ಸಾರಾಂಶ
ಗುರುರಾಜ ಗೌಡೂರು
ಲಿಂಗಸುಗೂರು: ತಾಲೂಕಿನಲ್ಲಿ ಕುಡಿಯುವ ನೀರಿಗೆ ಆಸರೆಯಾಗಿದ್ದ ಅಂತರ್ಜಲಮಟ್ಟ ಪಾತಾಳದತ್ತ ಮುಖ ಮಾಡಿದೆ. ಪರಿಣಾಮ 72ಕ್ಕೂ ಅಧಿಕ ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಲಿದೆ.ತಾಲೂಕಿನ ಗೌಡೂರು ಹೊರತುಪಡಿಸಿ ಇನ್ನುಳಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಇದೆ. ಬಿಸಿಲು ಏರುಮುಖವಾಗಿ ಬೋರ್‌ವೆಲ್‌ಗಳಲ್ಲಿ ನೀರು ಪಾತಾಳದತ್ತ ಸಾಗಿದೆ. ಖುಷ್ಕಿ ಪ್ರದೇಶದ ಸರ್ಜಾಪುರ, ಚಿಕ್ಕಹೆಸರೂರು, ಹಿರೇಹೆಸರೂರು, ಅಮರಾವತಿ ನಿಲೋಗಲ್, ಗೆಜ್ಜಲಗಟ್ಟಾ, ಅನ್ವರಿ, ರೋಡಲಬಂಡಾ(ತವಗ), ಕೋಠಾ, ಪೈದೊಡ್ಡಿ, ನಾಗಲಾಪುರ, ಉಪ್ಪಾರನಂದಿಹಾಳ, ಅಮದಿಹಾಳ, ಬಯ್ಯಾಪುರ, ಮಾವಿನಬಾವಿ, ಬನ್ನಿಗೋಳ, ಹೂನೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೀಕರ ಸ್ಥಿತಿ ಎದುರಾಗಲಿದೆ.
ಕೃಷ್ಣಾನದಿ ದಂಡೆಯ ಜಲದುರ್ಗ, ಹಾಲಬಾವಿ, ಚಿಕ್ಕ ಉಪ್ಪೇರಿ, ಯಲಗಟ್ಟಾ, ದೇವರಬುಪೂರದಲ್ಲಿ ಮುಂದಿನ ತಿಂಗಳು ಜನರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಆಡಳಿತ ಸೂಚನೆ ನೀಡಿದೆ. ಜಲದುರ್ಗ ನದಿದಂಡೆಗೆ ಇರುವ ಗ್ರಾಮ. ನೀರಿನ ಮೂಲಕ್ಕೆ ಕೊರತೆ ಇಲ್ಲ. ಆದರೆ ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಆಡಳಿತ ತಯಾರಿಸಿ ನಡೆಸಿರುವುದು ತಿಳಿಯದಾಗಿದೆ.ತಾಲೂಕಿನಲ್ಲಿ 30 ಗ್ರಾಮ ಪಂಚಾಯಿತಿ, 141 ಕಂದಾಯ ಗ್ರಾಮ, 42 ತಾಂಡಾ, 249 ದೊಡ್ಡಿಗಳು ಇವೆ. ಈ ಪೈಕಿ 72 ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಿದ್ದು 9 ಬಾಡಿಗೆ ಬೋರವೆಲ್ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಆಸರೆಯಾದ 10 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಲ್ಲಿ 09 ಬಳಕೆಯಲ್ಲಿ ಇದ್ದು ಒಂದು ಕೆಲಸ ಮಾಡುತ್ತಿಲ್ಲ. 1 ಐಆರ್ ಟ್ಯಾಂಕ್ ಬಳಕೆಯಲ್ಲಿ ಇಲ್ಲ. ಒಟ್ಟು 119 ಮೇಲ್ತೊಟ್ಟಿಗಳು (ಓವರ್ ಹೆಡ್ ಟ್ಯಾಂಕ್) ಇವೆ. 711 ಬೋರ್ವೆಲ್‌ಗಳು ಇವೆ. ಇದರಲ್ಲಿ 87 ಉಪಯೋಗ ಇಲ್ಲದಂತಾಗಿವೆ. 476 ಕಿರು ನೀರಿನ ತೊಟ್ಟಿಗಳು ಇದ್ದು 19 ಸ್ಥಗಿತಗೊಂಡಿವೆ. 91 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 24 ಬಂದ್ ಆಗಿವೆ.
ಟಾಸ್ಕ್‌ಫೋರ್ಸ್‌ಗೆ 50 ಲಕ್ಷ ರು. ಮಂಜೂರಾಗಿದೆ. ಜೆಜೆಎಂ, ಜಿಲ್ಲಾ ಪಂಚಾಯಿತಿ ನಿಧಿಯಡಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ತಾಲೂಕು ಆಡಳಿತ ಯೋಜನೆ ರೂಪಿಸಿದ್ದರೂ ಕೆಲವಡೆ ನೀರಿನ ಮೂಲಗಳ ಇದ್ದರೂ ಸಮರ್ಪಕ ಬಳಕೆ ಇಲ್ಲ.ಭೀಕರ ಬರದಿಂದ ಅಂತರ್ಜಲಮಟ್ಟ ಕುಸಿಯುತ್ತಿದೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ಅಗತ್ಯ ಮಂಜಾಗ್ರತೆ ವಹಿಸಲು ಈಗಾಗಲೆ ಯೋಜನೆ ರೂಪಿಸಲಾಗಿದೆ. ನೀರಿನ ಸಂಪನ್ಮೂಲ ಕೊರತೆ ಆಗಿದೆ. ಸಿಗದೇ ಇದ್ದ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ್ ತಿಳಿಸಿದ್ದಾರೆ.
ಪಕ್ಷಿ ನೋಟಒಟ್ಟು ಗ್ರಾಮ ಪಂಚಾಯಿತಿ - 30
ಒಟ್ಟು ಕಂದಾಯ ಗ್ರಾಮಗಳು -141ತಾಂಡಾ, ದೊಡ್ಡಿಗಳು - 291
ಬಹುಗ್ರಾಮ ಕುಡಿಯುವ ನೀರಿನ ಯೋಜನೆ -10ತಾಲೂಕಿನಲ್ಲಿರುವ ಒಟ್ಟು ಬೋರ್‌ವೆಲ್ - 711
ಸುಸ್ಥಿಯಲ್ಲಿರುವ ಶುದ್ಧ ನೀರು ಘಟಕ - 67