ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆನರಗುಂದ ಮತಕ್ಷೇತ್ರ ಸೇರಿದಂತೆ ಜಿಲ್ಲೆಯಾದ್ಯಂತ 7 ಮತಕ್ಷೇತ್ರಗಳಲ್ಲಿ ಮಂಗಳವಾರ ನಡೆದ ಚುನಾವಣೆಯಲ್ಲಿ ಸಂಜೆ 6ರ ನಂತರ ಅಂದಾಜು ಒಟ್ಟು 72.64 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ. ತಿಳಿಸಿದ್ದಾರೆ.
ಈ ಮೂಲಕ ಕಳೆದ ಬಾರಿಗಿಂತ ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಶೇ.3.74ರಷ್ಟು ಹೆಚ್ಚು ಮತದಾನವಾಗಿದೆ. ತೇರದಾಳ ಮತಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.77.2ರಷ್ಟು ಮತದಾನವಾದರೆ, ಹುನಗುಂದ ಮತಕ್ಷೇತ್ರದಲ್ಲಿ ಅತಿ ಕಡಿಮೆ ಶೇ.68.02 ರಷ್ಟು ಮತದಾನವಾಗಿದೆ.2019ರ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶೇ.68.90ರಷ್ಟು ಮತದಾನವಾಗಿತ್ತು. ಕಳೆದ ಚುನಾವಣೆಗಿಂತ ಪ್ರಸಕ್ತ ಚುನಾವಣೆಯಲ್ಲಿ ಪ್ರತಿಶತ 3.74ರಷ್ಟು ಮತದಾನ ಹೆಚ್ಚಳವಾಗಿರುವುದು ಕಂಡುಬಂದಿದ್ದು, ಜಿಲ್ಲೆಯಾದ್ಯಂತ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿ.ಪಂ ಸಿಇಒ ಶಶಿಧರ ಕುರೇರ ನೇತೃತ್ವದಲ್ಲಿ ನಡೆದ ಸ್ವೀಪ್ ಚಟುವಟಿಕೆಗಳು ಯಶಸ್ವಿಯಾಗಿವೆ ಎಂದು ತಿಳಿಸಿದ್ದಾರೆ.
ಬೆಳಗ್ಗೆಯಿಂದಲೇ ವೃದ್ಧರು, ವಿಶೇಷಚೇತನರು, ಮಹಿಳೆಯರು, ಯುವಮತದಾರರು ಉತ್ಸುಕರಾಗಿ ಮತಗಟ್ಟೆಗಳಿಗೆ ಆಗಮಿಸುತ್ತಿರುವುದು ಕಂಡುಬಂತು. ಬಹುತೇಕ ಮತಗಟ್ಟೆಗಳಲ್ಲಿ ಮಹಿಳಾ ಮತದಾರರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದ್ದು, ಮತದಾರರಿಗೆ ವಿಶ್ರಾಂತಿ ಕೊಠಡಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಪುರುಷ ಮತದಾರರಕ್ಕಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡುಬಂದವು.ಬೀಳಗಿ ಮತಕ್ಷೇತ್ರದ ಹೂಲಗೇರಿ ಗ್ರಾಮದಲ್ಲಿ ಮ.ಸಂ.220 ರಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಒಟ್ಟು 222 ಜನ ಮತಗಳು ಚಲಾವಣೆಗೊಂಡಿದ್ದವು. 110 ಪುರುಷರು, 112 ಜನ ಮಹಿಳೆಯರು ಮತ ಚಲಾಯಿಸಿದ್ದರು. ಮ.ಸಂ. 221 ರಲ್ಲಿ 691 ಪೈಕಿ 281, ಬಾದಾಮಿ ಮತಕ್ಷೇತ್ರದ ಕಟಗೇರಿ ಮ.ಸಂ.7ರಲ್ಲಿ 12 ಗಂಟೆ ವೇಳೆಗೆ 784 ಪೈಕಿ 259, ಮ.ಸಂ.5ರಲ್ಲಿ 908 ಮತದಾರರ ಪೈಕಿ 282, ಮ.ಸಂ.6ರಲ್ಲಿ 807 ಪೈಕಿ 254, ತಿಮ್ಮಸಾಗರದಲ್ಲಿ ಮಸಂ.15ರಲ್ಲಿ 856 ಪೈಕಿ 302, ಮ.ಸಂ.16ರಲ್ಲಿ 508 ಪೈಕಿ 241, ಲಿಂಗಾಪುರ ಗ್ರಾಮದ ಮ.ಸಂ.12ರಲ್ಲಿ 1057 ಪೈಕಿ 347 ಮತ ಚಲಾವಣೆಗೊಂಡಿದ್ದವು. ಪುರುಷರಿಗಿಂತ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಿರುವುದು ವಿಶೇಷ.
ಬೆಳಗ್ಗೆ 7 ರಿಂದ 9 ಗಂಟೆಯಲ್ಲಿ ಶೇ.8.59ರಷ್ಟು ಮತದಾನವಾದರೆ, 11ರವರೆಗೆ ಶೇ.23.80ರಷ್ಟು, ಮಧ್ಯಾಹ್ನ 1ರವರೆಗೆ ಶೇ.42.01ರಷ್ಟು, ಮಧ್ಯಾಹ್ನ 3ರವರೆಗೆ 55.15ರಷ್ಟು, ಸಂಜೆ 5ರವರೆಗೆ ಶೇ.67.57ರಷ್ಟು ಮತದಾನವಾಗಿರುವ ವರದಿಯಾಗಿದೆ. ಸಂಜೆ 5 ಗಂಟೆಯವರೆಗೆ ಜಿಲ್ಲೆಯ ಏಳು ಮತಕ್ಷೇತ್ರಗಳ ಪೈಕಿ ತೇರದಾಳ ಮತಕ್ಷೇತ್ರದಲ್ಲಿ ಹೆಚ್ಚು ಮತದಾನವಾದರೆ, ಬಾಗಲಕೋಟೆ ಮತಕ್ಷೇತ್ರದಲ್ಲಿ ಕಡಿಮೆ ಮತದಾನವಾದ ವರದಿಯಾಗಿದೆ. ಮುಕ್ತ, ಶಾಂತಿಯುವ ಚುನಾವಣೆಗೆ ಜಿಲ್ಲಾಡಳಿತ ಎಲ್ಲ ರೀತಿಯ ಕ್ರಮಕೈಗೊಂಡಿತ್ತು.ಡಿಸಿ, ಸಿಇಒ ವಿಶೇಷ ಮತಗಟ್ಟೆಗಳಿಗೆ ಭೇಟಿ:
ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಬಾಗಲಕೋಟೆ ನವನಗರದ ಮ.ಸಂ.166 ಮತ್ತು 179ರಲ್ಲಿ ಸ್ಥಾಪಿಸಲಾದ ಮಹಿಳಾ ಸಖಿ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಜಿಪಂ ಸಿಇಒ ಮುಚಖಂಡಿ ಎಲ್.ಟಿ-1ರಲ್ಲಿ ಸ್ಥಾಪಿಸಲಾದ ಸಾಂಪ್ರದಾಯಿಕ ಮತಗಟ್ಟೆ, ಬದಾಮಿ ತಾಲೂಕಿನ ಸೂಳಿಕೇರಿ, ಬಾದಾಮಿ, ಚೊಳಚಗುಡ್ಡ, ಗುಡೂರ, ಇಳಕಲ್ಲ, ಹುನಗುಂದ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.ಯುವ ಮತದಾರರಲ್ಲಿ ಉತ್ಸಾಹ:
18 ವರ್ಷ ಪೂರೈಸಿದ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಕರಲ್ಲಿ ಉತ್ಸಾಹ ಕಂಡುಬಂತು. ಗುರುತಿನ ಚೀಟಿಯೊಂದಿಗೆ ಖುಷಿಯಿಂದ ಮತಗಟ್ಟೆಗೆ ಆಗಮಿಸಿದ್ದ ಯುವಮತದಾರರು ಮೊದಲ ಬಾರಿಗೆ ಮತಹಕ್ಕು ಚಲಾಯಿಸುತ್ತಿರುವುದು ಸಂತಸ ತಂದಿದೆ. ಜನಪ್ರತಿನಿಧಿಗಳ ಆಯ್ಕೆಯಲ್ಲಿ ನಾವೂ ಭಾಗಿಯಾಗಿದ್ದಕ್ಕೆ ಖುಷಿಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸುನಗ ಗ್ರಾಮದ ವೈಷ್ಣವಿ ನಾಗರಾಜ ಬೆಂಗಳೂರಿನಿಂದ ಆಗಮಿಸಿ ಮತದಾನ ಮಾಡಿದರು.ಪತ್ನಿ ಸಮೇತ ಸಿಇಒ ಮತ ಚಲಾವಣೆ:
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಶಶಿಧರ ಕುರೇರ ಪತ್ನಿ ಸುಚಿತಾ ಜೊತೆಗೆ ನವನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಇದೇ ಮತಗಟ್ಟೆಯಲ್ಲಿ ಮತಚಲಾಯಿಸಿದರು. ಮತಚಲಾಯಿಸಿದ ನಂತರ ಇತರೆ ಮಹಿಳಾ ಮತದಾರರು ಜಿಲ್ಲಾಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡರು.ವೃದ್ಧರು, ವಿಕಲಚೇನರು, ತೃತೀಯ ಲಿಂಗಿಗಳ ಮತದಾನ:
ವೃದ್ಧರು, ವಿಶೇಷ ಚೇತನರು ಹಾಗೂ ತೃತೀಯ ಲಿಂಗಿಮತದಾರರು ಉತ್ಸುಕತೆಯಿಂದ ಮತದಾನ ಮಾಡಿದರು. ಮತದಾನಕ್ಕೆ ಗ್ರಾಪಂನಲ್ಲಿ ವಾಹನ, ವ್ಹೀಲ್ ಚೇರ್ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯ ಕಲ್ಪಿಸಲಾಗಿತ್ತು. ಬೀಳಗಿ ಎಂಪಿಎಸ್ ಶಾಲೆಯ ಮತಕೇಂದ್ರ 76ರಲ್ಲಿ 104 ವರ್ಷದ ಸಿದ್ದವ್ವ ಜಗ್ಗಲ ಮಹಿಳಾ ಸಖಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರೆ, ಹವೇಲಿಯ ಮ.ಸಂ.91 ರಲ್ಲಿ 95 ವರ್ಷದ ಬೋಜಪ್ಪ ದೊಡಮನಿ, ಕಟಗೇರಿ ಗ್ರಾಮದ ಮ.ಸಂ.6ರಲ್ಲಿ 83 ವರ್ಷದ ರುಕ್ಮವ್ವ ಆನೆಗುಂದಿ ಮತ ಚಲಾಯಿಸಿದರು. ಬೇವಿನಮಟ್ಟಿ, ನಾಗರಾಳ, ಆಡಗಲ್ಲ ಸೇರಿದಂತೆ ಇತರೆ ಗ್ರಾಮದ ತೃತೀಯಲಿಂಗ ಮತದಾರರು ಮತ ಚಲಾಯಿಸಿದರು.ಕ್ಷೇತ್ರವಾರು ಶೇಕಡಾವರು ಮತ ಪ್ರಮಾಣ
ಮುಧೋಳ - ಶೇ.76.35ತೇರದಾಳ ಶೇ.77.02
ಜಮಖಂಡಿ ಶೇ.72.93ಬೀಳಗಿ ಶೇ. 74.51
ಬಾಗಲಕೋಟೆ ಶೇ.66.16ಬಾದಾಮಿ ಶೇ.71.84
ಹುನಗುಂದ ಶೇ. 68.02ನರಗುಂದ ಶೇ. 75.29
ಒಟ್ಟು - ಶೇ.72.64