ಬಿರುಗಾಳಿಗೆ 71 ಎಕರೆ ಬಾಳೆ ನಾಶ

| Published : May 12 2024, 01:22 AM IST

ಸಾರಾಂಶ

ಹನೂರು ತಾಲೂಕಿನಲ್ಲಿ ಮಳೆ ಬಿರುಗಾಳಿಗೆ 71 ಎಕರೆ ಬಾಳೆ, 15 ಮನೆ, 4 ಎಕರೆ ಮುಸುಕಿನ ಜೋಳ, ಸಿಡಿಲಿಗೆ 6 ಜಾನುವಾರು ಬಲಿಯಾಗಿವೆ. ಬೆಳೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಹನೂರು

ಹನೂರು ತಾಲೂಕಿನಲ್ಲಿ ಮಳೆ ಬಿರುಗಾಳಿಗೆ 71 ಎಕರೆ ಬಾಳೆ, 15 ಮನೆ, 4 ಎಕರೆ ಮುಸುಕಿನ ಜೋಳ, ಸಿಡಿಲಿಗೆ 6 ಜಾನುವಾರು ಬಲಿಯಾಗಿವೆ. ಬೆಳೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ.

ಹನೂರು ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ಮತ್ತು ಭಾರಿ ಬಿರುಗಾಳಿಗೆ ಸಿಲುಕಿ ತಾಲೂಕಿನ ವಿವಿಧ ಹೋಬಳಿಯ ರೈತರ ಜಮೀನುಗಳಲ್ಲಿ ಸಾಧಾರಣ ಮಳೆಯಾದರೂ ಸಹ ಭಾರಿ ಬಿರುಗಾಳಿಗೆ 71 ಎಕರೆ ಬಾಳೆ ಫಸಲು, 4 ಎಕರೆ ಮುಸುಕಿನ ಜೋಳ, 15 ಮನೆಗಳು ಹಾನಿಯಾಗಿವೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕುವಾರು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಭಾರಿ ಬಿರುಗಾಳಿ ಮಳೆಯಿಂದ ಲಕ್ಷಾಂತರ ರು. ವೆಚ್ಚ ಮಾಡಿ ರೈತರು ಬೆಳೆದಿರುವ ಫಸಲು ಬಿರುಗಾಳಿಗೆ ಸಿಲುಕಿ ನೆಲ ಕಚ್ಚಿರುವ ಬಗ್ಗೆ ಅಧಿಕಾರಿಗಳ ತಂಡ ತೆರಳಿ ಪರಿಶೀಲಿಸಿದ್ದಾರೆ. ರೈತರಿಗೆ ಪ್ರಕೃತಿ ವಿಕೋಪದಡಿ ಸಿಗುವ ಪರಿಹಾರವನ್ನು ನೀಡಲು ತಾಲೂಕು ದಂಡಾಧಿಕಾರಿಗಳ ಮುಖಾಂತರ ಡಿಸಿಗೆ ಪರಿಹಾರಕ್ಕಾಗಿ ವರದಿ ಸಲ್ಲಿಸಿದ್ದಾರೆ. ಆರು ಜಾನುವಾರು ಸಿಡಿಲಿಗೆ ಬಲಿ:

ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಗುಡುಗು ಸಹಿತ ಬಿರುಗಾಳಿ ಸಿಡಿಲಿಗೆ ವಿವಿಧ ಗ್ರಾಮಗಳಲ್ಲಿ ಆರು ಜಾನುವಾರು ಬಲಿಯಾಗಿವೆ. ಪಶು ಸಂಗೋಪನ ಇಲಾಖೆ ಅಧಿಕಾರಿಗಳು ರೈತರಿಗೆ ಪರಿಹಾರ ನೀಡಲು ವೈದ್ಯಕೀಯ ಮರಣೋತ್ತರ ಪರೀಕ್ಷೆ ನಡೆಸಿ ತಾಲೂಕು ದಂಡಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ತಾಲೂಕಿನಲ್ಲಿ ಮಳೆ ಬಿರುಗಾಳಿಗೆ ಸಿಲುಕಿ ನೆಲಕಚ್ಚಿರುವ ಬಾಳೆ ಹಾಗೂ ಮುಸುಕಿನ ಜೋಳ ಸೇರಿದಂತೆ ವಿವಿಧ ಗ್ರಾಮಗಳ ಮತ್ತು ರೈತರ ಜಮೀನುಗಳಲ್ಲಿ ವಾಸ ಮಾಡುವ ಮನೆಗಳು ಸಹ ಬಿರುಗಾಳಿಗೆ ಸಿಲುಕಿ ಮೇಲ್ಚಾವಣಿ ಸಂಪೂರ್ಣವಾಗಿ ಹಾನಿಯಾಗಿವೆ. ಈ ಬಗ್ಗೆ ಅಧಿಕಾರಿಗಳು ಬರಗಾಲದಿಂದ ತತ್ತರಿಸಿರುವ ಅಲ್ಪ ಸ್ವಲ್ಪ ನೀರಿನಲ್ಲಿ ಬೆಳೆಯಲಾಗಿರುವ ಫಸಲು ನಷ್ಟ ಉಂಟಾಗಿದ್ದು, ರೈತರಿಗೆ ತುರ್ತಾಗಿ ಸರ್ಕಾರ ಸೂಕ್ತ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ರೈತ ಸಂಘಟನೆ ಸರ್ಕಾರಕ್ಕೆ ಒತ್ತಾಯಿಸಿದೆ.

ಕಳೆದ ಒಂದು ವಾರದಿಂದ ಬಿರುಗಾಳಿ ಮಳೆಗೆ 71 ಎಕರೆ ಬಾಳೆ, 15 ಮನೆ ಮತ್ತು 4 ಎಕರೆ ಮುಸುಕಿನ ಜೋಳ, ಆರು ಜಾನುವಾರು ಸಾವನ್ನಪ್ಪಿವೆ. ಕಂದಾಯ ಹಾಗೂ ತೋಟಗಾರಿಕೆ ಕೃಷಿ ಅಧಿಕಾರಿ ಜಂಟಿ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ನೀಡಲು ಸಲ್ಲಿಸಿದ್ದಾರೆ. ರೈತರಿಗೆ ಕೂಡಲೇ ಸರ್ಕಾರದ ಪ್ರಕೃತಿ ವಿಕೋಪದಡಿ ಸಿಗುವ ಪರಿಹಾರ ಯೋಜನೆ ಅಡಿ ಬೆಳೆವಾರು ಮತ್ತು ಮನೆಗಳ ಹಾನಿಯಾಗಿರುವ ಬಗ್ಗೆ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಸಹ ವರದಿ ನೀಡಲಿದ್ದಾರೆ. ಹೀಗಾಗಿ ತುರ್ತಾಗಿ ರೈತರಿಗೆ ಮತ್ತು ಮಳೆ ಬಿರುಗಾಳಿಗೆ ನಷ್ಟ ಉಂಟಾಗಿರುವ ಫಲಾನುಭವಿಗಳಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಗುರುಪ್ರಸಾದ್, ತಾಲೂಕು ದಂಡಾಧಿಕಾರಿಗಳು, ಹನೂರು

ತಾಲೂಕಿನಲ್ಲಿ ಮಳೆ ಬಿರುಗಾಳಿಗೆ ಬಾಳೆ ಫಸಲು ಮತ್ತು ರೈತರ ತೋಟದ ಮನೆಗಳು ಸೇರಿದಂತೆ ಹಾನಿಯಾಗಿರುವ ಬಗ್ಗೆ ಗ್ರಾಮಗಳಿಗೆ ತೆರಳಿ ಪರಿಶೀಲಿಸಿ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ರೈತರಿಗೆ ಸಿಗಬೇಕಾದ ಪರಿಹಾರ ಹಾಗೂ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ಸಂಬಂಧಪಟ್ಟ ಇಲಾಖೆ ನಷ್ಟದ ಅಂದಾಜು ಪಟ್ಟಿ ತಯಾರಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. 6 ಜಾನುವಾರು ಸಹ ಸಾವನ್ನಪ್ಪಿವೆ. ಪ್ರಕೃತಿ ವಿಕೋಪದಡಿ ಸಿಗುವ ಶೀಘ್ರ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ.-ಎಂ.ಆರ್. ಮಂಜುನಾಥ್, ಹನೂರು ಶಾಸಕ