐಕ್ಯತೆಗಾಗಿ ಹಗಲಿರುಳು ದುಡಿದಿದ್ದಾರೆ. ಅಂತಹ ಎಲ್ಲಾ ಮಹಾನ್ ಚೇತನರನ್ನು ಅತ್ಯಂತ ಕೃತಜ್ಞತೆಯಿಂದ ಸ್ಮರಿಸಬೇಕೆಂದರು.

ನಮ್ಮೆಲ್ಲರ ನಿತ್ಯೋತ್ಸವವಾಗಬೇಕು:

ಕನ್ನಡ, ಕರ್ನಾಟಕ, ಕರುನಾಡು ಎಂಬುದು ಕೇವಲ ಬರೀ ನೆಲ ಮತ್ತು ಭಾಷೆಯಲ್ಲ. ಅದೊಂದು ಕನ್ನಡಿಗರ ಭಾವನೆ ಮತ್ತು ಬಾಂಧವ್ಯವಾಗಿದೆ. ಕನ್ನಡ ರಾಜ್ಯೋತ್ಸವ ನಮ್ಮೆಲ್ಲರ ನಿತ್ಯೋತ್ಸವವಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಡಗು ಜಿಲ್ಲೆ ಹಾಗೂ ಕನ್ನಡ ನಾಡಿನ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ನಾಡು-ನುಡಿಗೆ ವಿಶೇಷ ಆದ್ಯತೆ ನೀಡಿರುವುದು ವಿಶೇಷವಾಗಿದೆ ಎಂದರು.

ಒಟ್ಟಾರೆ ಯುವ ಜನರು ಕನ್ನಡ ನಾಡು-ನುಡಿ, ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯ ನೈಜ ವಾರಸುದಾರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಆಶಿಸುತ್ತಾ, ಕೊಡಗಿನ ಜನತೆಗೆ ಭುವನೇಶ್ವರಿ ತಾಯಿ ಕಾವೇರಿ ಮಾತೆ ಹಾಗೂ ಇಗ್ಗುತ್ತಪ್ಪ ದೇವರ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

10 ಕೋಟಿ ಅನುದಾನ ಲಭ್ಯವಿದೆ.:

ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಜಿಲ್ಲಾಧಿಕಾರಿ ಅವರ ಪಿಡಿ ಖಾತೆಯಲ್ಲಿ 10 ಕೋಟಿ ಅನುದಾನ ಲಭ್ಯವಿದೆ. ಕೊಡಗು ಜಿಲ್ಲೆಯಲ್ಲಿ 03 ಮಾನವಹಾನಿ ಸಂಭವಿಸಿದ್ದು, ತಲಾ 5 ಲಕ್ಷಗಳನ್ನು ಸಂಬಂಧಪಟ್ಟವರಿಗೆ ಪಾವತಿಸಲಾಗಿರುತ್ತದೆ. 52 ಮನೆಗಳು ಪೂರ್ಣಹಾನಿಯಾಗಿವೆ, 194 ಮನೆಗಳು ತೀವ್ರಹಾನಿ ಹಾಗೂ 88 ಮನೆಗಳು ಭಾಗಶಃ ಹಾನಿಯಾಗಿವೆ. ಮಳೆಯಿಂದಾಗಿ ಜಿಲ್ಲೆಯಲ್ಲಿ 28 ಜಾನುವಾರುಗಳಿಗೆ ಹಾನಿಯಾಗಿದ್ದು ಸಂಬಂಧಪಟ್ಟವರಿಗೆ ಅಗತ್ಯ ಪರಿಹಾರ ಪಾವತಿಸಲಾಗಿದೆ ಎಂದು ಇದೇ ಸಂದರ್ಭ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ರಾಜ್ಯೋತ್ಸವ ಅಂಗವಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕನ್ನಡ ವಿಷಯದಲ್ಲಿ 125ಕ್ಕೆ 125 ಅಂಕ ಗಳಿಸಿದ ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯ ಜನಿಫರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಬೋರಮ್ಮ ಕಣ್ಣೂರು, ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಲಾಸ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಥ ಸಂಚಲನ : ಎನ್ ಸಿಸಿ ವಿಭಾಗದ ಪಥ ಸಂಚಲನದಲ್ಲಿ ಗಾಳಿಬೀಡು ಪಿಎಂಶ್ರೀ ಜವಾಹರ್ ನವೋದಯ ಶಾಲೆ ಪ್ರಥಮ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ದ್ವಿತೀಯ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆ ತೃತೀಯ ಹಾಗೂ ಇತರೆ ವಿಭಾಗದಲ್ಲಿ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸೇವಾದಳ ಪ್ರಥಮ, ಶ್ರೀ ರಾಜೇಶ್ವರಿ ಶಾಲೆ ಸ್ಕೌಟ್ಸ್ ದ್ವಿತೀಯ, ಸಂತ ಮೈಕಲರ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಸೇವಾದಳ ತಂಡ ತೃತೀಯ ಬಹುಮಾನ ಗಳಿಸಿತು.

ರಾಜ್ಯೋತ್ಸವ ಅಂಗವಾಗಿ ಮೈದಾನದಲ್ಲಿ ಕನ್ನಡ ನಾಡು ನುಡಿಗೆ ಸಂಬಂಧಿಸಿದಂತೆ ಬಾಲಕರ ಬಾಲ ಮಂದಿರ, ಸಂತ ಜೋಸೆಫರ ಸಂಯುಕ್ತ ಪ್ರೌಢಶಾಲೆ, ಸಂತ ಮೈಕಲರ ಪ್ರೌಢಶಾಲೆ, ಕ್ರೆಸೆಂಟ್ ಶಾಲೆ, ಬಾಲಕಿಯರ ಬಾಲ ಮಂದಿರ, ಬ್ಲಾಸಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮಹರ್ಷಿ ವಾಲ್ಮಿಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ, ಕೊಡಗು ವಿದ್ಯಾಲಯ ಶಾಲೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ಅರಣ್ಯ ಇಲಾಖೆ, ಮಡಿಕೇರಿ ನಗರಸಭೆ ತೋಟಗಾರಿಕೆ, ಆರೋಗ್ಯ, ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಮಾಹಿತಿಯ ಸ್ಥಬ್ದ ಚಿತ್ರಗಳ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.